ಶಿರಹಟ್ಟಿ: ಮೊಹರಂ ಹಬ್ಬದ ನಿಮಿತ್ತ ಬುಧವಾರ ಪಟ್ಟಣದ ಅಂಬೇಡ್ಕರ್ ನಗರದ ನೂರಾರು ಯುವಕರು ಜಾನಪದ ಹಾಡು ಹಾಡುತ್ತಾ ಹೆಜ್ಜೆ ಮೇಳದೊಂದಿಗೆ ಕುಣಿತ, ಸವಾಲ್ ಪದಗಳೊಂದಿಗೆ ಪಟ್ಟಣದಲ್ಲಿ ಸಂಭ್ರಮದಿಂದ ಮೊಹರಂ ಆಚರಣೆ ಮಾಡಿದರು.
ಮುಸ್ಲಿಂ ಮುಖಂಡರೊಬ್ಬರು ಹೇಳುವಂತೆ ಮಹಮ್ಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್ ಹಾಗೂ ಸಂಗಡಿಗರು ಯಜೀದನೆಂಬುವವನ ವಿರುದ್ದ ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತಾ ಜೀವ ಬಿಟ್ಟರು.ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಶುರುವಾಯಿತು.
ಇಂತಹ ದುಗುಡದ ನೆನಪಿನಲ್ಲಿ ಹುಟ್ಟಿದ ಧಾರ್ಮಿಕ ಆಚರಣೆಯೊಂದು ಉತ್ತರ ಕರ್ನಾಟಕದಲ್ಲಿ ಸಾಂಸ್ಕೃತಿಕ ಆಚರಣೆಯಾಗಿ ರೂಪಾಂತರ ಪಡೆಯಿತು. ಈ ಹಬ್ಬವನ್ನು ಎಲ್ಲೆಡೆಯೂ ಎಲ್ಲ ಜಾತಿಯ ಜನರು ಒಟ್ಟಾಗಿ ಆಚರಿಸುವ ಊರ ಹಬ್ಬವಾಯಿತು. ಹೀಗಾಗಿ ಮುಸ್ಲಿಂರೇ ಇಲ್ಲದ ಬಹುತೇಕ ಊರುಗಳಲ್ಲಿ ಮೊಹರಂ ನಡೆಯುತ್ತದೆ.ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ, ಕುಸಲಾಪೂರ, ಮಾಚೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮೊಹರಂ ಎನ್ನುವುದು ಮುಸ್ಲಿಂ ಹಬ್ಬವಾಗಿಲ್ಲ. ಬದಲಾಗಿ ಈ ಹಬ್ಬವನ್ನು ಹಿಂದೂ ಹಾಗೂ ಮುಸ್ಲಿಂರು ಸೇರಿ ಭಾವೈಕ್ಯದಿಂದ ಆಚರಿಸುತ್ತಿದ್ದಾರೆ. ಜಾತಿ, ಧರ್ಮದ ಸಂಕೋಲೆ ಮೀರಿ ಅಸ್ಮಿತೆ ಸೃಷ್ಟಿಸಿಕೊಂಡ ಮುಸ್ಲಿಂರ ಪವಿತ್ರ ಹಬ್ಬವಾಗಿದೆ.
ಕರ್ಬಲಾ ವೀರರು ಊಟ ನೀರಿಲ್ಲದೆ ಮಡಿದವರಾಗಿದ್ದರಿಂದ ಹಸಿದವರಿಗೆ ಉಣಿಸುವ ಮತ್ತು ಬಾಯಾರಿದವರಿಗೆ ಶರಬತ್ತು ಕುಡಿಸುವ ಪದ್ಧತಿ ರೂಢಿಯಲ್ಲಿದೆ.
ಹೆಜ್ಜೆ ಮೇಳದಲ್ಲಿ ಉಡಚಪ್ಪ ನೀಲಣ್ಣವರ, ರಂಗಪ್ಪ ಗುಡಿಮನಿ, ಮಹಾಂತೇಶ ಗುಡಿಮನಿ, ಚಂದ್ರು ಗೋಡೆಣ್ಣವರ, ಮಹಾಂತೇಶ ಗೋಡೆಣ್ಣವರ, ದೇವಪ್ಪ ಗುಡಿಮನಿ, ರೇವಣೆಪ್ಪ ಗುಡಿಮನಿ, ಹನಮಂತ ಬಡೆಣ್ಣವರ, ರವಿ ಗುಡಿಮನಿ, ಉಮೇಶ ಬಡೆಣ್ಣವರ ಸೇರಿದಂತೆ ನೂರಾರು ಅಂಬೇಡ್ಕರ್ ನಗರದ ಯುವಕರು ಭಾಗವಹಿಸಿದ್ದರು.