ಹರಪನಹಳ್ಳಿ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಮನುಕುಲ ಆರೋಗ್ಯವಂತ ಜೀವನ ಸಾಧಿಸುವ ನಿಟ್ಟಿನಲ್ಲಿ ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತೆಗ್ಗಿನಮಠ ಮಠದ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ ಆಶಿಸಿದರು.ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಹಾಗೂ ಆಸ್ಪತ್ರೆಯು ಎಸ್‍ಸಿಎಸ್ ಕಾಲೇಜ್ ಆಫ್ ಫಾರ‍್ಮಸಿ ಸಹಯೋಗದಲ್ಲಿ ಶ್ರೀಮಠದ ಆವರಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಆಧ್ಯಾತ್ಮಿಕತೆಯ ತವರು ಎನಿಸಿದ ಭಾರತ ಇಂದು ವಿಶ್ವಕ್ಕೆ ಯೋಗದ ಮಹತ್ವವನ್ನು ತೋರಿಸಿಕೊಟ್ಟಿದೆ. ವಿಶ್ವಾದ್ಯಂತ 2500 ಕಡೆಗಳಲ್ಲಿ ಅಧಿಕೃತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯೋಗ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ಇದರ ನೇತೃತ್ವ ವಹಿಸಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಇದು ಯೋಗಕ್ಕೆ ನೀಡಿದ ಮಹತ್ವವನ್ನು ತಿಳಿಸುತ್ತದೆ ಎಂದು ಹೇಳಿದರು.
ನಮ್ಮ ಬದುಕಿನ ನಕಾರಾತ್ಮಕ ಅಂಶಗಳನ್ನು ತೊಡೆದು ಹಾಕಿ ಜೀವನವನ್ನು ಸಕಾರಾತ್ಮಕವಾಗಿ ಪರಿವರ್ತಿಸುವಲ್ಲಿ ಯೋಗ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸ್ವಾಮೀಜಿ ವಿಶ್ಲೇಷಿಸಿದರು.ಅತಿಥಿಗಳಾಗಿ ಆಗಮಿಸಿದ್ದ ಟಿಎಂಎಇ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಟಿ.ಎಂ..ಚಂದ್ರಶೇಖರಯ್ಯ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಋಷಿ ಮುನಿಗಳ ಕೊಡುಗೆ ಅಪಾರ. ಯೋಗದ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ವೈದ್ಯಪದ್ಧತಿಯನ್ನು ಭಾರತ ವಿಶ್ವಕ್ಕೆ ಪರಿಚಯಿಸಿದೆ. ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗದ ಕೊಡುಗೆ ಅಪಾರ ಎಂದು ಹೇಳಿದರು.
ಹೂವಿನಹಡಗಲಿಯ ವೀರರಾಣಿ ಕಿತ್ತೂರು ಚೆನ್ನಮ್ಮ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಯೋಗ ಶಿಬಿರದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಈಶ್ವರ್ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ವಿನುತಾ ಈಶ್ವರ್, ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಉದಯಶಂಕರ ಭಟ್, ವೈದ್ಯರಾದ ಡಾ.ಅಂಬಿಕಾ, ಡಾ.ಅನುಷಾ ಶೆಟ್ಟಿ ಉಪಸ್ಥಿತರಿದ್ದರು.