ಕನ್ನಡಪ್ರಭ ವಾರ್ತೆ, ಕೊಪ್ಪ
ದೇವರಿಗೆ ನಿಜವಾಗಲೂ ಹತ್ತಿರದಲ್ಲಿರುವವರು ಒಕ್ಕಲಿಗ, ಏಕೆಂದರೆ ಪ್ರತೀ ಹೆಜ್ಜೆಯಲ್ಲಿಯೂ ದೇವರನ್ನು ನೆನೆದು ಕೃಷಿ ಚಟುವಟಿಕೆ ಮಾಡುತ್ತಾನೆ. ತಾನು ಬೆಳೆದ ಪ್ರತಿಯೊಂದು ವಸ್ತುವನ್ನು ದೇವರಿಗೆ ಸಮರ್ಪಿಸುತ್ತಾನೆ. ಆದ್ದರಿಂದ ಒಕ್ಕಲಿಗ ದೇವರಿಗೆ ಅತಿ ಹತ್ತಿರದಲ್ಲಿದ್ದಾನೆ ಎಂದು ಶೃಂಗೇರಿ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.ಮೇಗುಂದಾ ಹೋಬಳಿ ವ್ಯಾಪ್ತಿಯ ಕುಂದೂರಿನಲ್ಲಿ ನಡೆದ ಹೇರೂರು ಯುವ ಒಕ್ಕಲಿಗ ವೇದಿಕೆ ಉದ್ಘಾಟನೆಯಲ್ಲಿ ಆಶೀರ್ವಚನ ನೀಡಿ ಸ್ವರ್ಗ-ನರಕ ಬೇರೆಲ್ಲೂ ಇರುವುದಿಲ್ಲ, ಅವಿಭಕ್ತ ಕುಟುಂಬದಲ್ಲಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಹಾಗೂ ಅವರು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠೆ ಬೆಳೆಸಿಕೊಂಡರೆ ಸ್ವರ್ಗ ಕಾಣಬಹುದಾಗಿದೆ. ಸಂಘಟನೆ ಮಾಡಿದಾಗ ಅದರಿಂದ ಜನ ಸಾಮಾನ್ಯರಿಗೆ ಒಳ್ಳೆಯದಾಗಬೇಕು. ಅದು ಮಠದ ಬಯಕೆ. ಮುಂದಿನ ದಿನದಲ್ಲಿ ಬಿಜಿಎಸ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸೋಣ ಎಂದರು.ಚಿಕ್ಕಮಗಳೂರಿನ ಖ್ಯಾತ ವಕೀಲ ಎಸ್ ಎಸ್ ವೆಂಕಟೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಒಕ್ಕಲಿಗರು ತಮ್ಮ ಸೇವೆ ಸಲ್ಲಿಸುವಲ್ಲಿ ವಿಶೇಷ ಪ್ರಯತ್ನ ಮಾಡಿದ್ದಾರೆ. ಒಕ್ಕಲಿಗರು ಮೂಲತಃ ಕೃಷಿ ಚಟುವಟಿಕೆ ಯಲ್ಲಿ ಇದ್ದು, ಇದರೊಂದಿಗೆ ಸಾಹಿತ್ಯ, ಕ್ರೀಡೆ, ರಾಜಕೀಯ, ನಗರ ಉದ್ಯೋಗಗಳಲ್ಲೂ ಕಾಣಿಸಿಕೊಂಡಿದ್ದಾರೆ. ಒಕ್ಕಲಿಗ ಸಮುದಾಯದಲ್ಲಿ ಜಾನಪದ ಕಲೆ ವಿಶೇಷವಾಗಿದ್ದು, ಎಲ್ಲ ಧಾರ್ಮಿಕ ಹಾಗೂ ಕೃಷಿ ಚಟುವಟಿಕೆಗಳಿಗೆ ಜಾನಪದ ಹಾಡುಗಳನ್ನು ಹಾಡುತ್ತಿದ್ದರು ಎಂದರು.
