ಧಾರವಾಡ:
ಮೂಲತಃ ಬಳ್ಳಾರಿ ಜಿಲ್ಲೆಯ, ಇಲ್ಲಿಯ ಶಿವಗಿರಿಯಲ್ಲಿದ್ದ ಪಲ್ಲವಿ ಉಲ್ತೆಪ್ಪ ಕಗ್ಗಲ್ (25) ಶಿವಗಿರಿ ಬಳಿಯ ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಸರ್ಕಾರದ ಹುದ್ದೆಗಳ ನೇಮಕಾತಿ ಹಾಗೂ ವಯೋಮಿತಿ ಹೆಚ್ಚಿಸಲು ಆಗ್ರಹಿಸಿ ಇತ್ತೀಚಿಗಷ್ಟೇ ಧಾರವಾಡದಲ್ಲಿ ನಡೆದ ವಿದ್ಯಾರ್ಥಿ ಹೋರಾಟದಲ್ಲಿ ಭಾಗವಹಿಸಿದ್ದ ಪಲ್ಲವಿ, ಬಿಕಾಂ ಪದವಿ ಮುಗಿಸಿ ಕಳೆದ ಒಂದು ವರ್ಷದಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಮಂಗಳವಾರ ರಾತ್ರಿ ವರೆಗೂ ಶಿವಗಿರಿಯ ಗ್ರಂಥಾಲಯದಲ್ಲಿ ಅಧ್ಯಯನ ಮಾಡಿದ್ದಳು. ದುರಾದೃಷ್ಟವಶಾತ್ ಬುಧವಾರ ನಸುಕಿನಲ್ಲಿ ರೈಲ್ವೆ ಹಳಿಗೆ ಬಿದ್ದು ಸಾವಿಗೆ ಶರಣಾಗಿದ್ದಾಳೆ.
ದೈಹಿಕ ಪರೀಕ್ಷೆ ಪಾಸಾಗಿದ್ದ ಯುವತಿ:ಮೃತ ಪಲ್ಲವಿ ಕಗ್ಗಲ್ ಪೊಲೀಸ್ ಪೇದೆಯ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದು, ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿರಲಿಲ್ಲ. ಹೀಗಾಗಿ ಮತ್ತೆ ನೇಮಕಾತಿಗಳಾಗುತ್ತವೆ ಎಂಬ ಭರವಸೆ ಮೇಲೆ ಅಧ್ಯಯನ ಮಾಡುತ್ತಿದ್ದಳು. ಹಲವು ವರ್ಷಗಳಿಂದ ಸರ್ಕಾರದ ಯಾವ ನೇಮಕಾತಿಗಳಾಗದ ಹಿನ್ನೆಲೆಯಲ್ಲಿ ಆಗಾಗ ತಮ್ಮ ಬಳಿ ಬೇಸರ ಸಹ ವ್ಯಕ್ತಪಡಿಸುತ್ತಿದ್ದಳು ಎಂದು ಆಕೆಯ ಸ್ನೇಹಿತರು ಮಾಧ್ಯಮಗಳಿಗೆ ತಿಳಿಸಿದರು.
ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ರವಾನೆ ಮಾಡಿದ್ದಾರೆ. ಇನ್ನು, ಪಲ್ಲವಿ ಆತ್ಮಹತ್ಯೆ ಸುದ್ದಿ ತಿಳಿದು ಶಿವಗಿರಿ, ಶ್ರೀನಗರ, ಕಲ್ಯಾಣ ನಗರ ಹಾಗೂ ಪಾವಟೆ ನಗರದ ನೂರಾರು ವಿದ್ಯಾರ್ಥಿಗಳು ರೈಲ್ವೆ ಹಳಿಗೆ ಜಮಾಯಿಸಿ ಘಟನೆ ಕಂಡು ಮಮ್ಮುಲ ಮರುಗಿದರು. ಇದೇ ವೇಳೆ ಆಗಮಿಸಿದ್ದ ಉದ್ಯೋಗಾಂಕ್ಷಿಗಳ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕಾಂತಕುಮಾರ ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರಿ ನೇಮಕಾತಿಗಾಗಿ ಅಧ್ಯಯನ ಮಾಡುತ್ತಿರುವವರು ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವುದು ಬೇಸರದ ಸಂಗತಿ. ಈಗಾಗಲೇ ಹೈಕೋರ್ಟ್ ಸೂಚನೆಯಂತೆ ಮಂಗಳವಾರಷ್ಟೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು, 2026ರ ಜನವರಿಯಲ್ಲಿ ನೇಮಕಾತಿ ಅಧಿಸೂಚನೆಯ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಗಳ ಹೋರಾಟಕ್ಕೆ ಸರ್ಕಾರದಿಂದ ಸ್ಪಂದನೆ ದೊರೆತಿದ್ದು, ಯಾವ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳದೇ ಹೋರಾಟದ ಮೂಲಕ ಬೇಡಿಕೆ ಈಡೇರಿಸಿಕೊಳ್ಳೋಣ ಎಂದರು.ಸರ್ಕಾರಿ ಹುದ್ದೆಯ ಕನಸಿತ್ತು...
ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಮೃತ ಪಲ್ಲವಿ ತಂದೆ ಉಲ್ತೆಪ್ಪ ಕಗ್ಗಲ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನ ಪುತ್ರಿ ಈ ಹಿಂದೆ ಪೊಲೀಸ್ ಇಲಾಖೆ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಳು. ಆದರೆ, ಅಂತಿಮ ಸುತ್ತಿನಲ್ಲಿ ಆಯ್ಕೆಯಾಗಿರಲಿಲ್ಲ. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ಧಾರವಾಡಕ್ಕೆ ಬಂದು ಇಲ್ಲಿಯೇ ನೆಲೆಸಿದ್ದಳು. ಮಗಳು ಓದಿ ಸರ್ಕಾರಿ ಹುದ್ದೆ ಪಡೆಯುತ್ತಾಳೆಂಬ ಕನಸಿತ್ತು. ಆದರೆ, ಆರೋಗ್ಯ ಸಮಸ್ಯೆ ಹಾಗೂ ವೈಯಕ್ತಿಕ ಕಾರಣದಿಂದಾಗಿ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತವನ್ನುಂಟು ಮಾಡಿದೆ ಎಂದರು. ಡೆತ್ ನೋಟ್ ಸಿಕ್ಕಿದೆ: ಪೊಲೀಸ್ ಆಯುಕ್ತಅನಾರೋಗ್ಯ, ವೈಯಕ್ತಿಕ ಕಾರಣದಿಂದಾಗಿ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಆತ್ಮಹತ್ಯೆಗೂ ನೇಮಕಾತಿ ವಿಳಂಬಕ್ಕೂ ಸಂಬಂಧವಿಲ್ಲ ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸ್ಪಷ್ಟಪಡಿಸಿದ್ದಾರೆ. ಬುಧವಾರ ಹುಬ್ಬಳ್ಳಿಯ ಕೆಎಂಸಿಆರ್‌ಐನ ಶವಾಗಾರಕ್ಕೆ ಭೇಟಿ ನೀಡಿ ಮೃತ ಪಲ್ಲವಿ ಶವ ವೀಕ್ಷಿಸಿದ ಬಳಿಕ ಮಾತನಾಡಿರುವ ಅವರು, ನೇಮಕಾತಿ ವಿಳಂಬದಿಂದಾಗಿ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿಸುವ ಮೂಲಕ ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ನಡೆಯುತ್ತಿದೆ. ಪಲ್ಲವಿ ಆತ್ಮಹತ್ಯೆಗೆ ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣ ಎಂದು ಬರೆದಿರುವ ಡೆತ್ ನೋಟ್ ದೊರೆತಿದೆ ಎಂದರು. ಪ್ರೀತಿಗೆ ಮನೆಯವರ ವಿರೋಧ?
ರೈಲ್ವೆ ಹಳಿಗೆ ತಲೆ ನೀಡಿ ಆತ್ಮಹತ್ಯೆ ಮಾಡಿಕೊಂಡ ಪಲ್ಲವಿ ಆತ್ಮಹತ್ಯೆಯ ಪ್ರಕರಣ ಡೆತ್ ನೋಟ್ ಸಿಕ್ಕ ಮೇಲೆ ತಿರುವು ಪಡೆದಿದೆ. ಆರಂಭದಲ್ಲಿ ನೇಮಕಾತಿಯಾಗಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಾದರೆ, ನಂತರದಲ್ಲಿ ಪಲ್ಲವಿ ಮೃತಪಟ್ಟಿದ್ದು ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣ ಎಂದು ಪಲ್ಲವಿ ತಂದೆ ಹಾಗೂ ಪೊಲೀಸ್ ಆಯುಕ್ತರು ಹೇಳಿಕೆ ನೀಡಿದರು. ಇನ್ನು, ಸಂಜೆ ಡೆತ್‌ನೋಟ್ ಸಿಕ್ಕ ಮೇಲೆ ಪಲ್ಲವಿ ಯುವಕನೊಬ್ಬನ್ನು ಪ್ರೀತಿಸುತ್ತಿದ್ದು, ಮನೆಯವರ ವಿರೋಧವಿತ್ತು. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿಯೂ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರೇ ತನಿಖೆ ಮೂಲಕ ಪಲ್ಲವಿ ಆತ್ಮಹತ್ಯೆಯ ಸ್ಪಷ್ಟ ಕಾರಣವನ್ನು ಬಿಚ್ಚಿಡಬೇಕಿದೆ.