ಕನ್ನಡಪ್ರಭ ವಾರ್ತೆ ಧಾರವಾಡ
ಜಿಪಂ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖೆ ಮತ್ತೆ ಚುರುಕುಗೊಂಡಿದ್ದು, ಹಲವು ತಿಂಗಳ ಬಳಿಕ ಸಿಬಿಐ ಅಧಿಕಾರಿಗಳು ನಗರಕ್ಕೆ ಆಗಮಿಸಿದ್ದಾರೆ.ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಚೆನ್ನಕೇಶವ ಟಿಂಗರೀಕರ ಬಂಧನಕ್ಕಾಗಿ ಭಾನುವಾರ ಬೆಳ್ಳಂಬೆಳಗ್ಗೆ ಇಲ್ಲಿನ ಮಲಪ್ರಭಾನಗರದಲ್ಲಿನ ಚೆನ್ನಕೇಶವ ಮನೆಗೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದರು. ಆದರೆ ಅವರ ಆಗಮನ ಮಾಹಿತಿ ತಿಳಿಯುತ್ತಿದ್ದಂತೆ ಮನೆ ಹಿಂದಿನ ಬಾಗಿಲಿನಿಂದ ಕಾಲ್ಕಿತ್ತಿದ್ದಾರೆ.
ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸಿಲ್ಲ ಎಂಬ ಕಾರಣಕ್ಕೆ ಟಿಂಗರೀಕರ ವಿರುದ್ಧವೂ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಹೀಗಾಗಿ, ಚೆನ್ನಕೇಶವ ನಿರೀಕ್ಷಣಾ ಜಾಮೀನು ಪಡೆದಿದ್ದರು. ಜಾಮೀನು ಅವಧಿ ಮುಗಿದ ಕಾರಣ ಪುನಃ ಹೈಕೋರ್ಟ್ ಮೊರೆ ಹೋಗಿ ತನ್ನ ವಿರುದ್ಧದ ಎಫ್‌ಐಆರ್‌ಗೆ ತಡೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾಗೊಂಡಿದ್ದರಿಂದ ಸಿಬಿಐ ಅಧಿಕಾರಿಗಳು ಬಂಧನಕ್ಕಾಗಿ ಆಗಮಿಸಿದ್ದರು.ಅಧಿಕಾರಿಗಳು ಮನೆಗೆ ಆಗಮಿಸುತ್ತಿದ್ದಂತೆ ಹಿಂಬಾಗಿಲಿನಿಂದ ಪರಾರಿಯಾಗಿದ್ದಾರೆ. ಸಿಬಿಐ ಅಧಿಕಾರಿಗಳು ಟಿಂಗರೀಕರ ಮೊಬೈಲ್ ಜಾಡು ಹಿಡಿದು ಹುಡುಕಾಟ ಆರಂಭಿಸಿದ್ದಾರೆ. ಇದಲ್ಲದೆ ಮನೆ ಸದಸ್ಯರು ಹಾಗೂ ಕುಟುಂಬಸ್ಥರನ್ನು ಮನೆಯಲ್ಲೇ ಇರಿಸಿಕೊಂಡು ವಿಚಾರಣೆ ಸಹ ನಡೆಸಿದ್ದಾರೆ.
ಹು-ಧಾ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಪಿಐ ಚನ್ನಕೇಶವ ಟಿಂಗರೀಕರ ಇತ್ತೀಚಿಗಷ್ಟೇ ಬೆಳಗಾವಿಯ ಪೊಲೀಸ್ ಆಯುಕ್ತರ ಕಚೇರಿಗೆ ವರ್ಗವಾಗಿದ್ದರು. ಮಾಜಿ ಸಚಿವ, ಧಾರವಾಡ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಯೋಗೇಶಗೌಡ ಹತ್ಯೆಯ ಪ್ರಮುಖ ಆರೋಪಿಯಾಗಿದ್ದಾರೆ.