ಶಾಲೆಗಳಲ್ಲಿ ಪ್ರತಿ ಶನಿವಾರ ಯೋಗ ಕಡ್ಡಾಯ ಅಗತ್ಯ

KannadaprabhaNewsNetwork |  
Published : Jun 22, 2025, 01:18 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಶನಿವಾರ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಾವಿರಾರು ಯೋಗ ಪಟುಗಳು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ಶನಿವಾರ ಒಂದು ಗಂಟೆ ಯೋಗ ಕಲಿಯುವುದನ್ನು ಕಡ್ಡಾಯವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದು ಅಗತ್ಯವೆಂದು ಸಂಸದ ಗೋವಿಂದ ಎಂ.ಕಾರಜೋಳ ಪ್ರತಿಪಾದಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಲಾದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಕ್ಕಳು ಚಿಕ್ಕಂದಿನಲ್ಲಿಯೇ ಯೋಗ ಕಲಿಯುವುದರಿಂದ ಶಿಸ್ತು ಮೂಡುತ್ತದೆ ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ ಎಂದರು.

ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತದ್ದಾಗಿದೆ. ಮೊದಲಿಗೆ ಯೋಗ ಎನ್ನುವುದು ಒಂದು ಧರ್ಮಕ್ಕೆ ಸೀಮಿತವಾದುದು ಎನ್ನುವ ಸಂಕುಚಿತ ಮನೋಭಾವವಿತ್ತು. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿಲು ವಿಶ್ವ ಸಂಸ್ಥೆಗೆ ಮನವಿ ಮಾಡಿದರು. 2014ರಲ್ಲಿ ವಿಶ್ವ ಸಂಸ್ಥೆಯಲ್ಲಿ ಸರ್ವಾನುಮತದಿಂದ ಜೂನ್ 21ನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆ ಮಾಡಿತು. ಇಂದು ವಿಶ್ವದ 187 ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಯೋಗವನ್ನು ವಿಶ್ವದಾದ್ಯಂತ ಪಸರಿಸಲು ಪ್ರಯತ್ನ ಮಾಡುತ್ತಿದ್ದಾರೆ. ದೇಶದಲ್ಲಿ ಆಯುಷ್ ಇಲಾಖೆಯನ್ನು ಬಲಪಡಿಸಲಾಗಿದೆ. ಹೆಚ್ಚಿನ ವೈದ್ಯರನ್ನು ಸಹ ನೇಮಕ ಮಾಡಲಾಗಿದೆ. ಯೋಗ ದಿನಾಚರಣೆಗೆ ಜಿಲ್ಲೆಯ ಯೋಗ ಸಂಸ್ಥೆಗಳು ಕೈ ಜೋಡಿಸಿರುವುದು ಸಂತಸದ ಸಂಗತಿಯಾಗಿ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ಯೋಗದಿಂದ ಜೀವನದಲ್ಲಿ ಸಕಾರಾತ್ಮಕ ಚಿಂತನೆ ಹಾಗೂ ಸದೃಢ ಮನೋಭಾವ ಬೆಳೆಯುವುದು. ಯೋಗ ಒಂದು ದಿನಕ್ಕೆ ಸೀಮಿತವಾಗಿರಬಾರದು. ವರ್ಷದ 365 ದಿನಗಳ ಕಾಲ ಯೋಗಾಭ್ಯಾಸ ಮಾಡಬೇಕು ಎಂದರು.

ಯೋಗ ದೇಶದ ಸಾಂಸ್ಕೃತಿಕತೆಯ ಪ್ರತೀಕವಾಗಿದೆ. ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು. ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಸಾಮೂಹಿಕ ಯೋಗಭ್ಯಾಸದಲ್ಲಿ ತೊಡಗಿರುವುದು ಉತ್ತಮ ಸಂಗತಿಯಾಗಿದೆ. ಯೋಗ ಸಂಸ್ಥೆಗಳು ವರ್ಷ ವರ್ಷವೂ ಹೆಚ್ಚಿನ ಸಂಖ್ಯೆಯ ಜನರಿಗೆ ಯೋಗ ಪಸರಿಸುವ ಕೆಲಸ ಮಾಡಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಮಾತನಾಡಿ, ಪ್ರಾಧಿಕಾರದ ಉದ್ಯಾನವನಗಳಲ್ಲಿ ಯೋಗ ಮಾಡಲು ಪ್ರತ್ಯೇಕ ವೇದಿಕೆ ನಿರ್ಮಿಸುತ್ತಿದೆ. ಯೋಗದ ಜೊತೆ ಪರಿಸರ ರಕ್ಷಣೆಯ ಕೆಲಸಕ್ಕೆ ಪ್ರತಿಯೊಬ್ಬರು ಮುಂದಾಗಬೇಕು. ಪ್ರತಿದಿನ ಒಂದು ಗಿಡಕ್ಕೆ ಒಂದು ಲೀಟರ್ ನೀರನ್ನು ಗಿಡ ಮರಗಳಿಗೆ ಹಾಕುವುದರ ಮೂಲಕ ಪರಿಸರ ಪ್ರತಿಯೊಬ್ಬರು ಮುಂದಾಗಬೇಕು. ಇದರಿಂದ ಪರಿಸರದಲ್ಲಿ ಗಿಡ ಮರಗಳ ಸಂಖ್ಯೆ ಗಣಿನೀಯವಾಗಿ ಹೆಚ್ಚಳವಾಗುವುದು ಎಂದರು.

