ಕುಷ್ಟಗಿ: ಮಣ್ಣಿನ ಆರೋಗ್ಯಕ್ಕೆ ಸಾವಯವ ಕೃಷಿ ಎಷ್ಟು ಅಗತ್ಯವೋ ಮಾನವನ ಆರೋಗ್ಯಕ್ಕೆ ಯೋಗ ಮತ್ತು ಪ್ರಾಣಾಯಾಮವೂ ಅಷ್ಟೇ ಅಗತ್ಯವಾಗಿವೆ. ಆರೋಗ್ಯಕರ ಮಣ್ಣು ಉತ್ತಮ ಬೆಳೆ ನೀಡುವಂತೆ,ಆರೋಗ್ಯಕರ ದೇಹ ಮತ್ತು ಮನಸ್ಸು ಉತ್ತಮ ಜೀವನಕ್ಕೆ ಅಡಿಪಾಯವಾಗುತ್ತದೆ ಎಂದು ಯೋಗ ಸಾಧಕ ಸೋಮನಾಥ್ ರಡ್ಡಿ ಪುರ್ಮಾ ಕೋಡ್ಲಾ ಹೇಳಿದರು.
ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಉಸಿರಾಟ ವ್ಯವಸ್ಥೆ ಸುಧಾರಿಸುತ್ತದೆ. ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಒತ್ತಡ, ಆತಂಕ ಮತ್ತು ಜೀವನಶೈಲಿ ಸಂಬಂಧಿತ ಅನೇಕ ಸಮಸ್ಯೆಗಳನ್ನು ನಿಯಂತ್ರಿಸಲು ಯೋಗ ಸಹಕಾರಿಯಾಗಿದೆ ಎಂದರು.
ಉಷಾಪಾನ ಶರೀರದ ಸ್ವಚ್ಛತೆಗಾಗಿ ಸಹಕಾರಿಯಾಗಿದೆ. ಉಷಾಪಾನ ಮಾಡಿದಾಗ ಮಾತ್ರ ಮೂತ್ರಪಿಂಡ ಮತ್ತು ಯಕೃತ್ತಿನ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತದೆ. ದೇಹದಲ್ಲಿ ಚೈತನ್ಯ, ಉತ್ಸಾಹ ಮತ್ತು ತಾಜಾತನ ಹೆಚ್ಚುತ್ತದೆ. ತಲೆನೋವು, ಅಜೀರ್ಣ ಹಾಗೂ ಆಯಾಸದಂತಹ ಸಮಸ್ಯೆಗಳಿಗೆ ರಾಮಬಾಣ. ಈ ಉಷಾಪಾನ ಯೋಗ ಮತ್ತು ಪ್ರಾಣಾಯಾಮ ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ವೃದ್ಧಿಸುತ್ತವೆ. ನಿಯಮಿತ ಉಷಾಪಾನದಿಂದ ದೇಹ ಶುದ್ಧೀಕರಣಗೊಂಡು ಯೋಗಾಭ್ಯಾಸದ ಫಲಿತಾಂಶ ಇನ್ನಷ್ಟು ಉತ್ತಮವಾಗುತ್ತದೆ. ಜೀರ್ಣಾಂಗ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ. ರಕ್ತಸಂಚಾರ ಸುಧಾರಿಸುತ್ತದೆ. ಚರ್ಮದ ಕಾಂತಿ ಹೆಚ್ಚುತ್ತದೆ ಎಂದರು.ಈ ಸಂದರ್ಭದಲ್ಲಿ ಯೋಗ ಶಿಬಿರಾರ್ಥಿಗಳು ಇದ್ದರು.