ಬಳ್ಳಾರಿ: ದೇಶವು ಸಾಂಪ್ರದಾಯಿಕ ಗುಲಾಮಗಿರಿಯಿಂದ ಮುಕ್ತವಾದರೆ ಮಾತ್ರ ಸಂಪೂರ್ಣ ಸ್ವಾತಂತ್ರ್ಯ ಹೊಂದಲು ಸಾಧ್ಯ ಎಂದು ಹಿರಿಯ ಲೇಖಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಹೇಳಿದರು.
ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರ ಕ್ರಾಂತಿಕಾರಕ ಮಾನವ ಧರ್ಮ ಹೊಸ ವೈಚಾರಿಕತೆಯೆಡೆಗೆ ಸಾಗಿತ್ತು. ಭಾಷೆ, ಸಂಸ್ಕೃತಿ, ಪರಂಪರೆಯಲ್ಲಿ ಚಳವಳಿಗಳಿಂದ ಮೂಡಿದ ಹೊಸ ಬದಲಾಣೆಯಿಂದಾಗಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಗುರುತಿಸಿದೆ. ಅಭಿವೃದ್ಧಿಪರ ವಾಸ್ತವಿಕತೆಯಲ್ಲಿ ಜನರು ಜೀವಿಸಿದಾಗ ನಿಜವಾದ ಸ್ವಾತಂತ್ರ್ಯದ ಅನುಭವ ನಮಗೆ ಸಿಗುತ್ತದೆ. ಮಹಾನ್ ವ್ಯಕ್ತಿತ್ವವುಳ್ಳ ಗಾಂಧೀಜಿ, ಅಂಬೇಡ್ಕರ್ ಅವರ ವೈಚಾರಿಕ ತತ್ವಗಳಿಂದ ಇಂದು ದೇಶವನ್ನು ಗುರುತಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ, ಕೌಶಲ್ಯಾಧಾರಿತ ಕೋರ್ಸ್‌ಗಳನ್ನು ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಕೋರ್ಸುಗಳಿಗೆ ಆದ್ಯತೆ ನೀಡಬೇಕು. ಭವಿಷ್ಯದ ಕಡೆ ನಿಗಾ ವಹಿಸಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಇನ್ಫೋಸಿಸ್‌ನ ನಾರಾಯಣ ಮೂರ್ತಿ, ಸುಧಾಮೂರ್ತಿ, ಅಂಬಾನಿ, ಅದಾನಿ ಇನ್ನು ಮುಂತಾದ ಸಾಧನೆಗೈದ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಸಾಧಕರ ಕಾರ್ಯಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ವಿವಿಯ ಕಲಾ ನಿಕಾಯದ ಡೀನ್ ಪ್ರೊ. ಎನ್. ಶಾಂತನಾಯ್ಕ್ ಪ್ರಾಸ್ತಾವಿಕ ಮಾತನಾಡಿದರು.ಕಾಲೇಜು ಪ್ರಾಂಶುಪಾಲರಾದ ಡಾ. ಎನ್. ಸತ್ಯವತಿ, ಗಣಕಯಂತ್ರ ವಿಭಾಗದ ಡಾ. ಎಚ್. ರಾಚಪ್ಪ, ಡಾ. ಹನುಮೇಶ್, ಜಯಶೀಲ, ಡಾ. ವೇದಾಂತ ಸೇರಿದಂತೆ ಕಾಲೇಜು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.