ಮುಂಡರಗಿ: ಇಂದಿನ ಆಧುನಿಕ ಒತ್ತಡದ ಜೀವನ ಶೈಲಿಯಲ್ಲಿ ಮನುಷ್ಯನ ದೈಹಿಕ ಚಟುವಟಿಕೆ ಕಡಿಮೆಯಾಗಿ ಬೇರೆ ಬೇರೆ ರೀತಿಯ ದೈಹಿಕ ಹಾಗೂ ಮಾನಸಿಕ ವ್ಯಾಧಿಗಳಿಂದ ಬಳಲುತ್ತಿದ್ದಾನೆ. ಹಾಗಾಗಿ ನಮ್ಮ ಭಾರತೀಯ ಸಂಸ್ಕೃತಿಯ ಕೊಡುಗೆಯಾಗಿರುವ ಯೋಗಕ್ಕೆ ನಾವು ಮೊರೆ ಹೋಗುವುದು ಅನಿವಾರ್ಯ ಎಂದು ಸ್ಥಳೀಯ ಭುವನೇಶ್ವರಿ ವಿದ್ಯಾ ಸಂಸ್ಥೆಯ ಕಾರ್ಯಾಧ್ಯಕ್ಷ ಎ. ವೈ.ನವಲಗುಂದ ಹೇಳಿದರು.
ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಯೋಗ ಸಾಧನೆ ಅತ್ಯಂತ ಉಪಯುಕ್ತವಾಗಿದ್ದು, ಪ್ರತಿದಿನ ಒಂದಿಷ್ಟು ಸಮಯ ನಿಗದಿ ಮಾಡಿಕೊಂಡು ಯೋಗಾಭ್ಯಾಸ ಮಾಡುವುದರ ಮೂಲಕ ನಿರೋಗಿಗಳಾಗಬೇಕು. ಪಾಲಕರು ತಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಯೋಗದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.
ಅನ್ಮೋಲ್ ಯೋಗ ಕೇಂದ್ರದ ನಿರ್ದೇಶಕಿ ಡಾ.ಮಂಗಳಾ ಇಟಗಿ ಮಾತನಾಡಿ, ಭೂಮಂಡಲದ ಸಕಲ ಜೀವ ರಾಶಿಗಳಿಗೂ ಚೈತನ್ಯ ಶಕ್ತಿ ಆದಂತಹ ಸೂರ್ಯ ಸಕಲ ವ್ಯಾದಿ ಗುಣಪಡಿಸುವಂತಹ ಶಕ್ತಿ ಹೊಂದಿದ್ದಾನೆ. ಹಾಗಾಗಿ ಸೂರ್ಯೋಪಾಸನೆಯ ದಿನ ಅತ್ಯಂತ ಭಕ್ತಿ ಭಾವದಿಂದ ಕೃತಜ್ಞತಾಪೂರ್ವವಾಗಿ ಸೂರ್ಯ ನಮಸ್ಕಾರ ಹಾಕುವುದರ ಮುಖಾಂತರ ರಥಸಪ್ತಮಿ ಆಚರಿಸಲಾಗುತ್ತದೆ. ಸೂರ್ಯ ನಮಸ್ಕಾರವು ಸಂಪೂರ್ಣ ಸಾಧನ ಆಧ್ಯಾತ್ಮಿಕ ಅಭ್ಯಾಸವಾಗಿದೆ. ಅದು ಆಸನ, ಪ್ರಾಣಾಯಾಮ, ಮಂತ್ರ ಮತ್ತು ಧ್ಯಾನ ತಂತ್ರ ಒಳಗೊಂಡಿದೆ ಎಂದರು.ಸಾಹಿತಿ ಡಾ. ನಿಂಗು ಸೊಲಗಿ ಸಮಾರೋಪ ನುಡಿಗಳನ್ನಾಡಿದರು. ಅನ್ಮೋಲ್ ಯೋಗ ಕೇಂದ್ರದ ಅಧ್ಯಕ್ಷ ಡಾ. ಚಂದ್ರಕಾಂತ ಇಟಗಿ ಅಧ್ಯಕ್ಷತೆ ವಹಿಸಿದ್ದರು.
ಅಶೋಕ ಹುಬ್ಬಳ್ಳಿ ಸ್ವಾಗತಿಸಿ, ಎಂ.ಟಿ.ಮಾಳಪುರ ವಂದಿಸಿದರು.ಆನ್‌ಲೈನ್ ಮೂಲಕವೂ ವಿವಿಧ ಭಾಗಗಳಿಂದ ರಥಸಪ್ತಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.