ಯುವಕರೇ ರಾಜ್ಯದ ಭವಿಷ್ಯದ ಆಸ್ತಿ: ಸಿಎಂ ಡಿಕೆಶಿ

KannadaprabhaNewsNetwork |  
Published : Nov 29, 2026, 01:30 AM IST
ಕೆ ಕೆ ಪಿ ಸುದ್ದಿ 02: ಸಾತನೂರಿನ ಆರ್ ಇ ಎಸ್ ಶಿಕ್ಷಣ ಸಂಸ್ಥೆಯಲ್ಲಿ ಆರಂಭಿಸಿರವ ಕಕೌಶಲ್ಯ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಿದ ಸಿ ಎಂ ಡಿಕೆಶಿ.  | Kannada Prabha

ಸಾರಾಂಶ

ಯುವಕರು ಕೇವಲ ಪದವಿ ಪಡೆದು ಉದ್ಯೋಗ ಹುಡುಕದೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಕೌಶಲ್ಯ ಬದುಕಿನಲ್ಲಿ ನಾಯಕತ್ವದ ಗುಣ, ಸಾಧಿಸುವ ಛಲ ಬೆಳೆಸಿಕೊಳ್ಳಬೇಕು. ಶಿಕ್ಷಣ ಮತ್ತು ಕೌಶಲ್ಯವೇ ಬದುಕಿನ ಬಹುದೊಡ್ಡ ಆಸ್ತಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯುವಕರಿಗೆ ಕರೆ ನೀಡಿದರು.

ಕನಕಪುರ: ಯುವಕರು ಕೇವಲ ಪದವಿ ಪಡೆದು ಉದ್ಯೋಗ ಹುಡುಕದೆ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ಕೌಶಲ್ಯ ಬದುಕಿನಲ್ಲಿ ನಾಯಕತ್ವದ ಗುಣ, ಸಾಧಿಸುವ ಛಲ ಬೆಳೆಸಿಕೊಳ್ಳಬೇಕು. ಶಿಕ್ಷಣ ಮತ್ತು ಕೌಶಲ್ಯವೇ ಬದುಕಿನ ಬಹುದೊಡ್ಡ ಆಸ್ತಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯುವಕರಿಗೆ ಕರೆ ನೀಡಿದರು.

ಸಾತನೂರಿನಲ್ಲಿ ರೂರಲ್ ಎಜುಕೇಷನ್ ಸೊಸೈಟಿ ಆರಂಭಿಸಿರುವ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾತನೂರನ್ನು ಟ್ಯಾಲೆಂಟ್ ಪಾರ್ಕ್ ಆಗಿ ರೂಪಿಸುವ ಉದ್ದೇಶದಿಂದ ಈ ಕೇಂದ್ರ ಸ್ಥಾಪಿಸಲಾಗಿದೆ. ಗ್ರಾಮೀಣ ಯುವಕರಿಗೂ ನಗರ ಪ್ರದೇಶದವರಿಗೆ ಸಿಗುವಂತಹ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗಾಧಾರಿತ ತರಬೇತಿ ದೊರೆಯಬೇಕು ಎಂಬುದು ನಮ್ಮ ಆಶಯ ಎಂದರು.

ಕನಕಪುರದಲ್ಲಿ 10 ಕಡೆ ಕೆಪಿಎಸ್ ಶಾಲೆ:

ನಾನು ಎಲ್ಲಿ ಶಿಕ್ಷಣದಿಂದ ವಂಚಿತನಾದೆನೋ, ಅಂತಹ ಪರಿಸ್ಥಿತಿ ನಮ್ಮ ಕ್ಷೇತ್ರದ ಮಕ್ಕಳಿಗೆ ಬರಬಾರದು. ಅದಕ್ಕಾಗಿ ಕನಕಪುರ ಕ್ಷೇತ್ರದಲ್ಲಿ 10 ಕಡೆ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸಿ, ಸಿಎಸ್ಆರ್ ಅನುದಾನದ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಎಗ್ಗನೂರು, ದೊಡ್ಡಾಲಹಳ್ಳಿ, ಕೋಡಿಹಳ್ಳಿ, ಹೊಸದುರ್ಗ, ಚಿಕ್ಕಮುದುವಾಡಿ ಸೇರಿದಂತೆ ಹಲವು ಕಡೆ ಕಾಮಗಾರಿಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಕೆಮ್ಮಳೆ ಮತ್ತು ಸಾತನೂರು ಸಮೀಪವೂ ಶಾಲೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

