ಕೊಪ್ಪಳ:
ಎಕ್ಸ್ ಖಾತೆಯಲ್ಲಿ ಕಿಡಿಕಾರಿರುವ ಅವರು, ‘ನನ್ನನ್ನು ದುರಹಂಕಾರಿ ಎಂದು ಕರೆದಿದ್ದೀರಿ. ಏಕವಚನದಲ್ಲಿ ಸಂಬೋಧಿಸಿದ್ದಿರಿ. ನಮ್ಮಪ್ಪನ ಬಗ್ಗೆ ಮಾತನಾಡಿದ್ದೀರಿ. ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ರಾಜಕೀಯ ಬೂಟಾಟಿಕೆ ಪ್ರದರ್ಶಿಸಿದ್ದೀರಿ. ಆಧಾರ ರಹಿತ ಆರೋಪ ಹಾಗೂ ವ್ಯರ್ಥ ಪ್ರಲಾಪದಿಂದ ಕೂಡಿತ್ತು’ ಎಂದು ಟೀಕಿಸಿದ್ದಾರೆ.
‘ಭ್ರಷ್ಟಾಚಾರದ ಪಿತಾಮಹರು, ಹಗರಣಗಳ ಧುರೀಣರು ಹಾಗೂ ಅವ್ಯವಹಾರಗಳ ಆರೋಪ ಎದುರಿಸಿದವರನ್ನು ಕಂಕುಳಲ್ಲಿಟ್ಟುಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದು ಚೀರಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಾಗಿದೆ’ ಎಂದು ವ್ಯಂಗ್ಯವಾಡಿದ್ದಾರೆ.‘ಅಲುಗಾಡುತ್ತಿರುವ ನಿಮ್ಮ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ಹೊರಬಂದ ನಿಮ್ಮ ಆಕ್ರಂದನ ನನಗೆ ಅರ್ಥವಾಗಿದೆ. ವಯಸ್ಸು, ರಾಜಕೀಯ ಅನುಭವ ಹಾಗೂ ಜನಸೇವೆಯಲ್ಲಿ ನಾನು ನಿಮಗಿಂತ ಹಿರಿಯ. ನನ್ನ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ವಯಸ್ಸಿನಲ್ಲಿ ದೊಡ್ಡವರಿಗೆ ಏಕವಚನದಲ್ಲಿ ಮಾತನಾಡಿದರೆ ರಾಜಕೀಯವಾಗಿ ದೊಡ್ಡವರಾಗಬಹುದು ಎಂದುಕೊಂಡಿದ್ದರೆ ಅದು ದಡ್ಡತನ’ ಎಂದಿದ್ದಾರೆ.
‘ನಿಮ್ಮ ಪಾದಯಾತ್ರೆ ಟೇಕಾಫ್ ಆಗಿಲ್ಲ. ನಮ್ಮ ಭಾಗದಲ್ಲಿ ನಿಮಗೆ ಇಮೇಜ್ ಇಲ್ಲ. ನನ್ನ ಬಗ್ಗೆ ಮಾತನಾಡಿದರೆ ನಿಮ್ಮ ರಾಜಕೀಯ ಯಾತ್ರೆಗೆ ಮೈಲೇಜ್ ಸಿಗಬಹುದು ಎಂಬ ಪ್ರಯತ್ನ ಮಾಡುತ್ತಿದ್ದೀರಿ’ ಎಂದು ಆರೋಪಿಸಿದ್ದಾರೆ.
ರೈತರಿಗೆ ನೀರು ಒದಗಿಸಿದ ವಿಚಾರದಲ್ಲಿ ತಮ್ಮ ವಿರುದ್ಧ ವಿಜಯೇಂದ್ರ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ತಂಗಡಗಿ, ಸಂಕಷ್ಟದ ಸಂದರ್ಭದಲ್ಲಿ ಅಳೆದು-ತೂಗಿ ನೀರು ಬಿಡುವ ಪರಿಸ್ಥಿತಿಯಲ್ಲೂ ರೈತರಿಗಾಗಿ ನೀರು ಒದಗಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತಾವು. ವಿಜಯೇಂದ್ರ ಅವರು ರೈತರಿಗಾಗಿ ಏನು ಮಾಡಿದ್ದಾರೆ ಎಂಬುದನ್ನು ಮೊದಲು ಹೇಳಲಿ ಎಂದು ಸವಾಲು ಹಾಕಿದ್ದಾರೆ.
ಭ್ರಷ್ಟಾಚಾರದ ಆರೋಪಕ್ಕೆ ತಿರುಗೇಟು
ಇನ್ನಾದರೂ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು. ರಾಜ್ಯದ ರೈತರಿಗೆ ನ್ಯಾಯ ಒದಗಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ಅದನ್ನು ಬಿಟ್ಟು ಕಾಮಿಡಿ ಭಾಷಣ ಮಾಡುತ್ತಿದ್ದರೆ ಇದು ಹೋರಾಟವಾಗುವುದಿಲ್ಲ; ‘ಮಜಾಭಾರತ’ದ ಎಪಿಸೋಡ್ ಅಥವಾ ‘ಕಾಮಿಡಿ ಕಿಲಾಡಿಗಳು’ ಶೋ ಆಗುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದ್ದಾರೆ.