ರೋಟರಿ ’ಯುವಚೇತನ’ ಪ್ರತಿಭಾ ಸಂಭ್ರಮ ಆರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಯುವ ಜನರೇ ದೇಶದ ನಿಜವಾದ ಸಂಪತ್ತು. ಅವರಿಗೆ ಪ್ರಾಮುಖ್ಯತೆ ಕೊಟ್ಟರೆ ಸಾಮರ್ಥ್ಯ ಉಪಯುಕ್ತವಾಗುತ್ತದೆ ಎಂದು ರೋಟರಿ 3182 ಜಿಲ್ಲಾ ರಾಜ್ಯಪಾಲ ಸಿ.ಎ.ದೇವಾನಂದ ಹೇಳಿದರು.ಚಿಕ್ಕಮಗಳೂರು ರೋಟರಿಕ್ಲಬ್ ನಗರದ ಎಂ.ಎಲ್.ವಿ ರೋಟರಿ ಸಭಾಂಗಣದಲ್ಲಿ ಆಯೋಜಿಸಿರುವ ಪ್ರತಿಭೆ ಸಂಭ್ರಮ ’ಯುವ ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಚಿಕ್ಕಮಗಳೂರು ರೋಟರಿ ಕ್ಲಬ್ ಕಳೆದ 30 ವರ್ಷಗಳಿಂದ ಯುವ ಸಪ್ತಾಹವನ್ನು ಆಯೋಜಿಸುವ ಮೂಲಕ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುತ್ತಿದೆ. ಪ್ರತಿ ಯುವಕರಲ್ಲೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ನಿಜ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಂಬಲಿಸಿದರೆ ಅದರಿಂದ ಸಮಾಜಕ್ಕೆ ಉಪಯೋಗ ಎಂದರು.
ಸ್ವಾಮಿ ವಿವೇಕಾನಂದರಿಗೆ ಯುವ ಶಕ್ತಿಯ ಮೇಲೆ ಅಪಾರ ವಿಶ್ವಾಸವಿತ್ತು. ತರುಣರಲ್ಲಿ ಉತ್ತಮವಾದ ದೊಡ್ಡ ಗುರಿಯನ್ನು ಕಣ್ಮುಂದೆ ಇರಿಸಿಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಬೇಕು. ಅವರಿಗೆ ಸರಿಯಾದ ತರಬೇತಿ, ಮಾರ್ಗದರ್ಶನ, ಆಪ್ತ ಸಲಹೆ, ಸೂಚನೆಗಳು ಸಕಾಲದಲ್ಲಿ ಸಿಗುವಂತಾದರೆ ಅದರಿಂದ ದೇಶಕ್ಕೆ ಒಳಿತಿದೆ ಎಂಬುದು ವಿವೇಕರ ಆಶಯವಾಗಿತ್ತೆಂದರು. ಅವಿರತ ಪರಿಶ್ರಮದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಗುರಿಯತ್ತ ಸಾಗಲು ಸಿದ್ಧತೆಯೂ ಮುಖ್ಯ. ನಮ್ಮಲ್ಲಿರುವ ಶಕ್ತಿ ಮತ್ತು ದೌರ್ಬಲ್ಯ ಗಳನ್ನು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಕರು, ಕುಟುಂಬದ ಹಿರಿಯರು, ಸೇವಾ ಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳುವುದು ಒಳಿತು ಎಂದು ಯುವಕರಿಗೆ ಕರೆ ನೀಡಿದ ದೇವಾನಂದ್, ಒಳಿತಿನೆಡೆ ಹೆಜ್ಜೆ ಹಾಕಿದರೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೆಳಗಿ, ಕೀರ್ತಿ ಸಂಪಾದಿಸಲು ಸಾಧ್ಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಅಕ್ಟೋಬರ್‌ನಿಂದ ನವೆಂಬರ್‌ನವರೆಗೆ ಪಠ್ಯೇತರ ಚಟುವಟಿಕೆಗಳಿಗೆ ಶಾಲೆಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಶೈಕ್ಷಣಿಕ ಪ್ರವಾಸ, ವಾರ್ಷಿ ಕೋತ್ಸವಗಳು ಈ 2 ತಿಂಗಳಲ್ಲಿ ನಡೆಯಬೇಕೆಂಬುದು ಇಲಾಖೆ ಅಪೇಕ್ಷೆ. ಜನವರಿ ನಂತರ ಸಂಪೂರ್ಣ ಶೈಕ್ಷಣಿಕ ವಿಷಯಗಳಿಗೆ ನೆರವಾದ ಪ್ರಯತ್ನ ನಡೆಯುತ್ತವೆ. 5 ದಿನಗಳಲ್ಲಿ ಎಂಟು ವಿಧದ ಸ್ಪರ್ಧೆಗಳನ್ನೊಳಗೊಂಡ ಪ್ರತಿಭಾ ಸಪ್ತಾಹ ನಡೆಸುವ ಮೂಲಕ ರೋಟರಿ ಸಂಸ್ಥೆ ಉತ್ತಮ ವೇದಿಕೆ ಕಲ್ಪಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಮಗಳೂರು ರೋಟರಿ ಕ್ಲಬ್ ಅಧ್ಯಕ್ಷ ಎಂ.ಎಲ್.ಸುಜಿತ್ ಮಾತನಾಡಿ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದ್ದು ಹರ್ಷ ತಂದಿದೆ. ಪ್ರತಿವರ್ಷ ಜನವರಿಯಲ್ಲಿ ಸಪ್ತಾಹ ಆಚರಿಸುತ್ತಿದ್ದು ಪರೀಕ್ಷೆ ಸಮೀಪಿಸುವುದರಿಂದ ವಿದ್ಯಾರ್ಥಿಗಳಿಗೆ ಭಾಗವಹಿಸಲು ಕಷ್ಟವಾಗುತ್ತದೆ ಎಂಬ ಕಾರಣದಿಂದ ಇಲಾಖೆ ಸಲಹೆ ಮೇರೆಗೆ ನವೆಂಬರ್‌ನಲ್ಲಿ ನಡೆಸಲಾಗುತ್ತಿದೆ ಎಂದರು.ರೋಟರಿ ಖಜಾಂಚಿ ಕೆ.ಎಸ್.ಆದರ್ಶ್, ಸಹಾಯಕ ರಾಜ್ಯಪಾಲ ನಾಸಿರ್ ಹುಸೇನ್, ಇನ್ನರ್‌ವ್ಹೀಲ್ ಅಧ್ಯಕ್ಷೆ ಶಾಲಿನಿ, ಜೀವನಸಂಧ್ಯಾ ಟ್ರಸ್ಟ್ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಅನಂತೇಗೌಡ, ಡಿ,ಎಚ್.ನಟರಾಜ್, ಎಂ.ಆರ್.ಕಿರಣ್, ರೋಟರಿ ಕಾರ್‍ಯದರ್ಶಿ ಎನ್.ಪಿ.ಲಿಖಿತ್, ಸಪ್ತಾಹದ ಸಂಯೋಜಕ ಎನ್.ಚಿದಾನಂದ, ಸಹ ಸಂಯೋಜಕ ಹರ್ಷಿತ್ ವಸಿಷ್ಠ ಉಪಸ್ಥಿತರಿದ್ದರು. 7 ಕೆಸಿಕೆಎಂ 1ಚಿಕ್ಕಮಗಳೂರು ರೋಟರಿಕ್ಲಬ್ ನಗರದ ಎಂ.ಎಲ್.ವಿ ರೋಟರಿ ಸಭಾಂಗಣದಲ್ಲಿ ಆಯೋಜಿಸಿರುವ ಪ್ರತಿಭೆ ಸಂಭ್ರಮ ಯುವ ಚೇತನ ಕಾರ್ಯಕ್ರಮವನ್ನು ರೋಟರಿ 3182 ಜಿಲ್ಲಾ ರಾಜ್ಯಪಾಲ ಸಿ.ಎ.ದೇವಾನಂದ ಅವರು ಉದ್ಘಾಟಿಸಿದರು. ಬಿಇಓ ರವೀಶ್, ಎಂ.ಎಲ್. ಸುಜಿತ್, ಆದರ್ಶ್ ಇದ್ದರು.