ಯೋಗಕ್ಕಿದೆ ಮನಸ್ಸನ್ನು ಪ್ರಕೃತಿಯೊಂದಿಗೆ ಜೋಡಿಸುವ ಶಕ್ತಿ

KannadaprabhaNewsNetwork |  
Published : Jun 22, 2026, 02:30 AM IST
ಪೋಟೊಗಳು:  | Kannada Prabha

ಸಾರಾಂಶ

ಯೋಗವು ಸಾವಿರಾರು ವರ್ಷಗಳಷ್ಟು ಹಳೆಯದಾದ ಭಾರತದ ಸಂಸ್ಕೃತಿ ಮತ್ತು ಋಷಿಮುನಿಗಳ ಕೊಡುಗೆಯಾಗಿದೆ

ಕೊಪ್ಪಳ: ಮನುಷ್ಯನ ದೇಹ ಮತ್ತು ಮನಸ್ಸನ್ನು ಒಂದಾಗಿಸಿ ಪ್ರಕೃತಿಯೊಂದಿಗೆ ಜೋಡಿಸುವ ಮಹಾನ್ ಶಕ್ತಿ ಯೋಗಕ್ಕಿದೆ ಎಂದು ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲೆಯ ಸರ್ವಯೋಗ ಸಂಸ್ಥೆಗಳ ಸಹಯೋಗದಲ್ಲಿ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆರೋಗ್ಯಕರ ವೃದ್ದಾಪ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಯೋಗ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೂ. 21 ರಂದು ಇಡೀ ವಿಶ್ವವೇ ಯೋಗ ದಿನ ಆಚರಿಸುತ್ತಿದೆ. ಇದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ದಿನವಾಗಿದೆ. ಯೋಗವು ಸಾವಿರಾರು ವರ್ಷಗಳಷ್ಟು ಹಳೆಯದಾದ ಭಾರತದ ಸಂಸ್ಕೃತಿ ಮತ್ತು ಋಷಿಮುನಿಗಳ ಕೊಡುಗೆಯಾಗಿದೆ ಎಂದರು.

ಇಂದಿನ ಆಧುನಿಕ ಯುಗದಲ್ಲಿ ಯೋಗದ ಮಹತ್ವ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇಂದಿನ ಒತ್ತಡದ ಬದುಕು, ಮಾಲಿನ್ಯ ಮತ್ತು ತಪ್ಪು ಜೀವನಶೈಲಿಯಿಂದ ಮನುಷ್ಯ ರೋಗಗಳ ಗೂಡಾಗುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಯೋಗ ನಮಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಯೋಗ ಎಂದರೆ ಕೇವಲ ತೂಕ ಇಳಿಸುವ ಅಥವಾ ದೇಹ ಬಗ್ಗಿಸುವ ಕಸರತ್ತಲ್ಲ, ಅದು ದಿನನಿತ್ಯದ ಆಸನ, ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮನಸ್ಸಿನ ಆತಂಕ, ಖಿನ್ನತೆ ಮತ್ತು ಒತ್ತಡ ದೂರ ಮಾಡಿ ಮಾನಸಿಕ ಶಾಂತಿ ನೀಡುತ್ತದೆ. ಯೋಗ ನಾವು ಕೇವಲ ವರ್ಷಕ್ಕೊಮ್ಮೆ ಜೂ.21 ರಂದು ಮಾತ್ರ ಆಚರಿಸುವ ಹಬ್ಬವನ್ನಾಗಿ ಮಾಡಬಾರದು. ಬದಲಿಗೆ, ನಮ್ಮ ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಯೋಗವು ಭಾರತದ ಭವ್ಯ ಪರಂಪರೆಯ ಪ್ರತೀಕವಾಗಿದೆ. ಪ್ರತಿ ದಿನದ ಯೋಗಾಭ್ಯಾಸ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಯತ್ನದಿಂದ ವಿಶ್ವದಾದ್ಯಂತ ಯೋಗ ದಿನಾಚರಣೆ ಆಚರಿಸುವ ಮೂಲಕ ಯೋಗದ ಮಹತ್ವ ಜಗತ್ತಿಗೆ ತಿಳಿಸಲಾಗಿದೆ. ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರಿಗೂ ಯೋಗ ಬಹಳ ಮುಖ್ಯವಾಗಿದೆ. ಯೋಗ ಭಾರತ365 ಕಾರ್ಯಕ್ರಮದ ಮೂಲಕ ಆಯುಷ್ ಇಲಾಖೆಯ ಪ್ರತಿನಿತ್ಯ ಆನ್‌ಲೈನ್ ಮೂಲಕ ಯೋಗ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಂತೋಷದ ಸಂಗತಿಯಾಗಿದೆ ಎಂದರು.