ನಾಡಿನೆಲ್ಲೆಡೆ ಯೋಗವನ್ನು ಪ್ರಚಾರ ಮಾಡುವಲ್ಲಿ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳ ಕೊಡುಗೆ ಮಹತ್ವದಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮಗಳು ಇಲ್ಲದ ಸಂದರ್ಭದಲ್ಲಿ ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳು ಯೋಗವನ್ನು ಗ್ರಾಮ ಗ್ರಾಮಗಳಿಗೆ ಕೊಂಡೊಯ್ಯದರು. ಶತಾಯುಷಿಗಳಾಗಿದ್ದ ಅವರು ತಮ್ಮ ಇಡೀ ಜೀವನವನ್ನು ಯೋಗಕ್ಕೆ ಮುಡಿಪಾಗಿಟ್ಟಿದ್ದರು. ಯೋಗಾಸಕ್ತರು ಮಲ್ಲಾಡಿಹಳ್ಳಿ ಆಶ್ರಮಕ್ಕೆ ಭೇಟಿ ನೀಡಿ ಅವರ ಯೋಗ ಸಾಧನೆಗಳನ್ನು ಅರಿಯಬೇಕು ಎಂದು ತಾಜ್‌ಪೀರ್ ಹೇಳಿದರು.

ವಿವಿಧ ಯೋಗ ಸಂಸ್ಥೆಗಳಿಂದ ಆಗಮಿಸಿದ ಸಾವಿರಾರು ಯೋಗ ಪಟುಗಳು, ನಗರದ ಹಳೆ ಮಾಧ್ಯಮಿಕ ಶಾಲೆಯ ಆವರಣದಲ್ಲಿ 45 ನಿಮಿಷಗಳ ಕಾಲ ಸಾಮೂಹಿಕ ಯೋಗಾಭ್ಯಾಸ ಮಾಡಿದರು. ಯೋಗ ಶಿಕ್ಷಕಿ ಹೇಮಾವತಿ ಸಾಮೂಹಿಕ ಯೋಗಭ್ಯಾಸ ಆಸನಗಳನ್ನು ಬೋಧಿಸಿದರು. ಯೋಗಪಟುಗಳು ತಾಡಸನ, ವೃಕ್ಷಾಸನ, ಪಾದಹಸ್ತಸನ, ಅರ್ಧಚಕ್ರಾಸನ, ತ್ರಿಕೊಣಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟಾಸನ, ಶಶಾಂಕಾಸನ, ಉಸ್ಥಾನ, ಮಂಡೂಕಾಸನ, ವಕ್ರಾಸನ, ಮಕಾರಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಪಾದಾಸನ, ಅರ್ಧಹಲಾಸನ, ಪವನಮುಕ್ತಾಸನ, ಶವಾಸನ, ಕಪಾಲಬಾತಿ, ನಾಡಿಶೋಧನೆ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮ ಯೋಗಗಳನ್ನು ಮಾಡಿದರು. ನಂತರ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ರಷ್ಮಿ ಅಕ್ಕನವರು ಧ್ಯಾನ ಮತ್ತು ಯೋಗ ಸಂಕಲ್ಪ ಬೋಧಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಪಂ ಉಪಕಾರ್ಯದರ್ಶಿ ರಂಗಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಾಲತೇಶ್ ಮುದ್ದಜ್ಜಿ, ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು, ಆಯುಷ್ ವೈದ್ಯಾಧಿಕಾರಿ ಡಾ.ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಆಯುಷ್ ವೈದ್ಯಾಧಿಕಾರಿ ನಾರದಮುನಿ ಪ್ರಸ್ತಾವಿಕ ಮಾತನಾಡಿದರು. ವೈದ್ಯಾಧಿಕಾರಿ ಮಂಜುಳಾ ಸ್ವಾಗತಿಸಿದರು. ವೈದ್ಯಾಧಿಕಾರಿ ಪ್ರಶಾಂತ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!