“ಬೆಂಗಳೂರಿನಲ್ಲಿ ಸುಮಾರು 26 ಲಕ್ಷ ಐಟಿ ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಗ್ರಾಮೀಣ ಯುವಕರಿಗೂ ತಂತ್ರಜ್ಞಾನ ಮತ್ತು ಕೌಶಲ್ಯಾಧಾರಿತ ಉದ್ಯೋಗಾವಕಾಶಗಳು ಸಿಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣ, ತಾಂತ್ರಿಕ ತರಬೇತಿ ಮತ್ತು ಕೈಗಾರಿಕಾ ಸಹಭಾಗಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಯುವಕರಿಗೆ ನಾಲ್ಕು ''''''''ಡಿ''''''''ಗಳ ಕಿವಿಮಾತು:

ನಿಮ್ಮ ತಲೆಯಲ್ಲಿ ನಾಲ್ಕು ''''''''ಡಿ''''''''ಗಳನ್ನು ಇಟ್ಟುಕೊಳ್ಳಬೇಕು. ಡ್ರೀಮ್ (ಕನಸು), ಡಿಸೈರ್ (ಆಸೆ),ಡೆಡಿಕೇಷನ್ (ಸಮರ್ಪಣೆ), ಡಿಸಿಪ್ಲಿನ್ (ಶಿಸ್ತು). ಮೊದಲು ಕನಸು ಕಾಣಬೇಕು, ಆ ಕನಸನ್ನು ನನಸಾಗಿಸುವ ಆಸೆಯನ್ನು ಹೊಂದಬೇಕು. ಅದಕ್ಕಾಗಿ ಸಮರ್ಪಣಾ ಮನೋಭಾವ ದಿಂದ ಶಿಸ್ತಿನಿಂದ ದುಡಿಯಬೇಕು ಎಂದು ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.

ಮೆಡಿಕಲ್ ಕಾಲೇಜು, ತಾಂತ್ರಿಕ ಶಿಕ್ಷಣಕ್ಕೆ ಒತ್ತು:

ಕನಕಪುರದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೂಲಕ ಪ್ರತ್ಯೇಕ ಕಾಲೇಜು ಆರಂಭಿಸುವ ಪ್ರಯತ್ನ ಮಾಡಲಾಗಿದೆ. ದಯಾನಂದ ಸಾಗರ್ ಸಂಸ್ಥೆ ಮೂಲಕ ಖಾಸಗಿ ವೈದ್ಯಕೀಯ ಕಾಲೇಜನ್ನೂ ತರಲಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಸರ್ಕಾರದ ಬೆಂಬಲ:

ಹೊಸ ಕೈಗಾರಿಕೆಗಳನ್ನು ಆರಂಭಿಸಲು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತ್ತು ಸ್ಥಳೀಯರಿಗೆ ಉದ್ಯೋಗ ನೀಡಲು ಮುಂದೆ ಬರುವ ಉದ್ಯಮಿಗಳಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ನಿಮಗೆ ಯಾವ ನೆರವು ಬೇಕಾದರೂ ಸರಕಾರ ನಿಮ್ಮ ಮನೆ ಬಾಗಿಲಿಗೆ ಬಂದು ಸಹಾಯ ಮಾಡಲು ಸಿದ್ಧವಿದೆ. ಕೈಗಾರಿಕೆಗಳು ಬೆಳೆಯಬೇಕು, ಯುವಕರಿಗೆ ಉದ್ಯೋಗ ಸಿಗಬೇಕು ಎಂದು ಉದ್ಯಮಿಗಳಿಗೆ ಭರವಸೆ ನೀಡಿದರು.

ಶಿಕ್ಷಣಕ್ಕೆ ಸೀಟು ಸಿಗದ ನೋವೇ ಶಾಸಕನಾಗುವ ಸಂಕಲ್ಪಕ್ಕೆ ಕಾರಣ

ಬಾಲ್ಯದಲ್ಲಿ ಹೈಸ್ಕೂಲ್ಗೆ ಪ್ರವೇಶ ಪಡೆಯಲು ಪ್ರಯತ್ನಿಸಿದರೂ ಸೀಟು ಸಿಗಲಿಲ್ಲ. ಅಂದೇ ಶಾಸಕನಾಗಬೇಕು ಎಂಬ ದೊಡ್ಡ ಸಂಕಲ್ಪ ಮಾಡಿದ್ದೆ. ಇಂದು ಮುಖ್ಯಮಂತ್ರಿ ಆಗಿದ್ದರೂ ಕನಕಪುರ ಕ್ಷೇತ್ರದ ಜನರಿಗೆ ನಾನು ಮುಖ್ಯಮಂತ್ರಿ ಅಲ್ಲ, ಮನೆಮಗ ಮತ್ತು ಸೇವಕ. ಮುಖ್ಯಮಂತ್ರಿ ಸ್ಥಾನ ನನ್ನ ಕರ್ತವ್ಯವಷ್ಟೇ ಎಂದು ಹೇಳಿದರು.

