ಪ್ರಕರಣ ಸಿಬಿಐಗೆ ವಹಿಸಿ, ಇಲ್ಲವೇ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿಬಳ್ಳಾರಿ: ಗನ್ನು, ಗುಂಡು ನಿಮ್ಮದು. ಗುಂಡು ಹಾರಿಸಿದವರು ನಿಮ್ಮವರು; ಸತ್ತವರೂ ನಿಮ್ಮವರು. ಕೇಸು ಮಾತ್ರ ಜನಾರ್ದನ ರೆಡ್ಡಿ, ಶ್ರೀರಾಮುಲು ಮೇಲೆ ದಾಖಲಿಸುವುದು ಯಾವ ನ್ಯಾಯ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ಐದು ನಿಮಿಷದಲ್ಲಿ ಮನೆ ಸುಟ್ಟು ಹಾಕುತ್ತೇನೆಂದು, ತಾಳ್ಮೆ ಕಳೆದುಕೊಂಡರೆ ಬಳ್ಳಾರಿ ಭಸ್ಮ ಮಾಡುತ್ತೇನೆ ಎಂದು ಹೇಳುವ, ಹುಟ್ಟುವಾಗಲೇ ನಾನು ಶ್ರೀಮಂತ ಎಂದು ಹೇಳುವ ಭರತ್ ರೆಡ್ಡಿ, ಹೃದಯ ಶ್ರೀಮಂತಿಕೆಯಿಂದ, ಸಮಾಜ ಸೇವೆ, ಜನರ ಸೇವೆಯೊಂದಿಗೆ ರಾಜಕಾರಣ ಮಾಡಬೇಕೇ ಹೊರತು ಆಡಂಬರದ ಶ್ರೀಮಂತಿಕೆಯಿಂದ, ಗುಂಡು ಹೊಡೆದು ಆಡಳಿತ ನಡೆಸುವುದು ಅಲ್ಲ ಎಂದರು.
ಗುಂಡಿನ ದಾಳಿ ನಡೆಸಿದ ಅಂಗರಕ್ಷಕರನ್ನು, ಅವರನ್ನು ಕೆಲಸಕ್ಕೆ ಇಟ್ಟುಕೊಂಡವರನ್ನು ಸರ್ಕಾರ ಬಂಧಿಸಬೇಕಾಗಿತ್ತು. ಆದರೆ, ಗನ್ನುಗಳನ್ನು ಬಂಧಿಸಲಾಗಿದೆಯಂತೆ! ಗುಂಡು ನಿಮ್ಮದು, ಗನ್ ನಿಮ್ಮದು, ಜನ ನಿಮ್ಮವರು, ಸತ್ತ ಕಾರ್ಯಕರ್ತ ಕಾಂಗ್ರೆಸಿಗ. ಆದರೆ ಎಫ್‌ಐಆರ್ ಮಾತ್ರ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಮೇಲೆನಾ ಎಂದು ಸರ್ಕಾರವನ್ನು ಪ್ರಶ್ನಿಸಿದರು.ನಮ್ಮನ್ನು ನಾಟಕ ಕಂಪನಿ ಎನ್ನುವ ಡಿಸಿಎಂ ಡಿ.ಕೆ. ಶಿವಕುಮಾರ್, ಕಾಂಗ್ರೆಸಿಗಿಂತ ನಾಟಕ ಕಂಪನಿ ದೇಶದಲ್ಲಿ ಮತ್ತೊಂದು ಇದೆಯಾ ಎಂಬುದನ್ನು ತಿಳಿಸಲಿ. ಆ ನಾಟಕ ಕಂಪನಿಗೆ ಡಿ.ಕೆ.ಶಿವಕುಮಾರ ಅವರೇ ಮಾಲೀಕ ಎಂದು ಟೀಕಿಸಿದರು.
ಮನೆಯನ್ನು ಸುಟ್ಟು ಹಾಕುತ್ತೇನೆ, ಜನಾರ್ದನ ರೆಡ್ಡಿ ಅವರನ್ನು ಮುಗಿಸುತ್ತೇನೆ, ತಾಳ್ಮೆ ಕೆಟ್ಟರೆ ಬಳ್ಳಾರಿಯನ್ನು ಸುಟ್ಟು ಹಾಕುತ್ತೇನೆ ಎಂದು ಶಾಸಕ ಹೇಳುತ್ತಾನೆ ಎಂದರೆ ಅವನ ಸ್ಥಾನಕ್ಕೆ ಏನಾದರೂ ಮಾನ್ಯತೆ ಇದೆಯೇ? ಆ ಶಾಸಕನನ್ನು ಕಾಂಗ್ರೆಸ್ ಏಕೆ ಅಮಾನತು ಮಾಡಿಲ್ಲ ಎಂದು ಕೇಳಿದರಲ್ಲದೆ, ಪ್ರಕರಣವನ್ನು ಸಿಬಿಐಗೆ ವಹಿಸಿ, ಇಲ್ಲವೇ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ ಎಂದು ಒತ್ತಾಯಿಸಿದರು.