ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪಹರಣಕ್ಕೆ ಒಳಗಾದ ಚಂದಾಪುರ ನಿವಾಸಿ ಶೇಬಿನ್ ಬೇಬಿ ನೀಡಿದ ದೂರಿನ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಪೂನಂ ಎಂಬ ಮಹಿಳೆ ವಿರುದ್ಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಕೆಲವು ತಿಂಗಳಿಂದ ಡೇಟಿಂಗ್ ಆ್ಯಪ್ ಬಳಸುತ್ತಿದ್ದರು. ಆಗ ಪೂನಂ ಹೆಸರಿನ ಯುವತಿಯ ಪರಿಚಯ ಮಾಡಿಕೊಂಡಿದ್ದರು. ಇಬ್ಬರು ಪರಸ್ಪರ ಮೊಬೈಲ್ ಸಂಖ್ಯೆ ಹಂಚಿಕೊಂಡು ಮಾತುಕತೆ ಪ್ರಾರಂಭಿಸಿದ್ದರು. ಆರೋಪಿ ಯುವತಿ, ಆ.19ರಂದು ರಾತ್ರಿ 9.45ರ ವೇಳೆಗೆ ಪಬ್‌ಗೆ ಯುವಕನಿಗೆ ಬರಲು ಸೂಚಿಸಿದ್ದಳು. ಆಕೆಯ ಸೂಚನೆಯಂತೆ ಪಬ್ ಮುಂಭಾಗ ಯುವಕ ಕಾಯುತ್ತ ನಿಂತಿದ್ದ. ಆಗ ಕಾರಿನಲ್ಲಿ ಬಂದ ಯುವತಿ, ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಬರಲು ಆತನನ್ನು ತನ್ನ ಕಾರಿನಲ್ಲೇ ಕರೆದುಕೊಂಡು ಹೋಗಿದ್ದಳು.
ಪೆಟ್ರೋಲ್ ಹಾಕಿಸಿಕೊಂಡು ಬರಲು ಹೋದ ವೇಳೆ ಮಾರ್ಗ ಮಧ್ಯ ಮೂತ್ರ ವಿಸರ್ಜನೆ ಮಾಡಬೇಕೆಂದು ಕಾರನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದಳು. ಅಲ್ಲಿ ಆಕೆ ಕಾರಿನಿಂದ ಇಳಿದು ಕೆಳಗೆ ಹೋದಳು, ಕೆಲವೇ ನಿಮಿಷಗಳಲ್ಲಿ ನಾಲ್ವರು ಇದ್ದ ಗ್ಯಾಂಗ್‌ನವರು, ಶೇಬಿನ್ ಅವರನ್ನು ಬೆದರಿಸಿ, ಅದೇ ಕಾರಿನಲ್ಲಿ ಸ್ವಲ್ಪ ದೂರ ಕರೆದುಕೊಂಡು ಹೋಗಿ, ಅಲ್ಲಿಂದ ಬೂದು ಬಣ್ಣದ ಬೇರೊಂದು ಕಾರಿನಲ್ಲಿ ಕೂರಿಸಿಕೊಂಡು ನಗರದ ಸುತ್ತ ಸುತ್ತಾಡಿಸಿ ಒಟ್ಟು 3.75 ಲಕ್ಷ ರು.ಹಣ ದೋಚಿದ್ದಾರೆ.ಈ ಸಂಬಂಧ ಪೊಲೀಸರು ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡು, ಯುವತಿಯ ಮೊಬೈಲ್ ಸಂಖ್ಯೆ, ಎಟಿಎಂ ಹಾಗೂ ಪೆಟ್ರೋಲ್ ಬಂಕ್‌ಗಳ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ವಂಚಕ ಜಾಲದ ಬಂಧನಕ್ಕಾಗಿ ಶೋಧ ನಡೆಸಿದ್ದಾರೆ.
ದುಷ್ಕರ್ಮಿಗಳು, ದೂರುದಾರ ಶೇಬಿನ್ ಅವರನ್ನು ಅಪಹರಿಸಿ ನಗರದಲ್ಲಿ ಸುತ್ತಾಡುತ್ತಿದ್ದ ವೇಳೆ ಅವರ ಜೇಬಿನಲ್ಲಿದ್ದ 7 ಸಾವಿರ ನಗದು, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಅನ್ನು ಬಲವಂತವಾಗಿ ಕಿತ್ತುಕೊಂಡಿದ್ದರು. ಬಳಿಕ ಮಾರ್ಗ ಮಧ್ಯೆ ಕಂಡು ಬಂದ ಎಟಿಎಂ ಬಳಿ ಕಾರು ನಿಲ್ಲಿಸಿ ಬಲವಂತವಾಗಿ 45 ಸಾವಿರ ರು.ಗಳನ್ನು ಬಿಡಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಕ್ರೆಡಿಟ್ ಕಾರ್ಡ್ ಬಳಸಿ ಕಾರಿಗೆ ಪೆಟ್ರೊಲ್ ಹಾಕಿಸಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ರಾತ್ರಿಯಿಡಿ ಹೆದರಿಸಿ ಕಾರಿನಲ್ಲೇ ಸುತ್ತಾಡಿಸಿ, ಕ್ರೆಡಿಟ್ ಕಾರ್ಡ್‌ನ ಪಾಸ್‌ವರ್ಡ್ ಬದಲಿಸಿದ ಆರೋಪಿಗಳು, ಬರೊಬ್ಬರಿ 3.21 ಲಕ್ಷ ರು.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು, ಆ.20 ರ ಬೆಳಗ್ಗೆ 10 ಗಂಟೆ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದ ಸಮೀಪ ಬಿಟ್ಟು ಪರಾರಿಯಾಗಿದ್ದರು.