ಮಹಮ್ಮದ ರಫೀಕ್ ಬೀಳಗಿ ಹುಬ್ಬಳ್ಳಿ
ರಾಜೀವ್‌ಕುಮಾರ್‌ಗೆ ಯೋಗ ಮಾರ್ಗದರ್ಶಕರಾಗುವ ಉದ್ದೇಶವಿರಲಿಲ್ಲ. ಪ್ರೌಢಶಾಲೆಯಲ್ಲಿ ಓದುತ್ತಿರುವಾಗ ಕುಂದಗೋಳದ ಶಿವಾನಂದ ಮಠದಲ್ಲಿ ಉತ್ಸಾಹಕ್ಕಾಗಿ ಯೋಗ ಕಲಿತರು. ಯೋಗದ ಉತ್ಸಾಹ ಅವರನ್ನು ವೃತ್ತಿಪರ ಜೀವನಕ್ಕೆ ಕರೆದೊಯ್ದಿದೆ.
ಕುಂದಗೋಳ ಹರಭಟ್ಟ ಶಾಲೆ ಮತ್ತು ಶಿವಾನಂದ ಮಠದಲ್ಲಿ ಕಲಿತ ಯೋಗವನ್ನು ವಿದೇಶದಲ್ಲಿ ಪಸರಿಸುವ ಕಾರ್ಯ ಮಾಡುತ್ತಿದ್ದಾರೆ.ವಿಯೆಟ್ನಾಂನ ಬಿಯೇನ್ ಹೋಆ ಮತ್ತು ಹೋ ಚಿ ಮಿನ್ಹ್ ನಗರದ ಪಿಟ್ನೆಸ್ ಮತ್ತು ಯೋಗಾ ಸೆಂಟರ್‌ನಲ್ಲಿ ಯೋಗ ತರಬೇತುದಾರರಾಗಿರುವ ಇವರು ಪ್ರತಿದಿನ 500ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡುತ್ತಿದ್ದಾರೆ. ಇಲ್ಲಿನ ಜನರಿಗೆ ಆರೋಗ್ಯದ ಕುರಿತು ಹೆಚ್ಚು ಕಾಳಜಿ. ಹೀಗಾಗಿ, ವ್ಯಾಯಾಮ ಮತ್ತು ಯೋಗಕ್ಕೆ ಪ್ರಾಶಸ್ತ್ಯ ನೀಡುತ್ತಾರೆ. ಆದರೆ, ಯೋಗದ ನಾಡಾದ ಭಾರತದಲ್ಲಿ ಜನ ಯೋಗದ ಪ್ರಯೋಜನ ತಿಳಿದುಕೊಳ್ಳದಿರುವುದು ದುರದೃಷ್ಟಕರ ಸಂಗತಿ. ಇಲ್ಲಿನ ಶೇ. 90ರಷ್ಟು ಮಹಿಳೆಯರು ಭಾರತೀಯ ಯೋಗಕ್ಕೆ ಮಾರುಹೋಗಿದ್ದು, ಪ್ರತಿ ದಿನ ಆಸನ ಮಾಡುವ ಮೂಲಕ ಆರೋಗ್ಯ ಕಾಪಾಡುಕೊಳ್ಳುತ್ತಾರೆ. ಇನ್ನು ಪುರುಷರು ಶೇ. 90ರಷ್ಟು ಜನ ಜಿಮ್‌ಗಳಿಗೆ ಹೋಗುತ್ತಾರೆ. ಮಹಿಳೆಯರು ಹೆಚ್ಚಾಗಿ ಯೋಗಕ್ಕೆ ಆದ್ಯತೆ ನೀಡುತ್ತಾರೆ. ನಮ್ಮ ದೇಶದಲ್ಲೂ ಎಲ್ಲರೂ ಯೋಗ ಕಲಿತು ಉತ್ತಮ ಆರೋಗ್ಯ ಹೊಂದಬೇಕು. ಆರೋಗ್ಯ ಕಾಳಜಿ ಬೆಳೆಸಿಕೊಳ್ಳಬೇಕು ಎನ್ನುತ್ತಾರೆ ರಾಜೀವ್ ಕುಮಾರ್.
ನೂರಾರು ಜನರಿಂದ ತರಬೇತಿ
ಭಾರತದ ಸಾವಿರಾರು ಜನ ದೇಶ-ವಿದೇಶಗಳಲ್ಲಿ ಯೋಗ ತರಬೇತಿ ನೀಡುತ್ತಿದ್ದಾರೆ. ಅದರಲ್ಲಿ ಕುಂದಗೋಳ ತಾಲೂಕಿನ ನೂರಾರು ಜನ ವಿಯೇಟ್ನಾಂ ದೇಶವೊಂದರಲ್ಲೇ ತರಬೇತಿ ನೀಡುತ್ತಿದ್ದಾರೆ. ಹತ್ತು ವರ್ಷಗಳಲ್ಲಿ ಕುಂದಗೋಳ ತಾಲೂಕಿನ ಯುವಕರು ಲಕ್ಷಕ್ಕಿಂತಲೂ ಅಧಿಕ ಜನರಿಗೆ ಯೋಗ ತರಬೇತಿ ನೀಡಿದ್ದಾರೆ. ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ ತರಬೇತಿ, ಬೋಧನೆ, ತರಗತಿಗಳು, ಶಿಬಿರಗಳನ್ನು ನಡೆಸುವಲ್ಲಿ ನಿರತರಾಗಿದ್ದಾರೆ. ಇವರಲ್ಲಿ ತರಬೇತಿ ಪಡೆದ ಅಲ್ಲಿಯ ಜನ ಈಗ ವಿವಿಧೆಡೆ ತರಬೇತಿ ಕೇಂದ್ರಗಳನ್ನು ತೆರೆದಿದ್ದಾರೆ. ಆದರೆ, ಭಾರತೀಯ ಮೂಲದ ಶಿಕ್ಷಕರಿರುವಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ತರಬೇತಿಗಾಗಿ ಬರುತ್ತಾರೆ ಎಂದು ಸಂತಸದಿಂದ ಹೇಳುತ್ತಾರೆ ಅಲ್ಲಿನ ತರಬೇತುದಾರರು.