ಮಾನಸಿಕ ಒತ್ತಡ ನಿವಾರಣೆಗೆ ಯೋಗ ಒಂದೇ ಪರಿಹಾರ

KannadaprabhaNewsNetwork |  
Published : Jun 22, 2026, 01:30 AM IST
 | Kannada Prabha

ಸಾರಾಂಶ

ದೈಹಿಕ ಒತ್ತಡ, ಮಾನಸಿಕ ಒತ್ತಡ, ಮೊಬೈಲ್‌ ಅವಲಂಬನೆ ಹಾಗೂ ಅನಾರೋಗ್ಯದಂತಹ ಸಮಸ್ಯೆಗಳಿಗೆ ಯೋಗ ಅತ್ಯಂತ ಉತ್ತಮ ಔಷಧಿಯಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ದೈಹಿಕ ಒತ್ತಡ, ಮಾನಸಿಕ ಒತ್ತಡ, ಮೊಬೈಲ್‌ ಅವಲಂಬನೆ ಹಾಗೂ ಅನಾರೋಗ್ಯದಂತಹ ಸಮಸ್ಯೆಗಳಿಗೆ ಯೋಗ ಅತ್ಯಂತ ಉತ್ತಮ ಔಷಧಿಯಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆಯುಷ್‌ ಇಲಾಖೆ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಮಿತಿ ಹಾಗೂ ಶ್ರೀ ಪತಂಜಲಿ ಯೋಗ ಕೇಂದ್ರ ಸಹಯೋಗದಲ್ಲಿ ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರು ವಿವಿಧ ಕಾರಣಗಳಿಂದ ದೈಹಿಕ, ಮಾನಸಿಕ ಒತ್ತಡಗಳಿಂದ ಬಳಲುತ್ತಿದ್ದಾರೆ, ಅತಿಯಾದ ಮೊಬೈಲ್‌ ಅವಲಂಬನೆಯಿಂದಾಗಿ ಖಿನ್ನತೆಗೆ ಒಳಗಾಗಿ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಯೋಗ ಒಂದೇ ಪರಿಹಾರವಾಗಿದೆ. ಕೊರೋನದಂತಹ ಸಾಂಕ್ರಾಮಿಕ ರೋಗದ ಪಿಡುಗಿನ ಸಂದರ್ಭದಲ್ಲಿ ಅದು ಜನರಿಗೆ ಅರಿವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಉತ್ತಮ ಆರೋಗ್ಯ ತಂತ್ರ ಎಂಬುದನ್ನು ಜಗತ್ತಿನಾದ್ಯಂತ ಎಲ್ಲರೂ ಒಪ್ಪಿಕೊಂಡಿದ್ದಾರೆ. ಯೋಗ ಸಂಸ್ಕೃತಿಯನ್ನು ವಿಶ್ವದೆಡೆಗೆ ಕೊಂಡೊಯ್ದ ಕೀರ್ತಿ ಭಾರತ ಸರ್ಕಾರದ್ದಾಗಿದೆ ಎಂದು ಅವರು ಹೇಳಿದರು.

ಯೋಗ ಕೇವಲ ಒಂದು ದಿನ ಆಚರಣೆಗೆ ಸೀಮಿತವಾಗದೆ ಜನರ ಬದುಕಿನ ಭಾಗವಾಗಬೇಕು ಎಂದ ಅವರು, ಇಂದು ವಿಶ್ವಮಾನ್ಯ ಯೋಗ ಕಾರ‍್ಯಕ್ರಮವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಯೋಗವು ಹಲವು ವಿಶೇಷತೆಗಳ ಸಂಗಮ. ಯೋಗದ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಪ್ರತಿ ವರ್ಷವೂ ಒಂದೊಂದು ಘೋಷವಾಕ್ಯದೊಂದಿಗೆ ಜೂನ್‌ 21ರಂದು ಅಂತಾರಾಷ್ಟ್ರೀಯ ಯೋಗವನ್ನು ಆಚರಿಸಲು ವಿಶ್ವಸಂಸ್ಥೆ ಘೋಷಿಸಿದೆ. ಈ ವರ್ಷ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ವಿಶ್ವದಾದ್ಯಂತ ಯೋಗ ದಿನ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.

ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌, ಜಿಲ್ಲಾಧಿಕಾರಿ ಶುಭಕಲ್ಯಾಣ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ. ಜಿಲ್ಲಾ ಪೊಲೀಸ್‌ ಅಧೀಕ್ಷಕ ಅಶೋಕ್‌ ಕೆ.ವಿ. ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸಿ.ಗೋಪಾಲ್‌, ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಸಿ.ಗಂಗಾಧರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್‌ ಸೇರಿದಂತೆ ವಿವಿಧ ಅಧಿಕಾರಿಗಳು, ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಯೋಗಪಟುಗಳು, ವಿದ್ಯಾರ್ಥಿಗಳು ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೆರಿಕದಲ್ಲಿ ಮಂಡ್ಯ ಗಿರೀಶ್‌ರವರ ಕನ್ನಡ ಕೃತಿಗಳ ಲೋಕಾರ್ಪಣೆ
ಸರ್ವ ರೋಗಕ್ಕೂ ಯೋಗ ದಿವ್ಯೌಷಧ: ಡಿ.ಎನ್.ಶ್ರೀಪಾದು