ಯುವಕರು ಜಾಗತಿಕ ವಿಜ್ಞಾನದ ನಾಯಕತ್ವ ವಹಿಸುವುದು ಅಗತ್ಯ

KannadaprabhaNewsNetwork |  
Published : Mar 02, 2025, 01:21 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಹಾಗೂ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭಾರತೀಯ ಯುವಕರು ಜಾಗತಿಕ ವಿಜ್ಞಾನದ ನಾಯಕತ್ವ ವಹಿಸುವುದು ಅಗತ್ಯವೆಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ ಅಭಿಪ್ರಾಯಪಟ್ಟರು.

ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಹಾಗೂ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಭಾರತದ ಸಂಜಾತರಿಗೆ ಮಾತ್ರ ವಿಜ್ಞಾನದಲ್ಲಿ ಅನೇಕ ನೊಬೆಲ್ ಪ್ರಶಸ್ತಿಗಳು ದೊರೆತಿವೆ. ಆದರೆ ಇದುವರೆವಿಗೂ ಈ ಶತಮಾನದಲ್ಲಿ ಸಿ.ವಿ.ರಾಮನ್ ಅವರನ್ನು ಬಿಟ್ಟರೆ, ಬೇರೆ ಯಾವ ಭಾರತೀಯ ವಿಜ್ಞಾನಿಗೂ ನೊಬೆಲ್ ಪ್ರಶಸ್ತಿ ದೊರೆಯದಿರುವುದು ವಿಷಾದದ ಸಂಗತಿ ಎಂದರು.

ಭಾರತದ ಅನೇಕ ಸಂಶೋಧನಾ ಕೇಂದ್ರಗಳಲ್ಲಿ ಬೆರಳೆಣಿಕೆಯ ವಿಜ್ಞಾನಿಗಳು ಮಾತ್ರ ಸಂಶೋಧನೆಗಳಲ್ಲಿ ತೊಡಗಿದ್ದಾರೆ. ಇದನ್ನು ಗಮನಿಸಿದರೆ, ಆಳವಾದ ಅಧ್ಯಯನ, ಸಂಶೋಧನೆಗಳು, ನಡೆಯುತ್ತಿಲ್ಲ ಹಾಗೂ ಬದ್ಧತೆ ಕೊರತೆ ಎದ್ದು ಕಾಣಿಸುತ್ತಿದೆ. ನಾವು ಬ್ರಿಟಿಷರ ದಾಸ್ಯದಲ್ಲಿದ್ದಾಗ ನೊಬೆಲ್ ಪ್ರಶಸ್ತಿ ಬಂದಿರುವುದು ಗಮನಾರ್ಹ. ಭಾರತದ ಅಭಿವೃದ್ಧಿಗೆ ರಾಮನ್ ಬೆಳಕಿನ ಪರಿಣಾಮ ಮಹತ್ವದ ಸಂಶೋಧನೆಯಾಗಿದೆ. ಇಂತಹ ಸಂಶೋಧನೆಯ ಮಹತ್ವ ಎಲ್ಲೆಡೆ ಪಸರಿಸಲಿ ಮತ್ತು ಇನ್ನಷ್ಟು ಹೊಸ ಸಂಶೋಧನೆಗಳು ನಡೆಯುವ ಉದ್ದೇಶದಿಂದ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲು ತೀರ್ಮಾನಿಸಿದ್ದು ಸರಿಯಾಗಿಯೇ ಇದೆ ಎಂದರು.

ಸಂಶೋಧನೆ ಮಾಡುವವರಲ್ಲಿ ಬದ್ಧತೆ ಇರಬೇಕು. ವಿಜ್ಞಾನದಿಂದ ಮಾತ್ರ ಬಡತನ, ದಾರಿದ್ರ್ಯವನ್ನು ತೊಲಗಿಸಲು ಸಾಧ್ಯ. ವಿಜ್ಞಾನವು ಎಲ್ಲರನ್ನೂ ಒಂದೆಡೆ ಸೇರಿಸುತ್ತದೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದರಿಂದ ವೈಜ್ಞಾನಿಕ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಇಂದಿನ ಸಂಶೋಧನೆಗಳು ಸೀಮಿತ ಚೌಕಟ್ಟಿನಲ್ಲಿ ನಡೆಯುತ್ತಿವೆ. ಹಿಂದಿನ ಸಂಶೋಧನೆಗಳಂತೆ, ವಿಭಿನ್ನ ವ್ಯಾಪ್ತಿಯನ್ನು ಹೊಂದಿಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೈನ್ಸ್ ಫೌಂಡೇಶನ್ ಅಧ್ಯಕ್ಷ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಬರೀ ವಿಜ್ಞಾನ ದಿನಾಚರಣೆ ಆಚರಿಸಿದರೆ ಅಷ್ಟೇ ಸಾಲದು, ಬಹುಮುಖ್ಯವಾಗಿ ದೇಶದ ಜನರಲ್ಲಿ ವಿಜ್ಞಾನದ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಇಂದು ವಿಜ್ಞಾನ ಎಲ್ಲೆಡೆ ರಾರಾಜಿಸುತ್ತಿದೆ. ಒಂದು ವೇಳೆ ಮೂಲವಿಜ್ಞಾನಕ್ಕೆ ಹೆಚ್ಚು ಒತ್ತು ನೀಡಿದಲ್ಲಿ ರಾಮನ್ ಅವರಂತಹ ಸಂಶೋಧನೆಗಳು ಮುನ್ನೆಲೆಗೆ ಬರುತ್ತವೆ ಎಂದರು.

ವಿಜ್ಞಾನ ದಿನ ಕೇವಲ ಫೆ.28ಕ್ಕೆ ಸೀಮಿತವಾಗದೇ, ವರ್ಷವಿಡೀ ವಿವಿಧ ಚಟುವಟಿಕೆಗಳು ನಡೆಯುವ ಮೂಲಕ ವಿಜ್ಞಾನವನ್ನು ಕಲಿಯುವ, ಅದನ್ನು ಬದುಕಿನ ಭಾಗವನ್ನಾಗಿಸುವ ಪ್ರಕ್ರಿಯೆ ನಡೆದರೆ, ಭವಿಷ್ಯದಲ್ಲಿ ಭಾರತದ ವಿಜ್ಞಾನಿಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಪ್ರವಾಚಕ ಎ.ಹನುಮಂತರಾಯ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಸಿ.ವಿಜಯಕುಮಾರ್, ನರಸಿಂಹಪ್ಪ, ರಾಜಣ್ಣ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಎಂ.ದೀಪ ಸ್ವಾಗತಿಸಿ, ಉಪನ್ಯಾಸಕಿ ಕೆ.ಬಿ.ಪುಷ್ಪಲತಾ ವಂದಿಸಿದರು. ಜೆ.ಚೇತನಾ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!