ಯುವ ಒಕ್ಕಲಿಗ ವೇದಿಕೆ ಗೌರವಾಧ್ಯಕ್ಷ ಪ್ರಸನ್ನ ಕುಮಾರ್ ಕಿಬ್ಳಿ ಮಾತನಾಡಿ, ಮೂಡ ನಂಬಿಕೆಗಳಿಗೆ ಬಲಿಯಾಗಿರುವ ಸಮಾಜದ ಜಾಗೃತಿಗೆ, ಸಮಾಜದಲ್ಲಿರುವ ಕೆಲ ಯುವಕರನ್ನು ದುಶ್ಚಟಗಳಿಂದ ದೂರ ತರುವ ಸಲುವಾಗಿ, ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಸಲುವಾಗಿ, ಆರ್ಥಿಕವಾಗಿ ಹಿಂದುಳಿದವರನ್ನು ಮುಂದೆ ತರುವುದು, ಸಮಾಜದಲ್ಲಿ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ಸಮಸ್ಯೆ ಇರುವವರಿಗೆ ಸಹಕಾರ ಮಾಡುವುದು ಇಂತಹ ಯೋಜನೆಗಳನ್ನು ಇಟ್ಟುಕೊಂಡು ವೇದಿಕೆ ಪ್ರಾರಂಭಿ ಸಿದ್ದೇವೆ. ಯಾವುದೇ ರಾಜಕೀಯ ಕಾರಣಕ್ಕಾಗಿಯೋ, ಇನ್ನಾವುದೋ ಜಾತಿ ಸಂಘಟನೆಗೆ ಪ್ರತಿಸ್ಪರ್ಧಿಯಾಗಿ ನಮ್ಮ ಸಂಘಟನೆ ಆರಂಭವಾಗಿಲ್ಲ ಎಂದರು.ಒಕ್ಕಲಿಗ ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದ ಯುವ ಸಾಧಕರಾದ ಜಯಪುರ ಬಿಜಿಎಸ್ ಅಧ್ಯಾಪಕಿ ಅರ್ಪಿತ ಡಿ.ಎನ್, ನಿವೃತ್ತ ಸೈನಿಕ ಹೆನ್ನಂಗಿಯ ಸಜಿತ್ ಕುಮಾರ್, ಜೈ ಮಲ್ನಾಡ್ ಫ್ರೆಂಡ್ಸ್ ನ ಪ್ರಕಾಶ್ ಕೆಳಕೊಡಿಗೆ ಯವರನ್ನು ಗೌರವಿಸ ಲಾಯಿತು. ಹೋಬಳಿ ಸರ್ಕಾರಿ ಶಾಲೆಗಳ ಆಯ್ದ ಒಕ್ಕಲಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕುಂದೂರು ಸರ್ಕಾರಿ ಶಾಲೆಗೆ ಮಕ್ಕಳ ಕುರ್ಚಿಗಳನ್ನು ವಿತರಿಸಲಾಯಿತು. ಸೀಗೋಡಿನಿಂದ ಕುಂದೂರುವರೆಗೆ ವಾಹನಜಾಥ ನಡೆಸಲಾಯಿತು.
ಕಾರ್ಯ ಕ್ರಮದಲ್ಲಿ ಯುವ ಒಕ್ಕಲಿಗ ವೇದಿಕೆ ಅಧ್ಯಕ್ಷ ವಿಜೇಂದ್ರ ನಿಡುವಾನೆ, ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್, ನಿರ್ದೇಶಕ ಪೃಥ್ವಿರಾಜ್ ಕೌರಿ, ಅಧ್ಯಾಪಕ ರಾಘವೇಂದ್ರ, ಯುವ ಒಕ್ಕಲಿಗ ವೇದಿಕೆಯ ಕಾರ್ಯದರ್ಶಿ ವರುಣ್, ಖಜಾಂಚಿ ನಿರೀಕ್ಷಿತ್, ಉಪಾಧ್ಯಕ್ಷ ವಿಕ್ರಂ ಶಾಂತಿಪುರ ನಿರ್ದೇಶಕರಾದ ನಾಗರಾಜ್, ರಕ್ಷಿತ್ ಹಾಗೂ ಇತರ ಸದಸ್ಯರು, ಐದುನೂರಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ನಾಗರೀಕರು ಭಾಗವಹಿಸಿದ್ದರು.