ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದ ಹಾಸನ-ಮೈಸೂರು ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಾಲೂಕಿನ ಕೃಷ್ಣಪುರದ ಜಗದೀಶ್ ಎಂಬುವರ ಪುತ್ರ ಕೆ.ಜೆ. ಧನಂಜಯ್ಯ(೨೫) ಎಂಬ ಯುವಕ ಜನ್ಮದಿನದಂದೇ ಮೃತಪಟ್ಟು, ಸುಮಂತ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಟ್ಟಣದ ಕನಕ ಭವನ ವೃತ್ತ ಸಮೀಪ ಹೆದ್ದಾರಿಯ ರಸ್ತೆಯಲ್ಲಿ ಚರಂಡಿ ನಿರ್ಮಾಣಕ್ಕೆಂದು ತೆಗೆದಿರುವ ಗುಂಡಿಗೆ ಅಡ್ಡವಾಗಿ ಮಣ್ಣು ಹಾಕಿದ್ದು, ಯಾವುದೇ ಸೂಚನಾ ಫಲಕ ಅಥವಾ ರಿಲ್ಪೆಕ್ಟರ್ ಅಥವಾ ಬ್ಯಾರಿಕೇಡ್ ಹಾಕದ ಗುತ್ತಿಗೆದಾರನ ಬೇಜವಾಬ್ದಾರಿ ವರ್ತನೆಯಿಂದ ಅಮಾಯಕ ಯುವಕ ಅಪಘಾತದಲ್ಲಿ ಜನ್ಮದಿನದಂದೇ ಧನಂಜಯ್ಯ ಮೃತಪಟ್ಟಿದ್ದಾರೆ. ಹೆದ್ದಾರಿಯ ರಸ್ತೆಗೆ ಅಡ್ಡವಾಗಿ ಚರಂಡಿ ನಿರ್ಮಾಣಕ್ಕೆ ಗುಂಡಿ ತೆಗೆದು, ತಿಂಗಳು ಕಳೆದಿದ್ದರೂ, ತ್ವರಿತವಾಗಿ ಚರಂಡಿ ನಿರ್ಮಿಸದ ಗುತ್ತಿಗೆದಾರನ ವರ್ತನೆಯನ್ನು ಸಾರ್ವಜನಿಕರು ಆಕ್ರೋಶದಿಂದ ಖಂಡಿಸಿದ್ದಾರೆ.
ರಸ್ತೆಯ ಪಕ್ಕದಲ್ಲಿ ಚರಂಡಿ ಮತ್ತು ಸ್ಲ್ಯಾಬ್ ನಿರ್ಮಿಸುತ್ತಿದ್ದು, ತುರ್ತು ಸೇವೆಗೆ ಅಗತ್ಯವಿರುವ ಶವಾಗಾರದ ಗೇಟ್ ಮುಂದಿನ ಚರಂಡಿಗೆ ಸ್ಲ್ಯಾಬ್ ನಿರ್ಮಿಸಿಲ್ಲ. ಆದರೆ ಅಗತ್ಯವಿಲ್ಲದ ಕಡೆಗಳಲ್ಲಿ ಸ್ಲ್ಯಾಬ್ ನಿರ್ಮಿಸಿದ್ದು, ನಾಗರಿಕರು ಆಡಳಿತ ವ್ಯವಸ್ಥೆಯನ್ನು ಶಪಿಸುತ್ತಾ, ಜನನಾಯಕರ ಜನಪರ ಕಾಳಜಿಯನ್ನು ಲೇವಡಿ ಮಾಡಿದ್ದಾರೆ. ಗುತ್ತಿಗೆದಾರನ ಬೇಜವಾಬ್ದಾರಿ ವರ್ತನೆಯಿಂದ ಅಮಾಯಕ ಯುವಕ ಧನಂಜಯ್ಯ ಮೃತಪಟ್ಟಿದ್ದು, ಮೃತ ಧನಂಜಯ್ಯ ಕುಟುಂಬಕ್ಕೆ ಹಾಗೂ ಗಾಯಾಳು ಸುಮಂತ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.