ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಭಾರತೀಯ ಸಂಸ್ಕೃತಿ ಎಂದರೆ ಯೋಗಯುಕ್ತ, ರೋಗ ಮುಕ್ತ ಜೀವನ ಕ್ರಮವಾಗಿದೆ. ಒಳ್ಳೆಯ ಆರೋಗ್ಯದಿಂದ ಮಾತ್ರ ಸದೃಢ ಸ್ವಾಸ್ಥ್ಯ ಸಮಾಜ, ದೇಶ, ವಿಶ್ವವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ರಬಕವಿಯ ಅರವಳಿಕೆ ತಜ್ಞ ಡಾ.ರವಿ ಜಮಖಂಡಿ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ರಬಕವಿ ಬನಹಟ್ಟಿ, ವಲಯಗಳು ತೇರದಾಳ, ಮಹಾಲಿಂಗಪುರ ಸಂಯುಕ್ತಾಶ್ರಯದಲ್ಲಿ ರಬಕವಿಯ ವೈದ್ಯ ಡಾ.ಜಿ.ಎಚ್.ಚಿತ್ತರಗಿಯವರ ಆಸ್ಪತ್ರೆ ಉದ್ಯಾನವನದಲ್ಲಿ ನಡೆದ ಪುಸ್ತಕಾವಲೋಕನ-೩೨ ಕಾರ್ಯಕ್ರಮದಲ್ಲಿ ಅಥಣಿಯ ವೈದ್ಯ ಸಾಹಿತಿ ಡಾ.ಅಣ್ಣಪ್ಪ ಪಾಂಗಿಯವರ ಆಹಾರದಿಂದ ಆರೋಗ್ಯದೆಡೆಗೆ ಕೃತಿಯನ್ನು ಅವಲೋಕಿಸಿ ಮಾತನಾಡಿದರು. ಜನಸಾಮಾನ್ಯರಿಗೆ ಆರೋಗ್ಯದ ಹಿತದೃಷ್ಟಿಯಿಂದ ಉಪಯುಕ್ತವಾದ ಸರಳ ಲೇಖನಗಳ ಮೂಲಕ ಆಹಾರದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಒಳ್ಳೆಯ ಆರೋಗ್ಯಕ್ಕಾಗಿ ಸುಂದರ ಬದುಕಿಗಾಗಿ ಪ್ರೇರಣೆ ನೀಡುವ ಕೃತಿ ಇದಾಗಿದೆ. ಹಾಲು, ಮೊಟ್ಟೆ ಉತ್ಕೃಷ್ಟ ಆಹಾರ. ಪ್ರತಿ ಮನುಷ್ಯನು ಆಹಾರ ಕ್ರಮ ಪಾಲಿಸಬೇಕು. ಶುದ್ಧ ನೀರು ಕುಡಿಯಬೇಕು. ಉತ್ತರ ಕರ್ನಾಟಕದ ಆಹಾರ ಉತ್ತಮವಾಗಿದೆ ಎಂದು ಬಣ್ಣಿಸಿದರು.ಅಥಣಿಯ ವೈದ್ಯ ಸಾಹಿತಿ ಡಾ.ಅಣ್ಣಪ್ಪ ಪಾಂಗಿಯವರು ಸಂವಾದ ನಡೆಸಿದ್ದು, ಬಂದ ಪ್ರಶ್ನೆಗಳಿಗೆ ಉತ್ತರಿಸಿದರು. ಬೇಕರಿ ಐಟಂ ವಿಷಕಾರಿ, ರಸ್ತೆ ಬದಿ ಮಾರುವ ಆಹಾರವನ್ನ ಸೇವಿಸಬೇಡಿ. ಮನೆಯೊಳಗೆ ಊಟ ಮಾಡಿ, ೯೦ ವರ್ಷ ದಾಟಿದರೂ ನಗುನಗುತ ಬದುಕಬಹುದು. ಜಪಾನ್ ದೇಶದಲ್ಲಿ ಅತಿ ಹೆಚ್ಚು ಶತಾಯುಷಿಗಳಿದ್ದಾರೆ. ದೇಹದ ತೂಕದ ಅನುಗುಣವಾಗಿ ಆಹಾರ ಸೇವಿಸಿ. ಬೋರ್ ಮತ್ತು ಬಾವಿಯ ನೀರನ್ನು ಪರೀಕ್ಷಿಸದೆ ಕುಡಿಯಬಾರದು. ಆಹಾರ ಕುರಿತು ಪ್ರಸಾರವಾಗುವ ಜಾಹೀರಾತುಗಳಿಗೆ ಮಾರು ಹೋಗಬೇಡಿ ಎಂದು ಸಲಹೆ ಸೂಚನೆಗಳನ್ನು ನೀಡಿದರು.ಎಂ.ಎಸ್.ಬದಾಮಿ, ಪತ್ರಕರ್ತರಾದ ನೀಲಕಂಠ ದಾತಾರ, ಬಸಯ್ಯ ವಸ್ತ್ರದ, ರವೀಂದ್ರ ಅಷ್ಟಗಿ, ಹಿರಿಯ ಸಾಹಿತಿ ಡಾ.