ಭಟ್ಕಳ: ಪಟ್ಟಣದ ಮಣಕುಳಿಯ ಹನುಮಂತ, ಲಕ್ಷ್ಮೀನಾರಾಯಣ ದೇವಸ್ಥಾನದ ಬೃಹತ್ ಹನುಮಂತನ ಮೂರ್ತಿ ಉದ್ಘಾಟನೆ, ಪುನರ್ ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂತಿಮ ದಿನವಾದ ಭಾನುವಾರ ದೇವರ ಬ್ರಹ್ಮ ಕಲಶೋತ್ಸವವನ್ನು ಉಡುಪಿ ಅಷ್ಠಮಠಗಳಲ್ಲೊಂದಾದ ಅದಮಾರು ಮಠದ ಪೀಠಾಧೀಶ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ನೆರವೇರಿಸಿದರು.
ನಂತರ ಆಶೀರ್ವಚನ ನೀಡಿದ ಅವರು, ಯುವ ಜನಾಂಗ ಸನಾತನ ಧರ್ಮ, ಹಿಂದೂ ಸಮುದಾಯ, ಸಂಸ್ಕೃತಿಯ ರಕ್ಷಣೆಗಾಗಿ ಪಣತೊಡಬೇಕಾಗಿದೆ. ಪ್ರತಿದಿನ ಭಜನೆ, ಕೀರ್ತನೆ ಮಾಡುವ ಮೂಲಕ ಮನಶಾಂತಿ ಹೊಂದಬೇಕಾಗಿದೆ ಎಂದ ಅವರು, ಪ್ರತಿಯೊಂದು ಮನೆಯಲ್ಲಿಯೂ ಇರುವ ಸಮಸ್ಯೆಗಳಿಗೆ ಭಜನೆ, ದೇವರ ಪ್ರಾರ್ಥನೆ, ಸಾಮೂಹಿಕವಾಗಿ ಚಿಂತನೆ ಮಾಡುವುದರಿಂದ ದೊರೆಯುತ್ತದೆ. ದೇಶ ಭಕ್ತರ ಮಧ್ಯೆ ರಾಷ್ಟ್ರದ್ರೋಹಿಗಳು ಇರುತ್ತಾರೆ. ಹೊರಗಿನ ದ್ರೋಹಿಗಳನ್ನು ನಿಗ್ರಹಿಸಬಹುದು. ಆದರೆ ನಮ್ಮಲ್ಲಿಯೇ ಇರುವ ದ್ರೋಹಿಗಳನ್ನು ನಿಗ್ರಹಿಸುವುದು ತುಂಬ ಕಷ್ಟದ ಕೆಲಸ ಎಂದರು.ಹಿಂದೂಗಳು ಎಂದಿಗೂ ಯಾರ ಮೇಲೂ ಅಕ್ರಮಣ ಮಾಡಿದ ಉದಾಹರಣೆಯಿಲ್ಲ. ಆದರೆ ನಮ್ಮನ್ನು ಆಕ್ರಮಣ ಮಾಡಲು ಬಂದವರಿಗೆ ತಕ್ಕ ಶಾಸ್ತಿ ಮಾಡಲು ನಮಗೆ ಹನುಮಂತನೇ ಉದಾಹಣೆಯಾಗಿದ್ದಾನೆ. ನಾವೆಂದೂ ಅವರನ್ನು ತಟ್ಟದೇ ಬಿಟ್ಟಿಲ್ಲ ಎಂದು ಹೇಳಿದರು.
ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಸುನಿಲ್ ನಾಯ್ಕ ಮಾತನಾಡಿ, ಮಣ್ಕುಳಿ ಉತ್ತರ ಕನ್ನಡ ಜಿಲ್ಲೆಯ ಹೆಬ್ಬಾಗಿಲು. ದೇವಾಲಯದ ಎದುರು ಬೃಹತ್ ಹನುಮಂತನ ಮೂರ್ತಿ ಸ್ಥಾಪಿಸುವ ಮೂಲಕ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಶ ಶೆಟ್ಟಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದರು.ಅತಿಥಿಗಳಾಗಿ ಉಪಸ್ಥಿತರಿದ್ದ ಕುಮಟಾದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಮಾತನಾಡಿ, ನಾವು ಪುಟ್ಟ ಸಮಾಜವಾದರೂ ಎಲ್ಲ ಸಮಾಜದವರೊಂದಿಗೆ ಪ್ರೀತಿ, ವಿಶ್ವಾಸದಿಂದ ಇರುವುದಕ್ಕೋಸ್ಕರವೇ ನಮಗೆ ಸರ್ವತ್ರ ಮನ್ನಣೆ ದೊರೆಯುತ್ತಿದೆ. ಸದಾ ಶಾಂತತೆ, ತಾಳ್ಮೆ ಬೆಳೆಸಿಕೊಂಡು ಸಂಘಟಿತರಾಗಿದ್ದರೆ ಎಂತಹ ಕಾರ್ಯ ಕೂಡ ಮಾಡಬಹುದು ಎಂದರು.
ವೇದಿಕೆಯಲ್ಲಿ ಸಹಕಾರ ಇಲಾಖೆಯ ಶಿವಮೊಗ್ಗದ ಉಪ ನಿಬಂಧಕ ನಾಗಭೂಷಣ ಕಲ್ಮನೆ, ಡಾ. ಕೃಷ್ಣಾನಂದ ಶೆಟ್ಟಿ ಉಡುಪಿ, ಡಾ. ಶರತ್ ಬಾಳೆಮನೆ ಮಂಗಳೂರು, ವಿ.ಹಿ. ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶಂಕರ ಎಂ.ಶೆಟ್ಟಿ, ಹಿಂದೂಸ್ಥಾನ್ ಪೆಟ್ರೋಲಿಯಮ್ ನಿವೃತ್ತ ಜನರಲ್ ಮ್ಯಾನೇಜರ್ ಚಂದ್ರಹಾಸ ಶಿರಾಲಿ, ಹೊನ್ನಾವರ ಗಾಣಿಗ ಸಮಾಜದ ಅಧ್ಯಕ್ಷ ಎಸ್.ಕೆ. ಶೆಟ್ಟಿ, ಕುಂದಾಪುರ ಗಾಣಿಗ ಸಮಾಜದ ಅಧ್ಯಕ್ಷ ಸತೀಶ ಶೆಟ್ಟಿ, ಕಾಯ್ಕಿಣಿ ಗ್ರಾಪಂ ಸದಸ್ಯೆ ಸುನಂದಾ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಶ ಎಂ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಶಿರಾಲಿ ಸ್ವಾಗತಿಸಿದರು.