ಆಯುಷ್ ವೈದ್ಯಾಧಿಕಾರಿ ಡಾ.ವೈ.ಜೆ. ಶಿರವಾರ ಯೋಗಾಭ್ಯಾಸ ನಡೆಸಿಕೊಟ್ಟರು.

ಪ್ರಜಾಪಿತ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯದ ಯೋಗಿನಿ ಅಕ್ಕನವರು ಜ್ಞಾನ ಕಾರ್ಯಕ್ರಮ ನಡೆಸಿಕೊಟ್ಟರು.

ಗಮನ ಸೆಳೆದ ಮಕ್ಕಳ ಯೋಗ ಪ್ರದರ್ಶನ:

ಪುಟ್ಟ ಬಾಲಕ ಅಗಸ್ತ್ಯ ಅರಕೇರಿ, ವಿದ್ಯಾರ್ಥಿನಿ ರೇಷ್ಮಾ ಹಾಗೂ ಸಂಗಡಿಗರು ಮತ್ತು ಕುಮಾರ ಸಿದ್ದಾರ್ಥ ಅವರಿಂದ ನಡೆದ ವಿಶೇಷ ಯೋಗ ಪ್ರದರ್ಶನ ಗಮನ ಸೆಳೆಯಿತು. ಈ ಎಲ್ಲ ಮಕ್ಕಳಿಗೆ ಹಾಗೂ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಪಿ.ಬಿ.ಹಿರೇಗೌಡರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಜಿಲ್ಲಾ ಕ್ರೀಡಾ ಅಧಿಕಾರಿ ವಿಠ್ಠಲ್ ಬಿ.ಜಾಬಗೌಡರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಕೊಪ್ಪಳ ತಾಪಂ ಇಓ ದುಂಡಪ್ಪ ತುರಾದಿ, ಕೊಪ್ಪಳ ಜಿಲ್ಲೆಯ ಆಯುಷ್ ವೈದ್ಯಾಧಿಕಾರಿ ಡಾ.ಗುರುರಾಜ್ ಉಮಚಗಿ, ಡಾ.ವಿ.ಆರ್.ತಾಳಿಕೋಟಿ, ಡಾ.ಶರಣಪ್ಪ ಹೈದ್ರಿ, ಡಾ.ರಾಜಶೇಖರ ನಾರಿನಾಳ, ಡಾ.ಕವಿತಾ ಎಚ್.ಎಫ್. ಹಾಗೂ ಇತರೆ ವೈದ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂಧಿ, ವಿವಿಧ ಯೋಗ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಧನೆಗೆ ಯಾವುದೇ ಮಿತಿ ಇರುವುದಿಲ್ಲ: ತಹಸೀಲ್ದಾರ
ಬ್ಯಾಂಕ್ ಖಾತೆಯ ಹಣಕ್ಕಿಂತ ಆರೋಗ್ಯವೇ ನಿಜವಾದ ಆಸ್ತಿ: ಎಡಿಸಿ ಬಾಲಕೃಷ್ಣ