ಕನ್ನಡಪ್ರಭ ವಾರ್ತೆ ಬೆಂಗಳೂರು
ಬುಧವಾರ ಬಿಡಿಎ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಆದ್ಯತೆಯಲ್ಲಿ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ನಿವೇಶನಗಳನ್ನು ಹಂಚಿಕೆ ಮಾಡುತ್ತೇವೆ. ಆ ನಂತರ ಶಿವರಾಮ ಕಾರಂತ ಬಡಾವಣೆ ನಿವೇಶನಕ್ಕೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ಬಿಡಿಎ ಕಚೇರಿಗಳಲ್ಲಿ ಆಫ್‍ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗುವುದು. ಅರ್ಜಿ ಸಲ್ಲಿಸಿದ ನಂತರ ಅರ್ಜಿದಾರರು ಒಂದು ತಿಂಗಳಲ್ಲಿ ನಿವೇಶನದ ಒಟ್ಟು ಮೊತ್ತದ ಶೇ.12.5ರಷ್ಟು ಆರಂಭಿಕ ಠೇವಣಿ ಪಾವತಿಸಬೇಕು. ಪರಿಶಿಷ್ಟರು ಶೇ.5ರಷ್ಟು ಠೇವಣಿ ಕಟ್ಟಬೇಕು. ಬಹಳ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಲಾಗುವುದು. ಯಾವುದೇ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.ಶಿವರಾಮ ಕಾರಂತ ಬಡಾವಣೆಯಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಾಣಕ್ಕೆ 45 ಅಡಿ ರಸ್ತೆ ಇರುವ ಕಡೆ 25-30 ಎಕರೆ ಜಾಗ ಗುರುತಿಸಲಾಗಿದೆ. ಕಂಠೀರವ ಕ್ರೀಡಾಂಗಣ ಮಾದರಿಯಲ್ಲಿ ಬೆಂಗಳೂರು ಉತ್ತರ ಭಾಗದಲ್ಲಿ ಮತ್ತೊಂದು ಕ್ರೀಡಾಂಗಣ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಸಿಎ ನಿವೇಶನ, ಪಾರ್ಕ್ ಎಲ್ಲವೂ ಇದೆ. ಇಲ್ಲಿ ಶೇ.4.2ರಷ್ಟು ಜಾಗದಲ್ಲಿ ನಿವೇಶನ ಮಾಡಲಾಗಿದ್ದು, ಉಳಿದ ಜಾಗವನ್ನು ಅಗಲವಾದ ರಸ್ತೆ ಹಾಗೂ ಇತರೆ ಸೌಕರ್ಯಕ್ಕೆ ಬಳಸಲಾಗಿದೆ ಎಂದು ತಿಳಿಸಿದರು.ರೈತರಿಗೆ ಮೊದಲ ಆದ್ಯತೆ
ಈ ಬಡಾವಣೆಯಲ್ಲಿ 9500 ನಿವೇಶನಗಳನ್ನು ಭೂಮಿ ಕಳೆದುಕೊಂಡವರಿಗೆ ನೀಡಬೇಕಾಗಿದೆ. 4750ಕ್ಕೂ ಹೆಚ್ಚು ಕಾರ್ನರ್ ನಿವೇಶನಗಳನ್ನು ಕಾನೂನಿನ ಪ್ರಕಾರದಂತೆ ಇ-ಹರಾಜು ಹಾಕಲಾಗುವುದು. ಉಳಿದ 10 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಜನರಿಗೆ ಹಂಚಿಕೆ ಮಾಡಲಾಗುತ್ತಿದೆ. ಗ್ರಾಹಕರಿಗೆ ಸುಲಭವಾಗಿ ಸಾಲ ಸಿಗುವಂತೆ ಅನುಕೂಲ ಒದಗಿಸಲು 9 ಬ್ಯಾಂಕುಗಳನ್ನು ಗುರುತಿಸಿದ್ದೇವೆ ಎಂದರು.ಬಿಸಿನೆಸ್ ಕಾರಿಡಾರ್
ಬೆಂಗಳೂರಿನ ಉತ್ತರದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲು ತೀರ್ಮಾನಿಸಿದ್ದು, ಬಹಳ ಒತ್ತಡವಿದ್ದರೂ ಇದರ ಡಿನೋಟಿಫಿಕೇಶನ್ ಮಾಡುವುದಿಲ್ಲ. ಇದಕ್ಕೆ ಈಗ ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಎಂದು ನಾಮಕರಣ ಮಾಡಿದ್ದೇವೆ. ಮುಂದಿನ ಒಂದು ವಾರದಲ್ಲಿ ಈ ರಸ್ತೆಗೆ ಜಾಗತಿಕ ಟೆಂಡರ್ ಕರೆಯಲಾಗುವುದು. ಯಾರು ಬೇಕಾದರೂ ಭಾಗವಹಿಸಬಹುದು. ಭೂಮಿ ಕಳೆದುಕೊಳ್ಳುವ ರೈತರಿಗೆ ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.ಹೊಸ ಲೇಔಟ್‌ಗೆ ಯೋಜನೆ
ಹೊಸ ಲೇಔಟ್‍ಗಳನ್ನು ಮಾಡಬೇಕೆಂಬ ಯೋಜನೆ ಇದೆ. ಜಾಗಗಳನ್ನು ಗುರುತಿಸಿ ಭೂಸ್ವಾಧೀನ ಮಾಡಬೇಕು. ಇದಕ್ಕಾಗಿ ಜಾಗ ಗುರುತಿಸುತ್ತಿದ್ದೇವೆ. ಬಿಡಿಎ ಲಾಭದಾಯಕ ಉದ್ಯಮ ಸಂಸ್ಥೆಯಲ್ಲ. ಬೇರೆಯವರು ಲೇಔಟ್ ಮಾಡುವ ಮುನ್ನ ಯೋಜನೆಗೆ ಅನುಮತಿ ಸಿಕ್ಕ ತಕ್ಷಣವೇ ಗ್ರಾಹಕರಿಂದ ಶೇ.10-20 ಹಣ ಪಡೆಯುತ್ತಾರೆ. ಬಿಡಿಎ ಲೇಔಟ್ ನಂತರ ಹಣ ಪಡೆಯುತ್ತದೆ. ಬಿಡಿಎ ಎಂದಿಗೂ ರಿಯಲ್ ಎಸ್ಟೇಟ್ ಸಂಸ್ಥೆಯಾಗಲು ಸಾಧ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.