ಕನ್ನಡಪ್ರಭ ವಾರ್ತೆ ದಾವಣಗೆರೆ
ಪಂಚಮಸಾಲಿ ಮೀಸಲಾತಿ ಹೋರಾಟ ಹತ್ತಿಕ್ಕಲು ಪೊಲೀಸರಿಂದ ಹಲ್ಲೆ ಮಾಡಿಸಿ, ಗಾಯದ ಮೇಲೆ ಬರೆ ಎಳೆದಂತೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದನ್ನು ಸಮಾಜ ಎಂದಿಗೂ ಮರೆಯುವುದಿಲ್ಲ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.ನಗರದಲ್ಲಿ ಮಂಗಳವಾರ ದಾಸೋಹ ದಿನಾಚರಣೆ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲೇ ಲಿಂಗಾಯತರ ಮೇಲೆ ಯಾರೂ ಹೀಗೆ ಹಲ್ಲೆ ಮಾಡಿರಲಿಲ್ಲ. ಲಿಂಗಾಯತರ ಮೇಲೆ ಮಾರಣಾಂತಿಕ ಹಲ್ಲೆಗೆ ಈಗಿನ ರಾಜ್ಯ ಸರ್ಕಾರ ಕಾರಣವಾಗಿದೆ ಎಂದರು.
ನಮ್ಮ ಸಮುದಾಯದ ಹೋರಾಟವನ್ನು ಹತ್ತಿಕ್ಕಲು ಉದ್ದೇಶ ಪೂರ್ವಕವಾಗಿಯೇ ಪೊಲೀಸರಿಂದ ಹಲ್ಲೆ ಮಾಡಿಸಲಾಗಿದೆ. ಕೆಲವರ ಮೇಲಂತೂ ಮಾರಣಾಂತಿಕ ಹಲ್ಲೆಯಾಗಿದೆ. ಈವರೆಗೆ ಸರ್ಕಾರವು ನಮಗಾಗಲೀ, ಸಮಾಜಕ್ಕಾಗಲೀ ಕ್ಷಮಾಪಣೆ ಕೇಳಿಲ್ಲ. ಹೋರಾಟ ನಿರತ ಲಿಂಗಾಯತರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ಮೇಲೂ ಕ್ರಮ ಕೈಗೊಂಡಿಲ್ಲ ಎಂದು ಸ್ವಾಮೀಜಿ ಕಿಡಿ ಕಾರಿದರು.ಬೆಳಗಾವಿಯಲ್ಲಿ ಲಿಂಗಾಯತ ಸಮಾಜದವರ ಮೇಲೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನಡೆಸಿದ ದೌರ್ಜನ್ಯದ ಬಗ್ಗೆ ಮಾನವ ಹಕ್ಕುಗಳ ಆಯೋಕ್ಕೆ ನಮ್ಮ ಸಮಾಜದ ವಕೀಲರು ದೂರು ನೀಡಿದ್ದಾರೆ. ಲಿಂಗಾಯತ ಮೀಸಲಾತಿ ಹೋರಾಟವನ್ನು ಅಸಂವಿಧಾನಿಕ ಹೋರಾಟವೆಂದು ಸಿಎಂ ಸಿದ್ದರಾಮಯ್ಯ ಸದನದಲ್ಲೇ ಹೇಳಿದ್ದಾರೆ. ಹೊಡಿದಿದ್ದೇ ಅಲ್ಲದೇ, ಗಾಯದ ಮೇಲೆ ಬರೆ ಎಳೆಯುವಂತೆ ಸಿದ್ದರಾಮಯ್ಯ ಮಾತನಾಡಿದ್ದಾರೆ ಎಂದು ಅವರು ಆಕ್ರೋಶ ಹೊರ ಹಾಕಿದರು.
