ಕನ್ನಡಪ್ರಭ ವಾರ್ತೆ ಕಲಬುರಗಿ
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು ಕಾನೂನು ಪ್ರಕಾರ ತನಿಖೆ ನಡೆಯಲಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೇಂದ್ರ ಸರ್ಕಾರವೇ ಪ್ರಜ್ವಲ್‌ರನ್ನು ವಿದೇಶಕ್ಕೆ ಕಳಿಸಿದೆ ಎನ್ನುವ ಮಾತುಗಳಿವೆ. ಈ ಬಗ್ಗೆ ಮೋದಿ ಸೇರಿದಂತೆ ಬಿಜೆಪಿ ನಾಯಕರು ಉತ್ತರಿಸಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.ಕಲಬುರಗಿಯಲ್ಲಿ ತಮ್ಮನ್ನು ಭೇಟಿಯಾದ ಸುದದಿಗಾರರೊಂದಿಗೆ ಮಾತನಾಡಿದ ಖರ್ಗೆ, ಈ ಪ್ರಕರಣದಲ್ಲಿ ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ಆಗಿದೆ. ಶೋಷಣೆಗೆ ಒಳಗಾದ ಮಹಿಳೆಯರ ಪರ ಬಿಜೆಪಿ ಯಾಕೆ ಧ್ವನಿ ಎತ್ತುತ್ತಿಲ್ಲ? ಹುಬ್ಬಳ್ಳಿ ಘಟನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿ ಚುನಾವಣೆ ನೀತಿ ಸಂಹಿತೆಯನ್ನು ಲೆಕ್ಕಿಸದೆ ಪ್ರತಿಭಟನೆ ಮಾಡಿದ್ದ ಬಿಜೆಪಿ ನಾಯಕರು ನೊಂದ ಮಹಿಳೆಯರ ಪರ ನ್ಯಾಯಕ್ಕಾಗಿ ಜೆಡಿಎಸ್ ವಿರುದ್ಧ ಯಾವಾಗ ಪ್ರತಿಭಟನೆ ಮಾಡುತ್ತಾರೆ? ಎಂದು ಅವರು ಪ್ರಶ್ನಿಸಿದರು.
ಮಾಜಿ ಪ್ರಧಾನಿ ಸ್ಪರ್ಧಿಸಿದ್ದ ಹಾಸನದಂತ ಹೈಪ್ರೊಫೈಲ್ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬಾರದು. ಅವರ ನಡುವಳಿಕೆ ಸರಿ ಇಲ್ಲ. ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅಲ್ಲಿನ ಮಾಜಿ ಶಾಸಕರೊಬ್ಬರು ಅಮಿತ್ ಶಾ, ನಡ್ಡಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು. ಟಿವಿ ಮಾಧ್ಯಮದ ಮುಂದೆ ಮಾತನಾಡುವಾಗಲೂ ಕೂಡಾ ಕುಮಾರಸ್ವಾಮಿ ಪ್ರಜ್ವಲ್‌ಗೆ ಟಿಕೆಟ್ ನೀಡುವ ವಿಚಾರದಲ್ಲಿ ವಿರೋಧವಿರುವ ಬಗ್ಗೆ ಒಪ್ಪಿಕೊಂಡಿದ್ದರು. ಆದರೂ ಕೂಡಾ ದೇವೆಗೌಡ ಹಾಗೂ ಇಡೀ ಕುಟುಂಬ ಹೋಗಿ ಟಿಕೆಟ್ ಪಡೆದುಕೊಂಡು ಬಂದಿತ್ತು. ಪ್ರಜ್ವಲ್ ಅವರ ಲೈಂಗಿಕ ಕಿರುಕುಳ ಬಗ್ಗೆ ಗೊತ್ತಿದ್ದು ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿ ಖರ್ಗೆ, ಕೇಂದ್ರದಲ್ಲಿ ತಮ್ಮ ಸರ್ಕಾರವಿದೆ ಹೇಗೂ ಬಚಾವಾಗಬಹುದು ಎನ್ನುವ ಆಲೋಚನೆ ಇದ್ದಿರಬಹುದು. ಈ ಬಗ್ಗೆ ಮೋದಿ, ಅಮಿತ್ ಶಾ, ವಿಜಯೇಂದ್ರ ಹಾಗೂ ಅಶೋಕಣ್ಣ ಉತ್ತರಿಸಲಿ ಎಂದು ಆಗ್ರಹಿಸಿದರು.ಹುಬ್ಬಳಿಯ ಘಟನೆಯಲ್ಲಿ ಬಿಜೆಪಿ ನಾಯಕರು ತೋರಿಸಿದ ಆಸಕ್ತಿ ಇಲ್ಲಿ ಯಾಕೆ ತೋರಿಸುತ್ತಿಲ್ಲ? ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರ ಪರವಾಗಿ ಬಿಜೆಪಿ ಯಾವಾಗ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತದೆ. ನೊಂದವರ ಮನೆಗೆ ಜೆಪಿ ನಡ್ಡಾ ಯಾವಾಗ ಹೋಗುತ್ತಾರೆ ? ಎಂದು ಪ್ರಿಯಾಂಕ್ ಖರ್ಗೆ ವಾಗ್ಧಾಳಿ ನಡೆಸಿದರು.
ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿದ್ದ ಕುಮಾರಸ್ವಾಮಿಯವರೇ ಈಗ ನಿಮ್ಮ ಮನೆಯ ಮಗ ದಾರಿತಪ್ಪಿದ್ದಾನೆ. ಈಗ ಏನು ಹೇಳುತ್ತಿರಿ ಎಂದು ಪ್ರಶ್ನಿಸಿದ ಸಚಿವರು, ಪ್ರಜ್ವಲ್‌ನನ್ನು ಪಕ್ಷದಿಂದ ಉಚ್ಛಾಟನೆ ಮಾಡುವುದು ದೊಡ್ಡ ವಿಷಯವಲ್ಲ. ಆದರೆ, ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಬೇಕು. ಸರ್ಕಾರ ಕಾನೂನು ಪ್ರಕಾರ ತನಿಖೆ ನಡೆಸಲು ಆದೇಶಿಸಿದೆ. ಮೋದಿ ಅವರು ಬೇಟಿ ಬಚಾವೋ ಬೇಟಿ ಪಡಾವೋ ಘೋಷಣೆ ಏನಾಯಿತು? ಎಂದು ಟೀಕಿಸಿದರು.ಕಾಂಗ್ರೆಸ್‌ನ ಅತಿಯಾದ ಓಲೈಕೆ ರಾಜಕಾರಣದಿಂದ ವಿದ್ವಂಸಕ ಕೃತ್ಯಗಳು ನಡೆಯಲು ವರದಾನವಾಗುತ್ತಿವೆ ಎನ್ನುವ ಪ್ರಧಾನಿ ಹೇಳಿಕೆಗೆ ತೀಕ್ಷ ಪ್ರತಿಕ್ರಿಯೆ ನೀಡಿದ ಖರ್ಗೆ, ಪ್ರಧಾನಿಗಳು ಪದೇ ಪದೇ ರಾಜ್ಯಕ್ಕೆ ಬಂಸು ಹೀಗೆ ಸುಳ್ಳು ಹೇಳವುದು ಬೇಡ ಎಂದರು. ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ರಾಜಗೋಪಾಲರೆಡ್ಡಿ ಇದ್ದರು.