ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಶ್ರೀ ಆದಿಚುಂಚನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕುವೆಂಪು ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಸೌರಭಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಪೀಳಿಗೆ ದೇಶದ ಸಂಸ್ಕೃತಿ, ಕಲೆ ಮತ್ತು ಜಾನಪದ ಪರಂಪರೆ ಮುಂದುವರಿಸಿಕೊಂಡು ಹೋಗುವಲ್ಲಿ ಇಂತಹ ವೇದಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ.ಯುವ ಸೌರಭದಂತಹ ವೇದಿಕೆಗಳು ಗ್ರಾಮೀಣ ಹಾಗೂ ಉದಯೋನ್ಮುಖ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡಲಿವೆ. ಯುವ ಜನಾಂಗ ವ್ಯಾಸಂಗದ ಜತೆಗೆ ಸಾಂಸ್ಕೃತಿಕ ರಂಗದಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಎಚ್. ಎಲ್. ಮಲ್ಲೇಶಗೌಡ ಮಾತನಾಡಿ, ಜಾನಪದ ಕಲೆಗಳು ನಮ್ಮ ದೇಶದ ಸಂಸ್ಕೃತಿಯ ಪ್ರತಿಬಿಂಬ. ನಮ್ಮ ಸಂಸ್ಕೃತಿ ಹಾಗೂ ದೇಶಿಯ ಸೊಗಡಾಗಿರುವ ಇವು ನಮ್ಮ ನಾಗರಿಕತೆಯ ಸಂಕೇತವಾಗಿವೆ. ಈ ಕಲೆಗಳನ್ನು ಉಳಿಸಿ ಬೆಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಜನಪದ ಹಾಡು, ಜನಪದ ನೃತ್ಯ, ಬೀಸುಕಲ್ಲಿನ ಪದ, ಜೋಗುಳ ಪದ ಇಂತಹ ಅನೇಕ ಹಾಡುಕುಣಿತಗಳು ಕೃಷಿ ಬದುಕು ಹಾಗೂ ಹಳ್ಳಿ ಬದುಕಿನಲ್ಲಿ ಮೂಡಿಬಂದ ಅದ್ಭುತ ಕಲೆಗಳಾಗಿವೆ. ಇವುಗಳಲ್ಲಿ ದೇಸೀಯ ಸೊಗಡಿನ ಜತೆಗೆ ಸಮಾಜದ ಅಂತಕರಣ ಅದರಲ್ಲಿ ಅಡಗಿದೆ. ಜನಪದರು ತಮ್ಮ ಅನುಭಾವದ ನೆಲೆಯ ಮೇಲೆ ಜನಪದ ಗೀತೆಗಳನ್ನು ರಚಿಸಿದ್ದಾರೆ. ಅವುಗಳ ಅನುಕರಣೆ ಇಂದಿನ ಪೀಳಿಗೆಗೆ ಅವಶ್ಯವಾಗಿದೆ. ಸಿನಿಮೀಯ ಬದುಕು ಬಿಟ್ಟು ದೇಶಿ ಸಂಸ್ಕೃತಿಯಲ್ಲಿ ತೊಡಗಿಸಿಕೊಳ್ಳಲು ಯುವ ಸೌರಭ ಸಹಕಾರಿಯಾಗಲಿ ಎಂದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವ ಕಲಾವಿದರು ನೀಡಿದ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಂಡವು. ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಬಿ. ಆರ್. ಪ್ರಜ್ವಲ್ ಜನಪದ ಗೀತೆ, ಉಷಾರಾಣಿ ಮತ್ತು ತಂಡದವರಿಂದ ಜಾನಪದ ಗೀತ ಗಾಯನ, ಸಿ.ಎಸ್.ಪ್ರೇಕ್ಷಾ ಮತ್ತು ತಂಡ ಹರ್ಷಿತಾ ಮತ್ತು ತಂಡ, ಚೈತನ್ಯ ಮತ್ತು ತಂಡದವರಿಂದ ಜಾನಪದ ನೃತ್ಯ, ದೀಕ್ಷಿತ ಮತ್ತು ತಂಡದವರಿಂದ ಜಾನಪದ ಕಿರು ನಾಟಕ ಪ್ರದರ್ಶನಗೊಂಡವು.