ಹೊಸಪೇಟೆ: ಯೋಗ ಕೇವಲ ವ್ಯಾಯಾಮವಲ್ಲ, ಅದು ಅಂತರಂಗಕ್ಕೆ ಸಂಬಂಧಿಸಿದ ಶುದ್ಧ ವಿಜ್ಞಾನ ಹಾಗೂ ಗಣಿತ. ಯಾವುದೇ ಬಂಧನಗಳಿಲ್ಲದ ಬಯಲು ಯೋಗವಾಗಿ ಇದು ವಿಶ್ವಕ್ಕೆ ತೆರೆದುಕೊಳ್ಳಬೇಕು ಎಂದು ಇಲ್ಲಿನ ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗ ಶ್ರೀ ಅಭಿಪ್ರಾಯಪಟ್ಟರು.
ಯೋಗ ಇಂದು ಫ್ಯಾಷನ್ ಆಗಿ ಬಿಂಬಿತವಾಗಿದ್ದು, ಆಸನಗಳೇ ಯೋಗ ಎನ್ನುವ ತಪ್ಪುಕಲ್ಪನೆ ಬೆಳೆದಿದೆ. ಆದರೆ, ವಾಸ್ತವವಾಗಿ ನಿಯಮ, ಪ್ರತ್ಯಾಹಾರಗಳಿಲ್ಲದ ಯೋಗಾಸನ ನಿರರ್ಥಕ. ಭೌತಿಕ ಸಂತೋಷಗಳನ್ನು ಸರಿಯಾಗಿ ಅನುಭವಿಸಲೂ ಯೋಗ ಅನಿವಾರ್ಯ. ಜೀವನದ ಒತ್ತಡಗಳಿಂದ ಮುಕ್ತಿ ಪಡೆಯಲು ಯೋಗವೊಂದೇ ಸಾಧನ ಎಂದು ಅವರು ಹೇಳಿದರು.ಹಂಪಿ ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಡೀ ವಿಶ್ವ ಇಂದು ಯುದ್ಧೋನ್ಮಾದದಲ್ಲಿದ್ದರೆ, ಭಾರತ ನಿರ್ಲಿಪ್ತವಾಗಿ ಯೋಗದ ಮೂಲಕ ವಿಶ್ವಶಾಂತಿಯ ಸಂದೇಶವನ್ನು ಸಾರುತ್ತಿದೆ. ಕರ್ನಾಟಕ ಯೋಗಿಗಳ ತವರೂರು. ಇತಿಹಾಸದಲ್ಲಿ ಅಸಂಖ್ಯಾತ ಸಾಧಕರು ಯೋಗವನ್ನು ಸಾಧನೆಯ ಮಾರ್ಗವಾಗಿ ಕಂಡುಕೊಂಡಿದ್ದಾರೆ. ಇದು ದೇಹ ಮತ್ತು ಮನಸ್ಸನ್ನು ಬೆಸೆಯುವ ಕೊಂಡಿ ಎಂದು ಅವರು ಬಣ್ಣಿಸಿದರು.
ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಡಾ. ಭವರ್‌ಲಾಲ್ ಆರ್ಯ ಮಾತನಾಡಿ, ಬಿಕೆಎಸ್ ಅಯ್ಯಂಗಾರ್, ಮಲ್ಲಾಡಿಹಳ್ಳಿ ಸ್ವಾಮೀಜಿ, ಎಸ್. ವ್ಯಾಸ, ರವಿಶಂಕರ್ ಗುರೂಜಿ, ಈಶ ಫೌಂಡೇಷನ್ ಹೀಗೆ ವಿಶ್ವಾದ್ಯಂತ ಯೋಗವನ್ನು ಪ್ರಚುರಪಡಿಸಿದವರು ಕನ್ನಡಿಗರು ಎನ್ನುವುದು ಹೆಮ್ಮೆ ಎಂದರು.ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ನಿರ್ದೇಶಕ ಡಾ. ರಾಜೇಶ್ ಪಾದೇಕಲ್, ಯೋಗ ವಿಭಾಗದ ನಿರ್ದೇಶಕ ಡಾ. ಮಾಧವ ಪೆರಾಜೆ ಮಾತನಾಡಿದರು. ಅತಿಥಿ ಉಪನ್ಯಾಸಕ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಸಿದ್ದರಾಮೇಶ ವಂದಿಸಿದರು.
ತತ್ವಶಾಸ್ತ್ರದಲ್ಲಿ ಯೋಗದ ಪರಿಕಲ್ಪನೆ ಬಗ್ಗೆ ಡಾ. ಐ.ಎಸ್. ಕುಂಬಾರ್, ದೃಶ್ಯ ಕಲೆಗಳಲ್ಲಿ ಯೋಗ ಪರಿಕಲ್ಪನೆ ಬಗ್ಗೆ ಡಾ. ಮೋಹನ್ ಪಾಂಜಾಲ, ಶಾಸನಗಳಲ್ಲಿ ಯೋಗ ಕಲ್ಪನೆ ಬಗ್ಗೆ ಡಾ. ಅಮರೇಶ್ ಯಾತಗಲ್ ವಿಚಾರ ಮಂಡಿಸಿದರು. ನಂತರ ಡಾ. ಶಿವಾನಂದ ವಿರಕ್ತಮಠ ಅಧ್ಯಕ್ಷತೆಯಲ್ಲಿ ಸಂವಾದ ಗೋಷ್ಠಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಕನ್ನಡ ವಿವಿ ಲಲಿತಕಲೆಗಳ ನಿಕಾಯದ ಡಾ. ಶಿವಾನಂದ ವಿರಕ್ತಮಠ, ಪತಂಜಲಿ ಸಮಿತಿ ಬಾಲಚಂದ್ರ ಶರ್ಮಾ, ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕನ್ನಡ ವಿವಿ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅಧ್ಯಕ್ಷತೆ ವಹಿಸಿದ್ದರು.