ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಶಾಮನೂರು ಕುಟುಂಬದವರೇ ನಿಲ್ಲಲಿ. ಹೊಡೆದರೆ ಹುಲಿಯನ್ನೇ ಹೊಡೆಯಬೇಕು ಎನ್ನುವುದೇ ನಮ್ಮ ಗುರಿ. ಅವರು, ಹುಲಿಯಲ್ಲ, ಬೆಕ್ಕು ಎಂಬುದನ್ನು ಈ ಸಲ ತೋರಿಸುತ್ತೇವೆ ಎಂದು ಬಿಜೆಪಿ ಹಿರಿಯ ಮುಖಂಡ, ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯಶವಂತ ರಾವ್ ಜಾಧವ್ ಹೇಳಿದ್ದಾರೆ.
- ನಾನು ಸೇರಿದಂತೆ 8 ಮಂದಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಿದ್ದೇವೆ
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಶಾಮನೂರು ಕುಟುಂಬದವರೇ ನಿಲ್ಲಲಿ. ಹೊಡೆದರೆ ಹುಲಿಯನ್ನೇ ಹೊಡೆಯಬೇಕು ಎನ್ನುವುದೇ ನಮ್ಮ ಗುರಿ. ಅವರು, ಹುಲಿಯಲ್ಲ, ಬೆಕ್ಕು ಎಂಬುದನ್ನು ಈ ಸಲ ತೋರಿಸುತ್ತೇವೆ ಎಂದು ಬಿಜೆಪಿ ಹಿರಿಯ ಮುಖಂಡ, ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯಶವಂತ ರಾವ್ ಜಾಧವ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾವ್ಯಾರೂ ಗ್ರಾಪಂ ಸದಸ್ಯ, ಶಾಸಕ, ಸಚಿವ, ಸಂಸದರ ಪುತ್ರರಲ್ಲ. ಬಡ ಮತ್ತು ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದು, ಪಕ್ಷದಲ್ಲಿ ಗುರುತಿಸಿಕೊಂಡವರಾಗಿದ್ದೇವೆ. ಯಾರದ್ದೋ ಬಾಲ ಹಿಡಿದುಕೊಂಡು ನಾವ್ಯರೂ ಅಧಿಕಾರ ಮಾಡಿದವರಲ್ಲ ಎಂದರು.
ನಗರಸಭೆ ಸದಸ್ಯ, ಅಧ್ಯಕ್ಷ, ಪಕ್ಷದ ಜಿಲ್ಲಾಧ್ಯಕ್ಷ, ದೂಡಾ ಅಧ್ಯಕ್ಷನಾಗಿ, 4 ಸಲ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದವರು. ನಾನು ಸೇರಿದಂತೆ 8 ಮಂದಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಿದ್ದೇವೆ. ಎಂ.ಪಿ. ಕೃಷ್ಣಮೂರ್ತಿ ಪವಾರ್, ಬಿ.ಜಿ. ಅಜಯಕುಮಾರ, ಟಿ.ಶ್ರೀನಿವಾಸ ದಾಸಕರಿಯಪ್ಪ, ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಬಿ.ಎಂ. ಸತೀಶ ಕೊಳೇನಹಳ್ಳಿ, ಎಚ್.ಸಿ. ಜಯಮ್ಮ ನಮ್ಮಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷ ಮತ್ತು ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದರು.
ಈ ಹಿಂದೆ ಬಿ.ಲೋಕೇಶ, ಬಿ.ಅಜಯಕುಮಾರಗೆ ದಕ್ಷಿಣ ಕ್ಷೇತ್ರದ ಟಿಕೆಟ್ ನೀಡಿದಾಗಲೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ. ನಾಯಕರನ್ನು ಪ್ರಶ್ನಿಸುವ ಅಧಿಕಾರ ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೂ ಇದೆ. ಬಿಜೆಪಿಯಲ್ಲಿ ಹೊಡೆದಾಡಿಕೊಂಡಿದ್ದಾರೆಂಬ ಹೇಳಿಕೆ ನೀಡಿದ ಸಚಿವ ಮಲ್ಲಿಕಾರ್ಜುನ ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆಯಾ ಎಂಬುದಕ್ಕೆ ಉತ್ತರಿಸಲಿ ಎಂದರು.