ರೂರಲ್ ಎಜುಕೇಷನ್ ಸೊಸೈಟಿ ಸಂಸ್ಥೆಯನ್ನು ಸೊರೆಕಾಯಿ ದೊಡ್ಡಿ ಕರಿಯಪ್ಪನವರು ಆರಂಭಿಸಿದ್ದರು. ನನಗೂ ಶಿಕ್ಷಣದ ಬಗ್ಗೆ ಅಪಾರ ಆಸಕ್ತಿ ಇತ್ತು. ಆದರೆ ಅವರ ಸಂಸ್ಥೆಗೆ ಸ್ಪರ್ಧೆಯಾಗಿ ಮತ್ತೊಂದು ಶಿಕ್ಷಣ ಸಂಸ್ಥೆ ಸ್ಥಾಪಿಸಬಾರದು ಎಂಬ ಉದ್ದೇಶದಿಂದ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದೆ. ಬಾಲ್ಯದಲ್ಲಿ ಕರಿಯಪ್ಪನವರು, ನಮ್ಮ ಹಿರಿಯರು ನನ್ನನ್ನು ಹೈಸ್ಕೂಲ್ಗೆ ಸೇರಿಸಲು ಪ್ರಯತ್ನಿಸಿದ್ದರು. ಅಂದಿನ ಶಿಕ್ಷಣ ಸಚಿವ ಮಲ್ಲಿಕಾರ್ಜುನಸ್ವಾಮಿ ಅವರ ಬಳಿಗೂ ಕರೆದೊಯ್ದರೂ ಪ್ರವೇಶ ಸಿಗಲಿಲ್ಲ. ಅಂದೇ ರಾಜಕೀಯಕ್ಕೆ ಬಂದು ಶಾಸಕನಾಗಬೇಕು ಎಂದು ನಿರ್ಧರಿಸಿದ್ದೆ ಎಂದು ಸ್ಮರಿಸಿದರು.

ರಾಜಕೀಯದಲ್ಲಿ ಬೆಳೆದು ಇಂದು ನಿಮ್ಮ ಮುಂದೆ ರಾಜ್ಯದ ಪ್ರತಿನಿಧಿಯಾಗಿ, ಮುಖ್ಯಮಂತ್ರಿಯಾಗಿ ನಿಂತಿದ್ದೇನೆ,ಆದರೆ ಬೆಂಗಳೂರಿನಲ್ಲಿ ಏನೇ ಇದ್ದರೂ ಈ ಕ್ಷೇತ್ರಕ್ಕೆ ಬಂದಾಗ ನಿಮ್ಮ ಸೇವಕ, ನಿಮ್ಮ ಮನೆಮಗ. ನಿಮ್ಮ ತಂದೆ-ತಾಯಂದಿರು ಮತ್ತು ಕಾರ್ಯಕರ್ತರ ಮುಂದೆ ನಾನು ಮುಖ್ಯಮಂತ್ರಿ ಎಂಬುದಕ್ಕಿಂತ ನನ್ನ ಕರ್ತವ್ಯ ಮುಖ್ಯ ಎಂದರು.

ಹಿಂದೆ ಕನಕಪುರ ಮತ್ತು ಸಾತನೂರು ಹೇಗಿದ್ದವು, ಇಂದು ಹೇಗೆ ಅಭಿವೃದ್ಧಿಯಾಗಿವೆ ಎಂಬುದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕು. ಈ ಉದ್ದೇಶದಿಂದ ಕನಕಪುರ, ಸಾತನೂರು ಹಾಗೂ ಕಬ್ಬಾಳ ದೇವಸ್ಥಾನ ಸೇರಿದಂತೆ ಕನಕಪುರ ಕ್ಷೇತ್ರದ ಹಿಂದಿನ ಮತ್ತು ಇಂದಿನ ಚಿತ್ರಣವನ್ನು ಒಳಗೊಂಡಸಾಕ್ಷ್ಯಚಿತ್ರ ತಯಾರಿಸುವಂತೆ ಸೂಚಿಸಿರುವು ದಾಗಿ ತಿಳಿಸಿದರು.

ಹಿಂದೆ ಸಾತನೂರಿಗೆ ಬರಲು ಕೇವಲ 12 ಅಡಿ ರಸ್ತೆ ಇತ್ತು. ಕನಕಪುರ ಪಟ್ಟಣದ ರಸ್ತೆಗಳ ಸ್ಥಿತಿಯೂ ಉತ್ತಮವಾಗಿರ ಲಿಲ್ಲ. ಕೈಗಾರಿಕೆಗಳನ್ನು ತರಲು ಬಿಡಿಎ ಅಧಿಕಾರಿಗಳನ್ನು ಕರೆತಂದಾಗ, ರಸ್ತೆಗಳ ದುಸ್ಥಿತಿಯಿಂದ ಲಾರಿಗಳೇ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಬಳಿಕ ಬೈಪಾಸ್ ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಕ್ಷೇತ್ರವನ್ನು ಈ ಮಟ್ಟಕ್ಕೆ ತಂದಿದ್ದೇವೆ " ಎಂದು ಸ್ಮರಿಸಿದರು.

ಶಿವನಹಳ್ಳಿಯಲ್ಲಿ ನಿರ್ಮಿಸಿರುವ ಹಾಲಿನ ಡೇರಿ ಇಡೀ ದೇಶಕ್ಕೆ ಮಾದರಿಯಾಗಿದೆ,ಕಬ್ಬಾಳ ದೇವಸ್ಥಾನದ ಹಳೆಯ ಚಿತ್ರಗಳೂ ನಮ್ಮ ಬಳಿ ಇವೆ. ಹಿಂದಿನ ಸ್ಥಿತಿ ಮತ್ತು ಇಂದಿನ ಬದಲಾವಣೆಯನ್ನು ಯುವಜನರು ಅರಿತುಕೊಳ್ಳಬೇಕು. ಕೆರೆಗಳಿಗೆ ನೀರು ತುಂಬಿಸಿಕುವುದರಿಂದ ಅಂತರ್ಜಲ ಹೆಚ್ಚಾಗಿದೆ. ಇದರಿಂದ ರೈತರು ರೇಷ್ಮೆ, ಹೂವು, ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಅನುಕೂಲ ವಾಗಿದೆ. ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿಯಿಂದ ಆಸ್ತಿಗಳ ಮೌಲ್ಯವೂ ಹೆಚ್ಚಾಗಿದೆ. ಈ ಬೆಳವಣಿಗೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಯುವಜನರ ಮೇಲಿದೆ” ಎಂದರು.

ನಾಯಕತ್ವದ ಗುಣ ಬೆಳೆಸಿಕೊಳ್ಳಿ:

ಯುವಕರು ರಾಜಕೀಯದಲ್ಲಿದ್ದರೆ ಮಾತ್ರ ನಾಯಕರಲ್ಲ. ತಮ್ಮ ಬದುಕಿನಲ್ಲೂ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ನಿಮ್ಮೆಲ್ಲರಲ್ಲೂ ಕೌಶಲ್ಯ ಬೆಳೆಯಬೇಕು. ಇಂದಿನ ಸ್ಪರ್ಧೆ ಸ್ಥಳೀಯ ಮಟ್ಟಕ್ಕೆ ಸೀಮಿತವಾಗಿಲ್ಲ; ವಿಶ್ವಮಟ್ಟ ದಲ್ಲಿದೆ. ಅದಕ್ಕೆ ತಕ್ಕಂತೆ ನಿಮ್ಮನ್ನು ನೀವು ಸಿದ್ಧಪಡಿಸಿ ಕೊಳ್ಳಬೇಕು. ಯುವಕರು ಮತ್ತು ವಿದ್ಯಾರ್ಥಿಗಳೇ ನಮ್ಮ ರಾಜ್ಯದ ಭವಿಷ್ಯ ರೂಪಿಸುವ ಶಕ್ತಿ. ಕೌಶಲ್ಯಾಭಿವೃದ್ಧಿ ಕೇಂದ್ರದ ಮೂಲಕ ತರಬೇತಿ ಪಡೆಯುವ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದರು.

ಉದ್ಯೋಗ ಸೃಷ್ಟಿ, ವಲಸೆ ತಡೆಗೆ ಯೋಜನೆ:

ಕನಕಪುರ ಮತ್ತು ಸುತ್ತಮುತ್ತಲಿನ ಪ್ರದೇಶದ ಯುವಕರು ಉದ್ಯೋಗ ಅರಸಿ ಬೇರೆ ಊರುಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತವರು ಜಿಲ್ಲೆಯಲ್ಲೇ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳುವ ವಾತಾವರಣ ನಿರ್ಮಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಕೌಶಲ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಡಿಸೆಂಬರ್‌ 10ರಂದು ಸುವರ್ಣಸೌಧದ ಎದುರು ಉಪವಾಸ
ಜನಪ್ರತಿನಿಧಿಗಳ ಸ್ನೇಹಸಂಗಮಕ್ಕೆ ಸಾಕ್ಷಿಯಾದ ಹಾವೇರಿ