ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಎಂ.ಹೊಸೂರು ಗೇಟ್ ಬಳಿಯ ಶೀರಪಟ್ಟಣದ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದಲ್ಲಿ 7ನೇ ಅಂತಾರಾಷ್ಟ್ರೀಯ ಪ್ರಕೃತಿ ದಿನಾಚರಣೆ ಪ್ರಯುಕ್ತ ಸೋಮವಾರದಿಂದ ಎರಡು ದಿನಗಳ ಕಾಲ ನಡೆಯುವ ಅಂತಾರಾಷ್ಟ್ರೀಯ ಪ್ರಕೃತಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ದಿನ ಕಳೆದಂತೆ ಪ್ರಕೃತಿಯ ವಾತಾವರಣದಲ್ಲಿ ಏರುಪೇರಾಗಿ ಜನರ ಆರೋಗ್ಯದ ಮೇಲೂ ವ್ಯತ್ಯಾಸಗಳು ಕಂಡು ಬರುತ್ತಿವೆ. ಇಂದು ಅಡ್ಡಪರಿಣಾಮ ಬೀರುವ ಇಂಗ್ಲಿಷ್ ಔಷಧಿಗಳಿಗಿಂತಲೂ ಪ್ರಕೃತಿ ಮತ್ತು ಯೋಗ ಚಿಕಿತ್ಸೆಯ ಅವಶ್ಯಕತೆ ಇದೆ ಎಂದರು.ದಕ್ಷಿಣ ಭಾರತದಲ್ಲೇ ಮೊದಲ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂದಾನ ಸಂಸ್ಥಾನವು ತಾಲೂಕಿನಲ್ಲಿ ಸ್ಥಾಪಿತವಾಗಿರುವುದು, ಇದನ್ನು ತರುವಲ್ಲಿ ನಾನೂ ಸಹ ಕಾರಣಕರ್ತ ಎಂಬುದು ಹೆಮ್ಮೆಯ ಸಂಗತಿ. ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂದಾನ ಪರಿಷತ್ ನಿರ್ದೇಶಕರಾಗಿದ್ದ ಡಾ. ಬಿ.ಟಿ.ಚಿದಾನಂದಮೂರ್ತಿ ಅವರು ಹೋರಾಟಗಾರ ಡಾ. ಹೋ. ಶ್ರೀನಿವಾಸಯ್ಯರ ಮೂಲಕ ನನ್ನ ಗಮನಕ್ಕೆ ತಂದರು ಎಂದರು.
ರಾಜ್ಯದ ಧರ್ಮಸ್ಥಳ, ಆದಿಚುಂಚನಗಿರಿ ಸೇರಿದಂತೆ ಹಲವೆಡೆ ಇಂತಹ ಪ್ರಕೃತಿ ಚಿಕಿತ್ಸಾಲಯಗಳಿದ್ದರೂ ಕೂಡ ಕೇಂದ್ರ ಸರ್ಕಾರದ ಸಂಶೋಧನಾ ಕೇಂದ್ರವಾಗಿ ತಾಂತ್ರಿಕ ಗುಣಮಟ್ಟದಡಿಯಲ್ಲಿ ನಿರ್ಮಾಣಗೊಂಡಿರುವ ಮತ್ತು ಆರ್ಥಿಕವಾಗಿ ಸಾಮಾನ್ಯ ಜನತೆಯ ಕೈಗೆ ಸಿಗುವ ಏಕೈಕ ಚಿಕಿತ್ಸಾ ಕೇಂದ್ರವಾಗಿದೆ. ಜನರು ಈ ಕೇಂದ್ರದಲ್ಲಿ ಸಿಗುವ ಉತ್ತಮ ಸೇವೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಮ್ಮೇಳನದಲ್ಲಿ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂದಾನ ಪರಿಷತ್‌ನ ನಿರ್ದೇಶಕ ಡಾ.ರಾಘವೇಂದ್ರ ರಾವ್, ಕೇಂದ್ರೀಯ ಆಯುಷ್ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕವಿತಾ ಗರ್ಗ್, ಬೆಂಗಳೂರಿನ ಎಸ್.ವ್ಯಾಸ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಚ್.ಆರ್. ನಾಗೇಂದ್ರಜೀ, ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂದಾನ ಪರಿಷತ್‌ನ ಮಾಜಿ ನಿರ್ದೇಶಕ ಡಾ. ಬಿ.ಟಿ.ಚಿದಾನಂದಮೂರ್ತಿ, ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂದಾನ ಸಂಸ್ಥಾನದ ನೋಡಲ್ ಅಧಿಕಾರಿ ಹೆಚ್.ಎಸ್.ವಾದಿರಾಜ್ ಸೇರಿದಂತೆ ವಿವಿಧ ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.