ಶಿರಸಿ: ಯುವಕರ-ಯುವತಿಯರು ನೈತಿಕತೆ ಗಡಿ ದಾಟಿ ಆಚೆಗೆ ಹೋಗುತ್ತಿದ್ದಾರೆ. ಅವರೆಲ್ಲರಿಗೂ ಹತ್ತಿಕೊಂಡಿರುವ ಭೋಗೈಕ ಭಾವನೆಗಳನ್ನು ದೂರ ಮಾಡಬೇಕು. ಸರಿಯಾದ ಮಾರ್ಗದರ್ಶನದ ಮೂಲಕ ಅಂತವರನ್ನು ಸರಿದಾರಿಗೆ ತರಬೇಕಿದೆ ಎಂದು ಸೋಂದಾ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಇತ್ತೀಚೆಗೆ ಯುವ ಸಮುದಾಯ ಭೋಗದಿಂದ ಓದುವ ಆಸಕ್ತಿ ಕಳೆದುಕೊಂಡು ಕುಟುಂಬದ ಆಚೆ ಹೋಗುತ್ತಾರೆ. ಉದ್ವೇಗದಿಂದ ಮಾನಸಿಕ, ದೈಹಿಕವಾಗಿ ಪರಿಣಾಮ ಬೀರುತ್ತವೆ. ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇದೆ. ಸಮಾಜದ ಸ್ವಾಸ್ಥ್ಯ ಕಾಪಾಡುವುದು ಧರ್ಮಪೀಠಗಳ ಕರ್ತವ್ಯವಾಗಿದೆ. ಹಿರಿಯರ ಹಿಡಿತ, ಕಟ್ಟುಪಾಡುಗಳು, ಸಂಸ್ಕಾರ ನೀಡುವುದರಿಂದ ಯುವಕರನ್ನು ಸರಿದಾರಿಗೆ ತರಬಹುದು. ನಿದ್ರೆ ಶರೀರಕ್ಕೆ ಹಾಗೂ ಮನಸ್ಸಿಗೆ ವಿಶ್ರಾಂತಿ. ಅತಿಯಾದ ಮೊಬೈಲ್ ಬಳಕೆಯಿಂದ ನಿದ್ರೆ ಕಡಿಮೆಯಾಗಿದೆ. ಇದರಿಂದ ರೋಗಗಳು ಹೆಚ್ಚಾಗಿ ಮನಸ್ಸಿನ ಸ್ವಾಸ್ಥ್ಯ ಕೆಟ್ಟು ಹೋಗಿದೆ. ದೇವರಲ್ಲಿ ಭಕ್ತಿ, ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಬೇಕು. ಆದರೆ ಇಂದು ಸಮಾಜ ಇವುಗಳಿಂದ ದೂರ ಹೋಗಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು. ಅಭ್ಯಾಸದ ಬಲವಿದ್ದರೆ ಆತಂಕದ ಸ್ಥಿತಿಯಲ್ಲಿ ಭಾವನೆಗಳನ್ನು ಪಡೆದುಕೊಳ್ಳು ಸಾಧ್ಯ ಎಂದರು.
