ಕನ್ನಡಪ್ರಭ ವಾರ್ತೆ ಉಳ್ಳಾಲ
ಪಶ್ಚಿಮ ಬಂಗಾಳ ಮೂಲದ ಯುವತಿ ಮೇಲೆ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉಳ್ಳಾಲ ತಾಲೂಕಿನ ಮುನ್ನೂರು ಕೊಟ್ಟಾರಿಮೂಲೆ ಬಂಗುಲೆ ನೇತ್ರಾವತಿ ನದಿ ತೀರ ಸಮೀಪ ಬುಧವಾರ ತಡರಾತ್ರಿ 1.30 ಸುಮಾರಿಗೆ ನಡೆದಿದೆ. ಪ್ರಕರಣ ಸಂಬಂಧ ಮಂಗಳೂರು, ಮೂಲ್ಕಿ ಹಾಗೂ ಕುಂಪಲ ನಿವಾಸಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.ಮೂಲ್ಕಿ ನಿವಾಸಿ, ಆಟೋ ಚಾಲಕ ಪ್ರಭುರಾಜ್ (38), ಇಲೆಕ್ಟ್ರಿಷಿಯನ್ ಕುಂಪಲ ಮೂಲದ ಮಿಥುನ್ (30) ಹಾಗೂ ಮಂಗಳೂರಿನಲ್ಲಿ ವಾಸ ಮಾಡುವ ಮಣಿ (30) ಬಂಧಿತರು.
ಪ್ರಕರಣ ಹಿನ್ನೆಲೆ:ಪಶ್ಚಿಮ ಬಂಗಾಳದ ಕುಚ್ ಬಿಹಾರ್ ಮೂಲದ 20 ಹರೆಯದ ಯುವತಿ 2-3 ವರ್ಷಗಳಿಂದ ಕೇರಳದ ಫ್ಲೈವುಡ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಮಂಗಳೂರಿನಲ್ಲಿ ಬೇರೆ ಸಂಸ್ಥೆಯಲ್ಲಿ ಕೆಲಸದ ಅವಕಾಶವಿದ್ದ ಕಾರಣ ಗೆಳೆಯನ ಜೊತೆ ಬುಧವಾರ ಬೆಳಗ್ಗೆ ಮಂಗಳೂರಿಗೆ ಬಂದಿದ್ದಳು. ಈ ವೇಳೆ ಗೆಳೆಯನ ಜೊತೆಗೆ ಜಗಳವಾಗಿ ಆತ ಈಕೆಯ ಮೊಬೈಲಿಗೆ ಹಾನಿ ಮಾಡಿದ್ದ. ಹಾಗಾಗಿ ಮೊಬೈಲ್ ರಿಪೇರಿಗೆಂದು ಆಟೋ ಹಿಡಿದು ಮೊಬೈಲ್ ಅಂಗಡಿಗೆ ತೆರಳಿದ್ದಾಳೆ. 5-6 ಗಂಟೆಗಳ ಕಾಲ ಆಕೆ ಆಟೋ ಡ್ರೈವರ್ ಜೊತೆಗೇ ಇದ್ದು, ಅವನ ಜೊತೆಗೆ ಗೆಳೆತನ ಆಗಿದೆ. ಮೊಬೈಲ್ ರಿಪೇರಿ ಹಣ ಕೂಡಾ ಆತನೇ ಪಾವತಿಸಿದ್ದ. ಆ ಬಳಿಕ ಆಕೆ ರಾತ್ರಿ ವೇಳೆ ಪ.ಬಂಗಾಳ ಹೋಗಲು ರೈಲ್ವೇ ನಿಲ್ದಾಣಕ್ಕೆ ಬಿಡಲು ಆಟೋ ಡ್ರೈವರಿಗೆ ಹೇಳಿದ್ದು, ಆದರೆ ಆಟೋ ಡ್ರೈವರ್ ಮತ್ತಿಬ್ಬರ ಗೆಳೆಯರನ್ನು ಕರೆಸಿ ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಹೋಗದೇ ಬೇರೊಂದು ಜಾಗಕ್ಕೆ ಹೋಗುತ್ತಾರೆ.
ಆ ಜಾಗದಲ್ಲಿ ಆಕೆಗೆ ಚೆನ್ನಾಗಿ ಮದ್ಯಪಾನ ಮಾಡಿಸಿ, ಆಕೆ ಪ್ರಜ್ಞೆ ತಪ್ಪಿದ್ದು , ಪ್ರಜ್ಞೆ ಬಂದಾಗ ಅತ್ಯಾಚಾರ ನಡೆದಿರುವುದು ಆಕೆ ಗಮನಕ್ಕೆ ಬಂದಿದೆ. ಯುವತಿ ತನ್ನ ಹೇಳಿಕೆಯಲ್ಲಿ ತನ್ನ ಮೇಲೆ ಅತ್ಯಾಚಾರ ಆಗಿರುವುದಾಗಿ ಹೇಳಿದ್ದಾಳೆ.ವೈದ್ಯಕೀಯ ವರದಿ ಬಂದ ಬಳಿಕ ಅತ್ಯಾಚಾರ ದೃಢಪಡಬೇಕಿದೆ.
ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ನೀಡಿದ ಹೇಳಿಕೆಯಂತೆ ‘ಬುಧವಾರ ತಡರಾತ್ರಿ 1.30ರ ಸುಮಾರಿಗೆ ತುರ್ತು ಕರೆ 112ಕ್ಕೆ ಈ ಕುರಿತು ಮಾಹಿತಿ ಬಂದಿದ್ದು, ತಕ್ಷಣವೇ ಹೊಯ್ಸಳ ತಂಡ ಸ್ಥಳಕ್ಕೆ ತೆರಳಿ ಯುವತಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಅವಳು ಮಾತನಾಡುವ ಸ್ಥಿತಿಯಲ್ಲಿರದ ಕಾರಣ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆ ಅವಳ ಹೇಳಿಕೆ ಪ್ರಕಾರ ನಿನ್ನೆ ರಾತ್ರಿ ಯಾರೋ ಅವಳಿಗೆ ಮದ್ಯಪಾನ ಮಾಡಿಸಿ ಅತ್ಯಾಚಾರ ನಡೆಸಿದ್ದಾರೆ. ಪ್ರಜ್ಞೆ ಬಂದು ಅವಳು ಕೂಗಾಡಲು ಶುರು ಮಾಡಿದಾಗ ಅವರು ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಆ ಬಳಿಕ ಸ್ಥಳೀಯರ ಸಹಾಯದೊಂದಿಗೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಅವಳ ದೂರಿನ ಆಧಾರದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದೇವೆ. ನಿನ್ನೆ ಬೆಳಗ್ಗೆ ತನ್ನ ಸಹಪಾಠಿ ಜೊತೆಗೆ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದಳು ಎಂದು ಮಾಹಿತಿ ನೀಡಿದ್ದಾರೆ.