ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಯಾವುದೇ ಔಷಧ ಉಪಚಾರ ಇಲ್ಲದೆ ರೋಗ ಗುಣಪಡಿಸುವ ಶಕ್ತಿ ಯೋಗಕ್ಕಿದೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಯಾವುದೇ ಔಷಧಿ ಇರಲಿಲ್ಲ. ಕೇವಲ ಯೋಗ ಹಾಗೂ ಗಿಡಮೂಲಿಕೆಯಿಂದ ರೋಗ ಗುಣಪಡಿಸಲಾಗುತ್ತಿತ್ತು. ದಿನಿತ್ಯದ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು. ಯೋಗದ ಬಗ್ಗೆ ಜಾಗೃತಿ ಮೂಡಿಸಿ ಅದರ ಮಹತ್ವ ಸಾರುವ ಕಾರ್ಯವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಶಾಸಕ ಪಿ.ಎಚ್. ಪೂಜಾರ ಮಾತನಾಡಿ, ಸಂಸ್ಕೃತಿ, ಪರಂಪರೆ ಹೊಂದಿದ ಭಾರತ ಯೋಗದ ಮಹತ್ವ ಜಗತ್ತಿಗೆ ಸಾರಿದೆ. ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ ಮನಸ್ಸು ಇರುತ್ತದೆ. ಹಿಂದಿನ ಋಷಿಮುನಿಗಳು ಆರೋಗ್ಯವಂತ ಶರೀರದೊಂದಿಗೆ ವಿಶ್ವದ ಒಳಿತಿಗಾಗಿ ಭಗವಂತನನ್ನು ಆರಾಧಿಸುತ್ತಿದ್ದರು. ಬದುಕುವ ಕಲೆ ಕಲಿಸಿಕೊಟ್ಟ ಸಂಸ್ಕೃತಿ ನಮ್ಮದು. ಆ ಕಲೆಯನ್ನು ಮುಂದಿನ ಪೀಳಿಗೆ ಅನುಸರಿಸುವ ಅಗತ್ಯವಿದೆ ಎಂದರು.ಆಯುಷ್ ಇಲಾಖೆಯ ಹಿರಿಯ ವೈದ್ಯೆ ಅಕ್ಕಮಹಾದೇವಿ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಅಪರ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ ಅಮರೇಶ ಪಮ್ಮಾರ, ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಎಸ್.ಜಿ. ಮಿರ್ಜಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ, ಮಾಜಿ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಬಾಕ್ಸ್ . . .
ಸಮೂಹಿಕ ಯೋಗಾಭ್ಯಾಸಭಾರತ ಸೇವಾದಳದ ಜಿಲ್ಲಾ ಸಂಘಟಕ ಮಹೇಶ ಪತ್ತಾರ ಹಾಗೂ ಸಂಗಡಿಗರು ಜಿಲ್ಲಾ ಕ್ರೀಡಾಂಗಣದಲ್ಲಿ ನೆರದಿದ್ದ ಎಲ್ಲರಿಗೂ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಿಸಿದರು. ಸಾಮೂಹಿಕ ಯೋಗಾಬ್ಯಾಸದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಯೋಗ ನಿರತ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಸೇರಿ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.