ಕುರುಬರ ಗುರುಗಳಾದ ದಿವಂಗತ ಚನ್ನಯ್ಯ ಒಡೆಯರ್‌ಗೆ ತುಳಿದಿರಿ. ವಿಧಾನಸಭೆ ಚುನಾವಣೆಗೆ ಟಿಕೆಟ್ ಕೇಳಿದ್ದ ಬಿ.ವೀರಣ್ಣ ವಿರುದ್ಧ ಸುಳ್ಳು ಜಾತಿ ನಿಂದನೆ ಕೇಸ್ ಹಾಕಿಸಿ, 3 ತಿಂಗಳು ಊರು ಬಿಡುವಂತೆ ಮಾಡಿದ್ದು ಯಾರು? ದಕ್ಷಿಣ ಕ್ಷೇತ್ರಕ್ಕೆ ಸ್ವತಃ ಎಸ್.ಎಸ್. ಮಲ್ಲಿಕಾರ್ಜುನ, ಎಸ್.ಎಸ್. ಗಣೇಶ, ಸಚಿವರ ಪುತ್ರ ಸಮರ್ಥ ಹೀಗೆ ಯಾರೇ ನಿಂತರೂ ಬಿಜೆಪಿ ಗೆಲುವಿಗೆ ನಾವೆಲ್ಲರೂ ಕೆಲಸ ಮಾಡುತ್ತೇವೆ. ಅಲ್ಪಸಂಖ್ಯಾತರು ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದಾರೆ. ಇನ್ನಾದರೂ ಸಚಿವರು ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಲಿ ಎಂದು ಯಶವಂತ ರಾವ್ ತಾಕೀತು ಮಾಡಿದರು.
ಪಕ್ಷದ ಮುಖಂಡರಾದ ಶಂಕರಗೌಡ ಬಿರಾದಾರ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ, ನವೀನಕುಮಾರ, ಗುರು ಸೋಗಿ, ಗೋವಿಂದರಾಜ, ಪಿ.ಎಸ್.ಜಗದೀಶಕುಮಾರ ಪಿಸೆ, ಕಿಶೋರಕುಮಾರ, ಬಾಲಚಂದ್ರ ಶ್ರೇಷ್ಠಿ, ರವಿಕುಮಾರ, ಹರೀಶ ಹೊನ್ನೂರು, ರಾಮಣ್ಣ ಹೊಸಮನಿ ಇತರರು ಇದ್ದರು.
- - -
(ಕೋಟ್)
ಟಿಕೆಟ್ ಕೇಳುವಂತಹ ಮುಖಂಡರನ್ನು, ಪಕ್ಷದಲ್ಲಿ ಪ್ರಶ್ನಿಸುವವರನ್ನೇ ತುಳಿಯುವ ಕೆಲಸ ಕಾಂಗ್ರೆಸ್ಸಿನ ಜಿಲ್ಲಾ ನಾಯಕರಿಂದ ಆಗುತ್ತದೆ. ಈಗ ಎಂಎಲ್‌ಸಿ ಅಬ್ದುಲ್ ಜಬ್ಬಾರ್‌ರಿಂದ ಊರು ಹಾಳಾಗುತ್ತಿದೆಯೆಂದು ಎಸ್.ಎಸ್. ಮಲ್ಲಿಕಾರ್ಜುನ ಹೇಳಿಕೆ ನೀಡುತ್ತಿದ್ದೀರಿ. ಅದೇ ಜಬ್ಬಾರ್ ನಿಮ್ಮ ಕುಟುಂಬಕ್ಕೆ 2 ವಿಧಾನಸಭೆ ಚುನಾವಣೆಗಳಿಗೆ ಟಿಕೆಟ್ ಕೊಡಿಸಿದ್ದನ್ನು ಮರೆತಿದ್ದೀರಾ?
- ಯಶವಂತ ರಾವ್ ಜಾಧವ್, ಬಿಜೆಪಿ ಮುಖಂಡ.
- - -
-10ಕೆಡಿವಿಜಿ3: ದಾವಣಗೆರೆಯಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ, ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಢಿಯಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.