ಕನ್ನಡಪ್ರಭ ವಾರ್ತೆ ಬೆಂಗಳೂರು
ಯುವ ವಕೀಲರು ಜನರ ವೈಯಕ್ತಿಕ ಸ್ವಾತಂತ್ರ್ಯ, ಘನತೆ ಮತ್ತು ಸ್ವಾಯತ್ತತೆ ರಕ್ಷಣೆಗೆ ಸದಾ ಪ್ರಯತ್ನಿಸಬೇಕು. ಜನರ ನೋವಿಗೆ ದನಿಯಾಗಿ ಕಾನೂನು ಹೋರಾಟದ ಮೂಲಕ ನ್ಯಾಯ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.ನಗರದ ಸುಮನಹಳ್ಳಿಯ ಡಾ.ಬಾಬು ಜಗಜೀವನ್ ರಾಮ್ ಭವನದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ ವಿವಿಯ ಕುಲಾಧಿಪತಿಗಳು ಆಗಿರುವ ಅವರು1,079 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.
ವೃತ್ತಿ ಜೀವನದ ಆರಂಭದಲ್ಲಿ ಜೀವನ್ಮರಣದ ಹಲವು ವಿಚಾರ/ಪ್ರಶ್ನೆ ನಿಮಗೆ ಎದುರಾಗಬಹುದು. ಆದರೆ ಎಂತಹದ್ದೇ ತುರ್ತು ಪರಿಸ್ಥಿತಿ ಎದುರಾದರೂ ಸಾವಧಾನದಿಂದ ಇರಬೇಕು. ಜನರೊಂದಿಗೆ ಸಹನೆ, ಸಂಯಮ ಹಾಗೂ ಸಹಾನೂಭೂತಿಯಿಂದ ವರ್ತಿಸಬೇಕು. ಅವರ ನೋವಿಗೆ ದನಿಯಾಗಬೇಕು. ಕಾನೂನು ಹೋರಾಟ ನಡೆಸಿ ಜನರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಬೇಕು. ಚಾಣಾಕ್ಷರೆಂದು ಕರೆಸಿಕೊಳ್ಳುವ ಜೊತೆಗೆ ಕರುಣೆವುಳ್ಳವರಾಗಿ ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಕೀಲಿಕೆ ಆರಂಭಿಸಿದ ನಂತರ ಜನರ ವೈಯಕ್ತಿಕ ಸ್ವಾತಂತ್ರ್ಯ, ಘನತೆ ಮತ್ತು ಸ್ವಾಯತ್ತತೆ ಮುಂತಾದ ಶಾಶ್ವತ ಮೌಲ್ಯಗಳ ರಕ್ಷಣೆಗೆ ಸದಾ ಪ್ರಯತ್ನಿಸಬೇಕು. ಸವಾಲುಗಳು ಎದುರಾದಾಗ ಅಂತಾರಾತ್ಮ ಮತ್ತು ವೈಯುಕ್ತಿಕ ಮೌಲ್ಯಗಳ ಆಧಾರದಲ್ಲಿ ತೀರ್ಮಾನ ಕೈಗೊಳ್ಳಬೇಕು. ಒಳಧ್ವನಿ ಮತ್ತು ದೃಷ್ಟಿಕೋನವನ್ನು ಯಾವತ್ತೂ ಕೀಳಾಗಿ ಅಂದಾಜಿಸಬಾರದು. ವೃತ್ತಿ ಜೀವನದಲ್ಲಿನ ಸ್ವಂತಿಕೆ ಹಾಗೂ ಮೌಲ್ಯ ಕಾಯ್ದುಕೊಂಡರೆ, ಸುತ್ತಲಿನ ಜನರನ್ನು ನಿಮ್ಮತ್ತ ಆಕರ್ಷಿತರಾಗುತ್ತಾರೆ. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ಅರಿತುಕೊಂಡು ನಡೆದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಮು.ನ್ಯಾ ಚಂದ್ರಚೂಡ್ ಕಿವಿಮಾತು ಹೇಳಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ವಿವಿಯ ಕುಲಪತಿ ಸುಧೀರ್ ಕೃಷ್ಣಸ್ವಾಮಿ ಹಾಗೂ ಭಾರತೀಯ ವಕೀಲರ ಪರಿಷತ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಹಾಜರಿದ್ದರು.ಘಟಿಕೋತ್ಸವದಲ್ಲಿ 2 ಪಿಎಚ್‌ಡಿ, 52 ಸ್ನಾತಕೋತ್ತರ ಸಾರ್ವಜನಿಕ ನೀತಿ, 90 ಸ್ನಾತಕೋತ್ತರ ಕಾನೂನು, 85 ಕಲಾ ಮತ್ತು ಕಾನೂನು (ಆನರ್ಸ್) ಮತ್ತು 850 ಆನ್‌ಲೈನ್ ಮತ್ತು ಹೈಬ್ರಿಡ್ ಶಿಕ್ಷಣ ಸೇರಿವಿವಿಧ ವಿಷಯಗಳಲ್ಲಿ ಪದವಿ ಪೂರೈಸಿದ ಒಟ್ಟು 1079 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಮಾಡಲಾಯಿತು.