ಕನ್ನಡಪ್ರಭ ವಾರ್ತೆ ಸಿಂಧನೂರು
ನಗರದ ಕರಡಿ ಬಸವ ಸಭಾಂಗಣದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಕೋಮು ಸೌಹಾರ್ದತೆ ಮತ್ತು ಪ್ರಸ್ತುತ ಸವಾಲುಗಳು’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಯುವಕರಿಗೆ ತಿಳಿವಳಿಕೆ ನೀಡಿದರೂ ವಾಪಸ್ ಮೂಲ ಸ್ಥಿತಿಗೆ ಬರಲಾಗದಂತಹ ದುಸ್ಥಿತಿಗೆ ತಲುಪಿದ್ದಾರೆ. ಇಂತಹ ಸಂದರ್ಭ ಕೋಮು ಸೌಹಾರ್ದತೆಗೆ ಎದುರಾಗುವ ಸವಾಲುಗಳನ್ನು ಎದುರಿಸಲು ಬುದ್ಧೀಜೀವಿಗಳಾಗುವುದಕ್ಕಿಂತ ನಾವು ಬದ್ಧತೆ ಜೀವಿಗಳಾಗಬೇಕಿದೆ. ವಿಚ್ಛಿದ್ರಕಾರಿ ಸಂಘಟನೆಗಳು ದೇಶ, ರಾಜ್ಯ ಹಾಗೂ ಸ್ಥಳೀಯ ಮಟ್ಟದವರೆಗೂ ತಮ್ಮ ಕಬಂಧಬಾಹುಗಳನ್ನು ಚಾಚಿದ್ದು, ಜನರ ಮನಸ್ಸಲ್ಲಿ ಧರ್ಮ, ಜಾತಿ, ಮತ-ಪಂಥಗಳ ವಿಷಬೀಜ ಬಿತ್ತಿ ಸೌಹಾರ್ದತೆಗೆ ಧಕ್ಕೆ ತರುತ್ತಿವೆ. ಇಂತಹ ದುರಿತ ಕಾಲದಲ್ಲಿ ಹಳ್ಳಿ ಹಳ್ಳಿಗೆ ಸೌಹಾರ್ದತೆ ಬೆಸುಗೆ ಬೆಸೆಯಬೇಕಿದೆ. ಆ ಮೂಲಕ ಸಹಬಾಳ್ವೆ ಸಂಸ್ಕೃತಿ ಎತ್ತಿಹಿಡಿಯಬೇಕು ಎಂದರು.
ಪ್ರವಚನಕಾರ ಇಳಕಲ್‌ನ ಲಾಲ್ಹುಸೇನ್ ಕಂದಗಲ್ ಮಾತನಾಡಿ, ಹಿಂದೆ ಹಬ್ಬಗಳು ಎಂದರೆ ಹೊಸ ಉಡುಪು, ತಿನಿಸು ಹಾಗೂ ಸಂಭ್ರಮ ಎದ್ದು ಕಾಣುತ್ತಿತ್ತು. ಆದರೆ ಇಂದು ಹಬ್ಬಗಳು ಎಂದರೆ ಎಲ್ಲರಲ್ಲೂ ಭಯದ ವಾತಾವರಣ ಆವರಿಸುತ್ತದೆ. ಹಬ್ಬದ ಸಂದರ್ಭ ಪೊಲೀಸ್ ವಾಹನಗಳು ನಿಲ್ಲುತ್ತವೆ, ಗಸ್ತು ತಿರುಗುತ್ತವೆ. ಆ ರೀತಿಯ ಪರಿಸ್ಥಿತಿ ಸೃಷ್ಠಿಯಾಗಿದೆ. ಜೀವಕ್ಕೆ ಅನ್ನ, ಆಹಾರವೆಷ್ಟು ಮುಖ್ಯವೋ, ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯಿಂದ ಜೀವಿಸಲು ಸೌಹಾರ್ದತೆ ಅಷ್ಟೇ ಮುಖ್ಯ ಎಂದು ಪ್ರತಿಪಾದಿಸಿದರು.ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಭಾಷುಮಿಯಾ, ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ, ಅಂಗನವಾಡಿ ಫೆಡರೇಶನ್ ಜಿಲ್ಲಾ ಘಟಕದ ಅಧ್ಯಕ್ಷೆ ಸುಲೋಚನಾ, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಸರಸ್ವತಿ ಪಾಟೀಲ್ ಮಾತನಾಡಿದರು. ಡಿ.ಎಚ್.ಕಂಬಳಿ ಪ್ರಸ್ತಾವನೆಗೈದರು.