ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಶೌಚಾಲಯ ಸಮೀಪ ಸೋಮವಾರ ಹಾಡುಹಗಲೇ ಯುವಕನ ಬರ್ಬರ ಹತ್ಯೆ ನಡೆದಿದ್ದು, ಪಟ್ಟಣದ ಜನತೆಯನ್ನು ಬೆಚ್ಚಿಬೀಳಿಸಿದೆ.ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಶೌಚಾಲಯ ಸಮೀಪ ಸೋಮವಾದ ಬೆಳಗ್ಗೆ ೧೧ರ ಸಮಯದಲ್ಲಿ ಚನ್ನಕೇಶವ ಗೌಡರ ಬೀದಿಯ ನಿವಾಸಿ ಗಿರೀಶ್ (೩೬) ಎಂಬುವರನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಪಟ್ಟಣದ ಸಮೀಪದ ಸೂರಾಪುರ ಗ್ರಾಮದ ಶ್ರೀನಿವಾಸ ಅಲಿಯಾಸ್ ಸೀನ ಕೊಲೆಗೈದು ತಲೆಮರೆಸಿಕೊಂಡ ಆರೋಪಿಯಾಗಿದ್ದಾನೆ. ಗಿರೀಶ್ ಬೆಂಗಳೂರಿನ ಬೇಕರಿ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ಭಾನುವಾರ ಬೇಲೂರಿಗೆ ತನ್ನ ಮನೆಗೆ ಬಂದಿದ್ದು ರಾತ್ರಿ ಗಿರೀಶ್ ಹಾಗೂ ಸೀನನ ನಡುವೆ ಪ್ರೀತಿಸುತ್ತಿದ್ದ ಯುವತಿಯ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿತ್ತು. ನಂತರ ಸ್ನೇಹಿತರು ಪರಸ್ಪರ ಮಾತನಾಡಿ ಶಾಂತಗೊಳಿಸಿದ್ದರು. ಆದರೆ ಸೋಮವಾರ ಗಿರೀಶ್ ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋಗಿ ವಾಪಸ್ಸು ಬರುತ್ತಿದ್ದ ಸಂದರ್ಭದಲ್ಲಿ ಪಟ್ಟಣದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೀನ ಅಂಗಡಿಯಲ್ಲಿದ್ದ ಕೋಳಿ ಕತ್ತರಿಸುವ ಮಚ್ಚನ್ನು ತಂದು ತೀವ್ರವಾಗಿ ತಲೆ ಕುತ್ತಿಗೆ ಹಾಗೂ ಇತರ ಭಾಗಗಳಿಗೆ ದಾಳಿ ನಡೆಸಿ ಕೊಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಇವನಿಂದ ತಪ್ಪಿಸಿಕೊಳ್ಳಲು ಗಿರೀಶ್ ಓಡಾಡಿದ ದೃಶ್ಯ ಅಕ್ಕಪಕ್ಕದ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಿರೀಶ್ ನನ್ನು ಸ್ಥಳೀಯರು ಹಾಸನ ಜಿಲ್ಲಾಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕರೆತರುವ ಸಂದರ್ಭದಲ್ಲಿ ಮಾರ್ಗಮಧ್ಯೆ ಗಿರೀಶ್ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.ಸಾರ್ವಜನಿಕರ ಆಕ್ರೋಶ:
ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಇಲ್ಲದಿರುವ ಬಗ್ಗೆ ಕನ್ನಡಪ್ರಭ ವರದಿ ಮಾಡಿತ್ತು. ಬಸ್ ನಿಲ್ದಾಣದ ಅನತಿ ದೂರದಲ್ಲಿ ಪೊಲೀಸ್ ಠಾಣೆ ಇದೆ. ಇನ್ನು ಬಸ್ ನಿಲ್ದಾಣದಲ್ಲಿ ಯಾವುದೇ ರೀತಿಯ ಸಿಸಿ ಕ್ಯಾಮರಾವಿಲ್ಲ. ಇಲ್ಲಿ ಚಿಕ್ಕಪುಟ್ಟ ಗಲಾಟೆ ನಡೆದರೂ ಸಹ ಇದರ ಬಗ್ಗೆ ಸಾರಿಗೆ ಅಧಿಕಾರಿಗಳು ತಲೆಕೆಡೆಸಿಕೊಳ್ಳದಿರುವುದರಿಂದ ಇಂತಹ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.