ಡಿ.ಎ.ಬಾಗಲಕೋಟ, ಗೌರಿ ಮಿಳ್ಳಿ, ಸುವರ್ಣ ಕೊಪ್ಪದ, ಮಲ್ಲೇಶಪ್ಪ ಕುಚನೂರ ಸಂವಾದದಲ್ಲಿ ಆಹಾರ, ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು. ರಬಕವಿಯ ಡಾ.ಜಿ.ಎಚ್.ಚಿತ್ತರಗಿ ಅಧ್ಯಕ್ಷತೆ ವಹಿಸಿ ಪ್ರತಿಯೊಬ್ಬರು ಆಹಾರ, ಆರೋಗ್ಯದ ಮಹತ್ವ ಅರಿತು ಜೀವನ ಸುಖಮಯಗೊಳಿಸುವಂತೆ ತಿಳಿಸಿದರು.ರಬಕವಿ ಬನಹಟ್ಟಿ-ತಾಲೂಕು ಕಸಾಪ ಅಧ್ಯಕ್ಷ ಮ.ಕೃ.ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸೆಪ್ಟೆಂಬರ್ ತಿಂಗಳು ಶ್ರೀ ಸಿದ್ಧೇಶ್ವರ ಶ್ರೀಗಳ ಭಗವತ್ ಚಿಂತನೆ, ಅಕ್ಟೋಬರ್ ತಿಂಗಳು ಸಿದ್ಧರಾಜ ಪೂಜಾರಿಯವರ ಗೀತ ಗಾಂಧಾರ, ನವ್ಹಂಬರ್ ತಿಂಗಳು ಮಂಕುತಿಮ್ಮನ ಕಗ್ಗ, ಡಿಸೆಂಬರ್ ತಿಂಗಳು ಎಂ.ಎಸ್. ಬದಾಮಿಯವರ ಆರ್ಥಿಕ ಪ್ರಬಂಧಗಳು, ಜನೇವರಿಯಲ್ಲಿ ಶಿವಾನಂದ ದಾಶಾಳ ಅವರ ಶರಣ ಸಂಗಮ ಕೃತಿಗಳ ಅವಲೋಕನ ನಡೆಯಲಿದೆ ಎಂದು ತಿಳಿಸಿದರು.ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಮಹಾಲಿಂಗಪುರ ವಲಯ ಅಧ್ಯಕ್ಷ ಬಸವರಾಜ ಮೇಟಿ, ಮಲ್ಲಿಕಾರ್ಜುನ ಹೆಗ್ಗಳಗಿ, ಡಾ.ಬಿ.ಎನ್.ಬಾಗಲಕೋಟ, ಡಾ.ಸಂಗಮೇಶ ಹತಪಾಕಿ, ಜಿ.ಎಸ್.ವಡಗಾವಿ, ಇಂದುಧರ ಬೆಳಗಲಿ, ದಾನಪ್ಪ ಆಸಂಗಿ, ಯಶವಂತ ವಾಜಂತ್ರಿ, ಈರಣ್ಣ ಗಣಮುಖಿ, ಎಸ್.ಡಿ.ಅರಬಳ್ಳಿ, ಶೋಭಾ ಅರಬಳ್ಳಿ, ಮೃತ್ಯುಂಜಯ ರಾಮದುರ್ಗ, ಬಿ.ಎಂ.ಮಟ್ಟಿಕಲ್ಲಿ ಮುಂತಾದವರು ಉಪಸ್ಥಿತರಿದ್ದರು. ನಂದಾ ಕೊಕಟನೂರ ಪ್ರಾರ್ಥಿಸಿದರು. ಚಂದ್ರಕಾಂತ ಹೊಸೂರ ನಿರೂಪಿಸಿದರು. ಶಿವಾನಂದ ದಾಶಾಳ ವಂದಿಸಿದರು.----------------------------------ಕೋಟ್‌ಮನೆಯ ಊಟ ಮಾಡಿ, ೯೦ ವರ್ಷ ದಾಟಿದರೂ ನಗುನಗುತ ಬದುಕಬಹುದು. ಜಪಾನ್ ದೇಶದಲ್ಲಿ ಅತಿ ಹೆಚ್ಚು ಶತಾಯುಷಿಗಳಿದ್ದಾರೆ. ದೇಹದ ತೂಕದ ಅನುಗುಣವಾಗಿ ಆಹಾರ ಸೇವಿಸಬೇಕು. ಬೋರ್ ಮತ್ತು ಬಾವಿಯ ನೀರನ್ನು ಪರೀಕ್ಷಿಸದೆ ಕುಡಿಯಬಾರದು. ಆಹಾರ ಕುರಿತಾದ ಜಾಹೀರಾತುಗಳಿಗೆ ಮಾರು ಹೋಗಬೇಡಿ.
ಡಾ.ಅಣ್ಣಪ್ಪ ಪಾಂಗಿ, ವೈದ್ಯ ಮತ್ತು ಸಾಹಿತಿ