ನರಗುಂದ:ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂತೆ ರೋಗಗಳು ಬರುತ್ತವೆ. ಆದ್ದರಿಂದ ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳು ತಂಬಾಕು ಸೇವನೆ ಮಾಡಬಾರದೆಂದು ಡಾ. ಅನಿತಾ ಬಗಾಡೆ ಹೇಳಿದರು.
1987 ಮೇ-31 ರಿಂದ ಪ್ರತಿವರ್ಷ ವಿಶ್ವ ತಂಬಾಕು ರಹಿತ ದಿನ ಎಂದು ಆಚರಿಸಲಾಗುತ್ತಿದೆ. ವಿಶ್ವದಾದ್ಯಂತ ತಡೆಗಟ್ಟಬಹುದಾದ ಕ್ಯಾನ್ಸರ್, ಹೃದಯ ಸಂಬಂಧಿ, ಶ್ವಾಸಕೋಶದ ಕಾಯಿಲೆ ಮತ್ತು ಮರಣಗಳಿಗೆ ತಂಬಾಕು ಸೇವನೆಯೇ ಪ್ರಮುಖ ಕಾರಣವಾಗಿದೆ. ಅದರಲ್ಲೂ ಯುವ ಪೀಳಿಗೆ ತಂಬಾಕಿನ ಯಾವುದಾದರೊಂದು ಉತ್ಪನ್ನಗಳ ಬಳಕೆ ಹೆಚ್ಚಾಗಿದ್ದು ಅದನ್ನು ನಿಯಂತ್ರಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದೇ ಈ ಒಂದು ದಿನಾಚರಣೆಯ ಉದ್ದೇಶವಾಗಿದೆ ಎಂದು ತಿಳಿಸಿದರು. ಟ
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ. ಕೊಣ್ಣೂರ ಮಾತನಾಡಿ, ಪ್ರತಿವರ್ಷ ಜಗತ್ತಿನಲ್ಲಿ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಮರಣ ಹೊಂದುತ್ತಾರೆ. ತಂಬಾಕು ಸೇವನೆ ಮಾಡುವವರು, ತಂಬಾಕು ಸೇವನೆ ಮಾಡದವರಿಗಿಂತ 10 ವರ್ಷ ಹೆಚ್ಚು ವಯಸ್ಸಾದವರಿಗಿಂತ ಕಾಣುತ್ತಾರೆ. ಕರ್ನಾಟಕದಲ್ಲಿ ಶೇ. 23ರಷ್ಟು ವ್ಯಕ್ತಿಗಳು ಯಾವುದಾದರೂ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುತ್ತಾರೆ. ಸುಮಾರು 19ನೇ ವಯಸ್ಸಿನಲ್ಲಿಯೇ ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡಲು ಆರಂಭಿಸುತ್ತಾರೆ. ಇದರಿಂದ ಬಾಯಿ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಆಗಲು ಕಾರಣವಾಗುತ್ತದೆ. ತಂಬಾಕು ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸಲು ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯಿದೆ 2003ರನ್ವಯ ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶಿಸುವಂತಿಲ್ಲ. 18 ವರ್ಷದೊಳಗಿನ ಮಕ್ಕಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಮತ್ತು ಖರಿದಿ ಮಾಡುವಂತಿಲ್ಲ. ಶಿಕ್ಷಣ ಸಂಸ್ಥೆಗಳ ಸುತ್ತ ಮುತ್ತ 100ಗಜ ಅಂತರದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ತಂಬಾಕು ಉತ್ಪನ್ನಗಳ ಚಿಲ್ಲರೆ ವಹಿವಾಟು ಮಾಡುವಂತಿಲ್ಲ. ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳ ಮುಂದೆ ತಂಬಾಕು ಕೊಲ್ಲುತ್ತದೆ ಎಂಬ ಚಿತ್ರವಿರುವ ಅಧಿಕೃತ ನಾಮಪಲಕ ಹಾಕಿರಬೇಕು. ಇವೆಲ್ಲವುಗಳನ್ನು ಪಾಲಿಸದೇ ಇದ್ದಲ್ಲಿ ಕಾನೂನು ಬಾಹಿರವಾಗುತ್ತದೆ. ಇಂತಹ ಕಾನೂನು ಉಲ್ಲಂಘನೆಯಾದಲ್ಲಿ ಶಿಕ್ಷೆ ಹಾಗೂ ದಂಡಕ್ಕೆ ಒಳಗಾಗುತ್ತಾರೆ ಎಂದು ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ಸಿ. ಕೊರವನವರ ಮಾತನಾಡಿ, ಬೀಡಿ ಮತ್ತು ಸಿಗರೇಟಗಳ ಬಳಕೆಯನ್ನು ಸಾರ್ವಜನಿಕ ಸ್ಥಳ ಮತ್ತು ಮನೆಗಳಲ್ಲಿ ಮಾಡುವುದರಿಂದ ಧೂಮಪಾನ ಮಾಡಿದವರಿಗಿಂತ, ಧೂಮಪಾನ ಮಾಡದೇ ಇರುವ ವ್ಯಕ್ತಿಗಳಿಗೆ ಅದೇ ಹೊಗೆಯ ಸೇವನೆಯಿಂದ ಶ್ವಾಸಕೋಶದ ಸಮಸ್ಯೆ ಉಂಟಾಗುತ್ತದೆ. ಮನೆಗಳಲ್ಲಿ ಹಿರಿಯರು ಮನೆಯಲ್ಲಿರುವ ಮಕ್ಕಳೊಂದಿಗೆ ತಂಬಾಕು ಉತ್ಪನ್ನಗಳನ್ನು ಅಂಗಡಿಗಳಿಂದ ತರಿಸಬಾರದು. ಇದರಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಧೂಮಪಾನದಿಂದ ಸುತ್ತಮುತ್ತಲಿರುವ ಮಕ್ಕಳು, ಗರ್ಭೀಣಿ ತಾಯಂದಿರು, ವಯೋವೃದ್ಧರಿಗೆ ಹೆಚ್ಚಿನ ಅಪಾಯಗಳು ಉಂಟಾಗುತ್ತದೆ. ವಿದ್ಯಾರ್ಥಿಗಳು ಇಂತಹ ದುಷ್ಚಟಗಳಿಂದ ದೂರವಿದ್ದು ಇತರರಿಗೂ ಮಾಹಿತಿ ನೀಡಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂ.ಪಿ. ಶಿಗ್ಗಾಂವಕರ, ನ್ಯಾಯವಾದಿ ರಮೇಶ ನಾಯ್ಕರ, ರೇಖಾ ಹಿರೇಹೊಳಿ, ಎಸ್.ಎಚ್.ಕಲೂತಿ, ಜಿ.ಆರ್. ಕೊರವರ, ಬಸವರಾಜ ಕೌಜಗೇರಿ, ಬಿ.ಕೆ. ಪಾಟೀಲ, ಆರೋಗ್ಯ ಇಲಾಖೆ ಹಾಗೂ ಕಾನೂನು ಇಲಾಖೆ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.
ಸಿ.ಪಿ. ಕುಂಬಾರ ಸ್ವಾಗತಿಸಿದರು. ಎಸ್.ಬಿ.ಕುರಹಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಕಲ್ಲಪ್ಪನವರ ವಂದಿಸಿದರು.