ಶಿವಮೊಗ್ಗ: ಪ್ರತಿಭಾ ಪುರಸ್ಕಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಅಭಿಪ್ರಾಯಪಟ್ಟರು.
ಪ್ರತಿಯೊಬ್ಬ ಮಕ್ಕಳಲ್ಲಿ ಒಂದೊಂದು ಪ್ರತಿಭೆ ಅಡಕವಾಗಿರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಕ್ಕಳು ಮುಂದೆ ಬರಲು ಸಾಧ್ಯಗುತ್ತದೆ. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಅತ್ಯಂತ ಮಹತ್ವದ ಕಾರ್ಯ ಮಾಡುತ್ತಿದೆ. ಅದರಲ್ಲೂ ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಅಂಬೇಡ್ಕರ್ ಅವರ ಹತ್ತಿರ ಯಾವುದೇ ಆಸ್ತಿ ಹಣ ಇಲ್ಲದಿದ್ದರೂ ಇಡೀ ಜಗತ್ತು ಅವರನ್ನು ಗುರುತಿಸಿತು. ಕಾರಣ ಅವರಲ್ಲಿ ಇರುವ ವಿದ್ಯೆ. ಆ ವಿದ್ಯೆಯಿಂದಲೇ ಅವರು ನಮ್ಮ ಸಂವಿಧಾನವನ್ನು ರಚಿಸಿ ಇಡೀ ಜಗತ್ತಿಗೆ ಮಾದರಿಯಾದರು. ಇಂತಹ ಮಹಾನ್ ವ್ಯಕ್ತಿಯ ಹೆಸರಿನಿಂದ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಾಧನೆ ಮಾಡಿರುವ ವಿದ್ಯಾರ್ಥಿನಿಯರಿಗೆ ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.ಕೆನರಾ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ಆರ್.ದೇವರಾಜ್ ಮಾತನಾಡಿ, ಕಳೆದ 20 ವರ್ಷಗಳಿಂದ ಕೆನರಾ ಬ್ಯಾಂಕ್ ವಿದ್ಯಾ ಜ್ಯೋತಿಯನ್ನು ನೀಡುತ್ತಿದೆ. ಪ್ರತಿ ಶಾಖೆಯಿಂದ ಆರು ಮಕ್ಕಳಂತೆ 62 ಶಾಖೆಯಿಂದ 372 ಮಕ್ಕಳಿಗೆ ಒಟ್ಟು 15 ಲಕ್ಷ ರು. ಶಿವಮೊಗ್ಗ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಿಂದ ನೀಡುತ್ತಿದೆ ಎಂದು ತಿಳಿಸಿದರು.
5, 6 ಹಾಗೂ 7ನೇ ತರಗತಿ ಮಕ್ಕಳಿಗೆ 3000 ಹಾಗೂ 8, 9, 10ನೇ ತರಗತಿ ಮಕ್ಕಳಿಗೆ 5000 ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿನಿಯರು ಐದನೇ ತರಗತಿಯಲ್ಲಿ ವಿದ್ಯಾರ್ಥಿವೇತನ ತೆಗೆದುಕೊಳ್ಳಲು ಪ್ರಾರಂಭಿಸಿದರೆ ಹತ್ತನೇ ತರಗತಿಯವರೆಗೂ ಪ್ರತಿಭಾ ಪುರಸ್ಕಾರ ತೆಗೆದುಕೊಳ್ಳುವಂತೆ ಆಗಬೇಕು ಎಂದು ಹಾರೈಸಿದರು.ನಾನೂ ಕೂಡ 10ನೇ ತರಗತಿಯಲ್ಲಿ 25 ರು. ಪ್ರತಿಭಾ ಪುರಸ್ಕಾರ ಪಡೆದಿದ್ದೆ. ಮೊತ್ತ ಮುಖ್ಯವಲ್ಲ ಪ್ರತಿಭೆಯನ್ನು ಗುರುತಿಸುವುದು ಬಹಳ ಮುಖ್ಯ. ಕೆನರಾ ಆಸ್ಪೈರ್ (aspire) ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೆನರಾ ಬ್ಯಾಂಕಿನ ವಿವಿಧ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಕೋರಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಡಿವಿಜನಲ್ ಮ್ಯಾನೇಜರ್ ರಾಜು ಅಣಜಿ, ಹಿರಿಯ ವ್ಯವಸ್ಥಾಪಕರಾದ ಪ್ರಶಾಂತ್, ಗೀತಾಂಜಲಿ ಪ್ರಸನ್ನ ಕುಮಾರ್ ವಿವಿಧ ಶಾಖೆಯ ಮುಖ್ಯಸ್ಥರು ಹಾಗೂ ಪೋಷಕರು ಉಪಸ್ಥಿತರಿದ್ದರು.