ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯೋಗ ಸಹಕಾರಿ

KannadaprabhaNewsNetwork | Published : Jun 22, 2024 12:46 AM

ಸಾರಾಂಶ

ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ವಿವಿಧ ಇಲಾಖೆ ಅಧಿಕಾರಿಗಳು, ಯೋಗಾಸಕ್ತರು, ವಿದ್ಯಾರ್ಥಿಗಳು ಯೋಗ್ಯಾಭ್ಯಾಸ ಮಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯೋಗ ಅತ್ಯಂತ ಸಹಕಾರಿಯಾಗಿದ್ದು, ಇಡೀ ಜಗತ್ತಿಗೆ ಯೋಗ ಪರಿಚಯಿಸಿದ ಹೆಮ್ಮೆ ನಮ್ಮ ದೇಶದ್ದಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಭಾರತ ಸರ್ಕಾರ, ಆಯುಷ್ ಮಂತ್ರಾಲಯ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಶಿವಮೊಗ್ಗ ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನ ಆಸ್ಪತ್ರೆ ಶಿವಮೊಗ್ಗ ಇವರ ಸಹಯೋಗದಲ್ಲಿ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಆಯುರ್ವೇದದಿಂದ ಜಗತ್ತು ಉಳಿಯುತ್ತದೆ. ಜಗತ್ತಿನ ಪ್ರತಿಯೊಬ್ಬರ ಆರೋಗ್ಯ ಉತ್ತಮವಾಗಿರಬೇಕೆಂಬ ನಂಬಿಕೆ ಹೊಂದಿದ ದೇಶ ನಮ್ಮದಾಗಿದ್ದು, ಇದೇ ಉದ್ದೇಶದಿಂದ ನಮ್ಮ ಪ್ರಧಾನಿ ಜಗತ್ತಿಗೆ ಯೋಗ ಪರಿಚಯಿಸಿದ್ದಾರೆ. ಎಲ್ಲರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಮಹಾನಗರಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ್ ಮಾತನಾಡಿ, ಬದಲಾಗುತ್ತಿರರುವ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಹಾಗೂ ಒತ್ತಡದ ಬದುಕಿನ ಈ ಕಾಲ ಘಟ್ಟದಲ್ಲಿ ಯೋಗಾಭ್ಯಾಸ ನಮಗೆ ಅತ್ಯಂತ ಸಹಕಾರಿದೆ. ನಿಯಮಿತವಾಗಿ ಒಂದು ಗಂಟೆ ಅವಧಿಯನ್ನು ಯೋಗಾಭ್ಯಾಸಕ್ಕಾಗಿ ಮುಡಿಪಾಗಿಟ್ಟರೆ ಒತ್ತಡ ಮತ್ತು ಉತ್ತಮ ಜೀವನ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದರು. ಡಿಎಚ್‍ಓ ಡಾ.ನಟರಾಜ್ ಮಾತನಾಡಿ, ಯೋಗಿ ಎಂದು ಕರೆಸಿಕೊಳ್ಳುವುದು ಸುಲಭ ಅಲ್ಲ. ಯೋಗಾಭ್ಯಾಸವು ದೈಹಿಕ ಮತ್ತು ಮಾನಸಿಕವಾಗಿ ಬಲ ನೀಡುತ್ತದೆ. ಆಧುನಿಕ ಯುಗದಲ್ಲಿ ಮಾನಸಿಕ ಒತ್ತಡಕ್ಕೆ ಉತ್ತಮ ಮದ್ದು ಯೋಗ. ಮಾನವ ಮಾನಸಿಕವಾಗಿ ಕುಗ್ಗಿದರೆ ಗುಣವಾಗುವುದು ಕಷ್ಟ. ಹಾಗಾಗಿ ಯೋಗದಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಸಾಧ್ಯವಾಗುತ್ತದೆ ಎಂದರು.ಆಯುರ್ವೇದ ಕಾಲೇಜಿನ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಪತಂಜಲಿ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ 10 ದಿನಗಳ ಕಾಲ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 165 ಕೇಂದ್ರಗಳಲ್ಲಿ 35 ಸಾವಿರ ಜನರಿಗೆ ಯೋಗಾಭ್ಯಾಸ, ಪ್ರಾತ್ಯಕ್ಷಿಕೆ ಮತ್ತು ಯೋಗ ಕುರಿತು ಮಾಹಿತಿಯನ್ನು ನೀಡಲಾಗಿದೆ. ಪ್ರಸ್ತುತ 160 ದೇಶಗಳಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು.ಸರ್ಕಾರಿ ಆಯುರ್ವೇದ ಕಾಲೇಜಿನ ಡಾ.ಹರ್ಷಿತ ಮಾತನಾಡಿ, ಪ್ರತಿನಿತ್ಯ ಯೋಗಾಭ್ಯಾಸದಿಂದ ಹಲವಾರು ಪ್ರಯೋಜನಗಳಿವೆ. ದೇಹ ಮತ್ತು ಮನಸ್ಸು ಸಮತೋಲನ ಸಾಧಿಸುವ ಜೊತೆಗೆ ಮನಸ್ಸು ಉಲ್ಲಸಿತವಾಗುತ್ತದೆ ಎಂದರು.ಯೋಗ ಪ್ರದರ್ಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಅಧಿಕಾರಿಗಳು, ಯೋಗಾಸಕ್ತರು, ವಿದ್ಯಾರ್ಥಿಗಳು ಪಾಲ್ಗೊಂಡರು. ಇದೇ ವೇಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪ್ರಬಂಧ ಮತ್ತು ಯೋಗ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಲಿಂಗರಾಜ್ ಎಸ್ ಹಿಂಡಸಗಟ್ಟಿ, ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಎಸ್.ದೊಡ್ಡಮನಿ, ಬಾಪೂಜಿ ಆಯುರ್ವೇದ ಮಹಾ ವಿದ್ಯಾಲಯ ಪ್ರಾಚಾರ್ಯ ಪಂಕಜ್ ಕುಮಾರ್, ಡಾ.ಮೊಹಮ್ಮದ್ ಗೌಸ್, ದೈಹಿಕ ಶಿಕ್ಷಣ ನಿರ್ದೇಶಕ ನಿರಂಜನ ಮೂರ್ತಿ, ಎಎಓಫ್‍ಐ ಶ್ರೀನಿವಾಸ ರೆಡ್ಡಿ, ಕೆಎಸ್‍ಆರ್‍ಪಿ ಸಬ್ ಇನ್ಸ್‍ಪೆಕ್ಟರ್ ಜಗದೀಶ್, ಡಾ.ಸಿ.ಎ.ಹಿರೇಮಠ್, ಡಾ.ರಾಘವೇಂದ್ರ, ಡಾ.ಚಿತ್ರಲೇಖ ಇತರೆ ವೈದ್ಯರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಇತರರಿದ್ದರು.

Share this article