ಸಣ್ಣವಯಸ್ಸಿನಲ್ಲಿ ಹೃದಯಘಾತ ಪ್ರಕರಣ ಹೆಚ್ಚಳವಾಗುತ್ತಿವೆ. ಜೀವನ ಶೈಲಿ ಬದಲಾಗಿರುವುದು ಹೃದಯಾಘಾತಕ್ಕೆ ಮುಖ್ಯ ಕಾರಣ ಎಂದು ಹೇಳುತ್ತಾರೆ. ವ್ಯಾಯಾಮದ ಕೊರತೆ, ಆಹಾರ ಪದ್ಧತಿ, ಮೊಬೈಲ್ ಬಳಕೆ ಕಾರಣವಾಗಿದೆ. ಧಾರ್ಮಿಕ ವ್ರತಾಚರಣೆಗಳನ್ನು ಮಾಡುವುದರಿಂದ ಮನಸ್ಸು, ಶರೀರವನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಎಂದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ ಎಸ್. ಮಾತನಾಡಿ, ಮನಸ್ಸಿಗೆ ಹಾಗೂ ದೈಹಿಕವಾಗಿ ನಿರ್ಬಂಧ ವಿಧಿಸಿಕೊಳ್ಳುವುದು ಅತ್ಯವಶ್ಯ. ಕಾನೂನು ಸರಿಯಾಗಿ ಪಾಲಿಸುವವರು ಬ್ರಾಹ್ಮಣರು. ಕುಟುಂಬ ಕಲ್ಯಾಣ ಯೋಜನೆಯನ್ನು ಮೊದಲು ಅಳವಡಿಸಿಕೊಂಡಿರುವವರು ಬ್ರಾಹ್ಮಣರು. ಆ ಕಾರಣದಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿ ವಿವಾಹವಾಗುವ ಬ್ರಾಹ್ಮಣ ಯುವಕರಿಗೆ ಯುವತಿ ಸಿಗುತ್ತಿಲ್ಲ. ವೇದಾಭ್ಯಾಸ, ಸಂಸ್ಕೃತದಿಂದ ವಿಮುಖರಾಗುತ್ತಿದ್ದಾರೆ. ಬ್ರಾಹ್ಮಣರು ಇದರ ಬಗ್ಗೆ ಚಿಂತನೆ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.
ಸನ್ಮಾನ ಸ್ವೀಕರಿಸಿ ಕೆ.ಎನ್.ಹೊಸಮನಿ ಮಾತನಾಡಿ, ಭಯ ಮತ್ತು ಅಜ್ಞಾನ ದೂರ ಮಾಡುವ ಅನನ್ಯ ಶಕ್ತಿ ಗುರುಗಳಲ್ಲಿರುತ್ತದೆ. ನಿಜ ಜ್ಞಾನದ ಬೆಳಕನ್ನು ಮತ್ತು ಪರಬ್ರಹ್ಮನ ದಾರಿ ಕಾಣಿಸುವವನು ಗುರು. ಪೂಜ್ಯರ ಆಶೀರ್ವಾದ ಅತ್ಯಂತ ಶ್ರೇಷ್ಠ ಅವಕಾಶ. ಭಾರತೀಯ ಪರಂಪರೆಯ ಚಾತುರ್ಮಾಸ್ಯ ಸಮಯದಲ್ಲಿ ಗುರುಗಳಿಂದ ಒಬ್ಬ ಅಧ್ಯಾಪಕನಿಗೆ ಶ್ರೀಗಳಿಂದ ಸನ್ಮಾನ ಲಭಿಸಿದ್ದಕ್ಕೆ ಧನ್ಯತಾಭಾವ ಲಭಿಸಿದಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ "ವೇದಾಂತ ಸಿದ್ಧಾಂತ ಸೂಕ್ತ ಮಂಜರಿ " ಗ್ರಂಥವನ್ನು ಉಭಯ ಶ್ರೀಗಳು ಲೋಕಾರ್ಪಣೆಗೊಳಿಸಿದರು.
ವೇದಾ ಹೆಗಡೆ ನೀರ್ನಳ್ಳಿ, ಪ್ರಾಂಶುಪಾಲ ಕೃಷ್ಣ ಜೋಶಿ ಸನ್ಮಾನ ಪತ್ರ ವಾಚಿಸಿದರು. ಗ್ರಂಥವನ್ನು ಕೆ.ವಿ. ಭಟ್ಟ ಶಿರಸಿ ಪರಿಚಯಿಸಿದರು. ಡಾ.ಮಹಾಬಲೇಶ್ವರ ಕಿರಕುಂಭತ್ತಿ ಗ್ರಂಥವನ್ನು ಪರಿಚಯಿಸಿದರು. ಡಾ.ವಿನಾಯಕ ಭಟ್ಟ ಗುಂಜಗೋಡ ನಿರೂಪಿಸಿದರು. ಎನ್.ಜಿ.ಹೆಗಡೆ ಭಟ್ರಕೇರಿ ವಂದಿಸಿದರು.