ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಯೋಗದಂತಹ ಅನೇಕ ಸಾಧನೆಗಳ ಮೂಲಕ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಭಾರತೀಯ ಆರೋಗ್ಯ ಪರಂಪರೆಯ ಪ್ರಾಚೀನ ಜ್ಞಾನವನ್ನು ನೀಡಿ ಜಗತ್ತೇ ಉತ್ತಮ ಆರೋಗ್ಯ ಹೊಂದಬೇಕು ಎನ್ನುವ ಅವರ ದೃಷ್ಟಿಯಿಂದಾಗಿ ದೇಶವಿದೇಶಗಳಲ್ಲಿ ಇಂದು ಯೋಗ ದಿನಾಚರಣೆ ನಡೆಸಲಾಗುತ್ತಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಯೋಗದಂತಹ ಅನೇಕ ಸಾಧನೆಗಳ ಮೂಲಕ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಭಾರತೀಯ ಆರೋಗ್ಯ ಪರಂಪರೆಯ ಪ್ರಾಚೀನ ಜ್ಞಾನವನ್ನು ನೀಡಿ ಜಗತ್ತೇ ಉತ್ತಮ ಆರೋಗ್ಯ ಹೊಂದಬೇಕು ಎನ್ನುವ ಅವರ ದೃಷ್ಟಿಯಿಂದಾಗಿ ದೇಶವಿದೇಶಗಳಲ್ಲಿ ಇಂದು ಯೋಗ ದಿನಾಚರಣೆ ನಡೆಸಲಾಗುತ್ತಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.ಭಾನುವಾರ ಜಿಲ್ಲಾಡಳಿತ ವತಿಯಿಂದ ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ‘ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ’ ಘೋಷವಾಕ್ಯದೊಂದಿಗೆ ನಡೆದ 12 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಭಾರತದ ಯೋಗವನ್ನು ಇಂದು ವಿಶ್ವದ ಎಲ್ಲ ರಾಷ್ಟ್ರಗಳೂ ಅನುಸರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಆಯುಷ್ಯ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಯೋಗದಲ್ಲಿ ಕಂಡುಕೊಳ್ಳಬಹುದು. ಆದ್ದರಿಂದ ಯೋಗಾಭ್ಯಾಸವನ್ನು ದಿನನಿತ್ಯದ ಭಾಗವಾಗಬೇಕು. ಉಡುಪಿ ಜಿಲ್ಲೆಯಿಂದ ತಯಾರಾಗುವ ಯೋಗಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು ಎಂದು ಅವರು ಹೇಳಿದರು. ಜಿ.ಪಂ. ಮು.ಕಾ.ನಿ. ಅಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಯೋಗವು ಒತ್ತಡ ನಿವಾರಣೆಗೆ ಸಹಕಾರಿ. ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಅತಿಹೆಚ್ಚು ಒತ್ತಡ ಅನುಭವಿಸುತ್ತಾರೆ. ಯೋಗವು ನಮಗೆ ವರ್ತಮಾನದಲ್ಲಿ ಬದುಕುವುದನ್ನು ಕಲಿಸುತ್ತದೆ. ಆರೋಗ್ಯಕರವಾಗಿ ವೃದ್ದಾಪ್ಯವನ್ನು ಎದುರಿಸಲು ಯೋಗ ಮಾಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಜಿಪಂ ಮುಖ್ಯ ಯೋಜನಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಡಯಟ್ ಪ್ರಾಂಶುಪಾಲ ಅಶೋಕ್ ಕಾಮತ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆನಂದ ಜತ್ತನ್ನ ಮತ್ತಿತರರು ಉಪಸ್ಥಿತರಿದ್ದರು. ಆಯುಷ್ ಇಲಾಖೆ ಉಪ ನಿರ್ದೇಶಕ ಸತೀಶ್ ಆಚಾರ್ಯ ಸ್ವಾಗತಿಸಿ, ಹೇಮಲತಾ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.