ಮತ್ತೆ ಸಿದ್ದರಾಮಯ್ಯ ಬಳಿ ಹೋಗಿ ನಾವು ಮೀಸಲಾತಿಯನ್ನು ಕೇಳುವುದಿಲ್ಲ. ಫೆ.14ರಿಂದ ರಾಜ್ಯಾದ್ಯಂತ ಪ್ರತಿ ಹಳ್ಳಿ ಹಳ್ಳಿಗೂ ಸಂಚಾರ ಮಾಡುತ್ತೇವೆ. ರಾಜ್ಯ ಸರ್ಕಾರವು ಲಿಂಗಾಯತ ಸಮಾಜಕ್ಕೆ ಮಾಡಿದ ಅನ್ಯಾಯದ ಬಗ್ಗೆ ಜನರಿಗೂ ತಿಳಿಸುತ್ತೇವೆ. ಲಿಂಗಾಯತರಿಗೆ ಲಾಠಿ ಏಟು, ಬೂಟಿನ ಏಟು ಕೊಟ್ಟವರಿಗೆ ಏನು ಉತ್ತರ ಕೊಡುತ್ತೀರಿ ಎಂಬುದಾಗಿ ಸಮಾಜ ಬಾಂಧವರು, ಜನರಿಗೆ ಕೇಳುವ ಮೂಲಕ ಇಂತಹ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದು ಅವರು ತಿಳಿಸಿದರು.ಅದೇ ರೀತಿ ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡುತ್ತೇವೆ ಎನ್ನುವವರಿಗೆ ಏನು ಉತ್ತರ ಕೊಡುತ್ತೀರಿ ಎಂಬ ವಿಚಾರವನ್ನು ಜನರ ಮುಂದಿಡುತ್ತೇವೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಹಳ್ಳಿ ಹಳ್ಳಿಗೂ ಹೋಗಿ, ಪ್ರತಿಜ್ಞಾ ಕ್ರಾಂತಿ ಅಭಿಯಾನ ಕೈಗೊಳ್ಳುತ್ತೇವೆ. ಇದೇ ಸಿದ್ದರಾಮಯ್ಯನವರು 20 ವರ್ಷ ಕಾಲವೇನೂ ಮುಖ್ಯಮಂತ್ರಿ ಆಗಿಯೇ ಇರುವುದಿಲ್ಲ ಎಂದು ಅವರು, ಲಿಂಗಾಯತರ ಮೇಲೆ ಲಾಠಿ ಚಾರ್ಜ್ ಮಾಡಿ, ಬೂಟಿನೇಟು ಬೀಳಲು ಕಾರಣವಾದ ಸರ್ಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯಗೆ ಸೂಚ್ಯವಾಗಿ ಎಚ್ಚರಿಸಿದರು.
ದೇವರ ದಯೆಯಿಂದ ಮುಂದೆ ಬೇರೊಬ್ಬರು ಮುಖ್ಯಮಂತ್ರಿಯಾಗಿ ಬರುತ್ತಾರೆ. ಅಂತಹ ಹೊಸ ಮುಖ್ಯಮಂತ್ರಿ ಬಳಿಯೇ ನಾವು ನ್ಯಾಯ ಕೇಳುತ್ತೇವೆ. ಜನರ ಮುಂದೆಯೂ ಹೋಗುತ್ತೇನೆ. ಜನರ ಮುಂದೆ ಹೋಗಿ, ದೌರ್ಜನ್ಯ ಮಾಡಿದವರಿಗೆ ಆಶೀರ್ವಾದ ಮಾಡುತ್ತಾರೋ, ಇಲ್ಲವೇ ಸಮಾಜಕ್ಕೆ ಪ್ರೀತಿ ಕೊಡುವವರಿಗೆ ಆಶೀರ್ವಾದ ಮಾಡುತ್ತಾರೋ, ಈ ನಿರ್ಧಾರವನ್ನು ನಾವು ಜನರಿಗೆ ಬಿಡುತ್ತೇವೆ ಎಂದು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.