ಹಾಸನದ ಎಚ್. ಎಸ್. ಪ್ರದೀಪ್ ಮತ್ತು ತಂಡದ ಅಭಿನಯದ ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಅತ್ಯಂತ ಪ್ರಸಿದ್ದ ಯುದ್ಧವಿರೋಧಿ ನಾಟಕ, ಸ್ಮಶಾನ ಕುರುಕ್ಷೇತ್ರಂ ನಾಟಕ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಎನ್.ವೈ. ವಿಜಯಲಕ್ಷ್ಮೀ ಮತ್ತು ತಂಡದವರಿಂದ ರಂಗ ಕುಣಿತ ಹಾಗೂ ಅರಕಲಗೂಡಿನ ಚಿಕ್ಕ ಮಲ್ಲೇಶ್ ಮತ್ತು ತಂಡದವರಿಂದ ಅದ್ಧೂರಿ ಡೊಳ್ಳು ಕುಣಿತ ಪ್ರದರ್ಶನಗೊಂಡವು. ಇದರೊಂದಿಗೆ ಉಡುಪಿಯ ಅಭಿಷೇಕ್ ಮತ್ತು ತಂಡದವರಿಂದ ಚಂಡೆವಾದನ, ಪಿ.ಜಿ. ರಕ್ಷಿತಾ ಅವರಿಂದ ಭರತನಾಟ್ಯ, ಬಿಜಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಉಮೇಶ್ ತೆಂಕನಹಳ್ಳಿ ಅವರ ಪ್ರತಿಮ ಟ್ರಸ್ಟ್ ವತಿಯಿಂದ ಕಂಸಾಳೆ ಮತ್ತು ರಂಗ ಕುಣಿತ ಮತ್ತು ಅರಸೀಕೆರೆಯ ಸಂಗೀತ ಮತ್ತು ಅಮೂಲ್ಯ ತಂಡದಿಂದ ಸಂಗೀತ ಸಮೂಹ ಗಾಯನ ಕಾರ್ಯಕ್ರಮದ ಆಕರ್ಷಣೆಯನ್ನು ದ್ವಿಗುಣಗೊಳಿದವು.ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಹಳ್ಳಿ ಬದುಕಿನಲ್ಲಿ ಜನಪದ ಬೇರೂರಿದೆ. ಬೆವರಿನ ಸಂಸ್ಕೃತಿಯೇ ಜನಪದ ಸಂಸ್ಕೃತಿ. ನಮ್ಮ ಪೂರ್ವಜರು ದುಡಿಯುತ್ತ ಬದುಕು ಕಟ್ಟಿಕೊಂಡಿದ್ದರು. ಅನುಭವದ ಮೂಲಕ ಮಾತ್ರ ಸ್ಥಾನದಲ್ಲಿರುವ ಜಾನಪದ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಹಳ್ಳಿ ಗಾಡಿನ ಜಾನಪದರು ತಮ್ಮ ಬದು ಕಿನ ಚಿತ್ರಣವನ್ನು ಕಟ್ಟಿಕೊಡುವ ಮೂಲಕ ಜಾನಪದದ ನೆಲೆಗಟ್ಟನ್ನು ಗಟ್ಟಿಗೊಳಿಸಿದ್ದಾರೆ. ಜಾನಪದ ಸಂಸ್ಕೃತಿ ಅಳಿದರೆ ನಮ್ಮತನ ಕಳೆದು ಕೊಂಡಂತೆ. ಜಾನಪದ ಸೊಗಡಿ ನಲ್ಲೇ ಭಾರತೀಯ ಮೂಲ ಪರಂಪರೆಯ ಸತ್ವ ಅಡಗಿದೆ. ಹೀಗಾಗಿ ಆಧುನಿಕತೆ ಭರಾಟೆಗೆ ಸಿಲುಕಿ ಮಾತೃ ಸಂಸ್ಕೃತಿ ಅಳಿಯಲು ಬಿಡಬಾರದು ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಭಾಗಸಿದ್ದ ಎಲ್ಲ ಯುವ ಕಲಾವಿದರು ಹಾಗೂ ಕಲಾತಂಡಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಚ್.ಪಿ. ತಾರಾನಾಥ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಜಿಲ್ಲಾಧ್ಯಕ್ಷ ಜಿ. ಆರ್. ರಂಜಿತ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಕೆ. ಎಲ್.ಯಶಶ್ರೀಂತ್, ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಕೆ.ಮಂಜುನಾಥ್, ಬಿಜಿಎಸ್ ಪಬ್ಲಿಕ್ ಸ್ಕೂಲ್ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲ ಸಿ.ಸಿ ಇತರರು ಇದ್ದರು.