ಯಲ್ಲಾಪುರ: ಇಂದಿನ ಶ್ರಮರಹಿತ ಜೀವನ, ಕಲುಷಿತ ಆಹಾರ, ಜೀವನ ವಿಧಾನದಲ್ಲಿ ಆರೋಗ್ಯ ಕಾಯ್ದುಕೊಳ್ಳಲು ಯೋಗ ಅನಿವಾರ್ಯ. ನಮ್ಮ ಹಿರಿಯರು ಇಂದಿಗೂ ಹೆಚ್ಚು ಆರೋಗ್ಯವಂತರಾಗಿದ್ದರು. ಇಂದು ಯುವಕರ ಆರೋಗ್ಯ ಮೊದಲಿನಂತೆ ಕಾಣಲಸಾಧ್ಯ. ಇದಕ್ಕೆ ಕಾರಣವನ್ನು ನಾವು ಗಂಭೀರವಾಗಿ ಕಂಡುಕೊಳ್ಳಬೇಕಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಮಹಿಳಾ ಪತಂಜಲಿ ಯೋಗ ಸಮಿತಿ ಪಟ್ಟಣದ ಎನ್‌ಟಿಕೋ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಮಟ್ಟದ ಯೋಗ ಸಾಧಕಿ ನೇತ್ರಾವತಿ ಭಟ್ಟ ಮಾತನಾಡಿ, ಯೋಗಕ್ಕಾಗಿ ಕೆಲವು ಸಮಯ ಮೀಸಲಿಡಿ. ಯಾವುದೇ ಸನ್ಮಾನ ಸುಮ್ಮನೆ ಬರುವುದಿಲ್ಲ. ಸಾಧನೆ ನಮ್ಮ ಜೀವನದ ಮೈಲಿಗಲ್ಲಾಗಬೇಕು. ತನ್ಮೂಲಕ ನಮ್ಮ ಆರೋಗ್ಯದ ಜತೆ ಸಮಾಜದ ಗೌರವವೂ ದೊರೆಯುತ್ತದೆ. ನಾವು ಸಾಧನೆ ಮಾಡುವಾಗ ತ್ಯಾಗದ ಅಗತ್ಯತೆಯೂ ಇದೆ ಎಂದರು.
ಸರ್ವೋದಯ ಶಿಕ್ಷಣ ಸಮಿತಿಯ ಅಧ್ಯಕ್ಷ ಡಿ. ಶಂಕರ ಭಟ್ಡ, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ವಿ.ಕೆ. ಭಟ್ಟ ಶೀಗೆಪಾಲ ಸಾಂದರ್ಭಿಕವಾಗಿ ಮಾತನಾಡಿದರು. ಮಹಿಳಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷೆ ಶೈಲಶ್ರೀ ಭಟ್ಟ ಅಧ್ಯಕ್ಷತೆ ವಹಿಸಿದ್ದರು.ರಾಜ್ಯಮಟ್ಟದ ಯೋಗ ಸ್ಪರ್ಧಾ ವಿಜೇತರಾದ ಯೋಗಪಟುಗಳಾದ ನೇತ್ರಾವತಿ ಭಟ್ಟ, ಸುಬ್ರಾಯ ಭಟ್ಟ ಆನೆಜಡ್ಡಿ ಹಾಗೂ ಪವನಕುಮಾರ ಅವರನ್ನು ಸನ್ಮಾನಿಸಲಾಯಿತು. ವಿನುತಾ ಕೋಟೆಮನೆ, ರಂಜನಾ ಭಟ್ಟ, ವಿಜಯಶ್ರೀ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ಸಂಧ್ಯಾ ಕೊಂಡದಕುಳಿ ಸ್ವಾಗತಿಸಿದರು. ಮಾಲಾ ಗಾಂವ್ಕರ ಪ್ರಾರ್ಥಿಸಿದರು. ಆಶಾ ಬಗನಗದ್ದೆ ಕಾರ್ಯಕ್ರಮ ನಿರ್ವಹಿಸಿದರು. ಮಮತಾ ಪ್ರಕಾಶ ವಂದಿಸಿದರು.