ಕನ್ನಡಪ್ರಭ ವಾರ್ತೆ ಹಾಸನ
ನಗರದ ಡೇರಿ ವೃತ್ತದ ಬಳಿ ಇರುವ ಸರಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯಾ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಮಹಿಳಾ ವೈದ್ಯರು, ಭಾರತೀಯ ವೈದ್ಯಕೀಯ ಸಂಘ, ಹಾಸನ ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಯುವಜನೋತ್ಸವ ೨೦೨೪ರ ಅಂಗವಾಗಿ ಎಚ್.ಐ.ವಿ. ಮತ್ತು ಏಡ್ಸ್ ಜಾಗೃತಿಗಾಗಿ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಮ್ಯಾರಥಾನ್ ಸ್ಪರ್ಧೆಗೆ ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಿಣಿ ಹಸಿರು ಬಾವುಟ ಪ್ರದರ್ಶಿಸಿ ಚಾಲನೆ ನೀಡಿದರು.ನಂತರ ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಿಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಏಡ್ಸ್ ನಂತಹ ಖಾಯಿಲೆ ಯುವ ಜನಾಂಗದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಅದನ್ನು ತಡೆಯುವುದಕ್ಕಾಗಿ ಜಿಲ್ಲಾಮಟ್ಟದ ಮ್ಯಾರಥಾನ್ ಓಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಯುವ ಜನಾಂಗ ಸೇರಿದಂತೆ ಎಲ್ಲರಿಗೂ ಇದರ ಅರಿವು ಆಗಬೇಕು. ಖಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆದುಕೊಳ್ಳುವುದಕ್ಕಿಂತ ಮೊದಲೇ ಎಚ್ಚೆತ್ತುಕೊಂಡರೆ ಉತ್ತಮ ಎಂದು ಕಿವಿಮಾತು ಹೇಳಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಎನ್. ಶಿವಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಎಚ್ಐವಿ, ಟಿಬಿ ಎರಡು ಖಾಯಿಲೆಗಳು ಕಡಿಮೆ ಆಗಬೇಕು. ಎಚ್ಐವಿಯಿಂದ ಯುವ ಜನಾಂಗ ತುಂಬ ತೊಂದರೆಗೆ ಸಿಲುಕುತ್ತಿದೆ. ಯುವ ಜನಾಂಗ ನಮ್ಮ ದೇಶದ ಆರ್ಥಿಕ ಬೆನ್ನೆಲುಬು. ಯುವಕರಿಗೆ ಏನಾದರೂ ಸಮಸ್ಯೆಯಾದರೆ ನಮ್ಮ ಆರ್ಥಿಕ ಮಟ್ಟ ಕುಸಿಯುತ್ತದೆ.ಆದ್ದರಿಂದ ಮೊದಲೇ ಜಾಗೃತರಾಗಿ ಖಾಯಿಲೆ ಬಾರದ ರೀತಿ ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.
ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ದಿನೇಶ್ ಬೈರೇಗೌಡ ಮಾತನಾಡಿ, ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮನುಷ್ಯ ಸದೃಢರಾಗಿದ್ದರೆ ದೇಶ ಪ್ರಗತಿಯಲ್ಲಿರುತ್ತದೆ. ಏಡ್ಸ್ ಎನ್ನುವ ಮಾರಕ ದಿನೇ ದಿನೇ ಹೆಚ್ಚಾಗುತ್ತ ಹೋಗುತ್ತಿದೆ. ಜೊತೆಯಲ್ಲಿ ಟಿಬಿ ಖಾಯಿಲೆ ಕೂಡ ಗಣನೀಯವಾಗಿ ಏರಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಜಾಥಾದಲ್ಲಿ ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ. ಬಿ. ಸಂಧ್ಯಾ, ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಪಿ. ಆರಾಧ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಿವಶಂಕರ್, ಜಿಲ್ಲಾ ರೋಗ ನಿಯಂತ್ರಣಾಧಿಕಾರಿ ಡಾ. ನಾಗಪ್ಪ, ಭಾರತೀಯ ರೆಡ್ ಕ್ರಾಸ್ ಕಾರ್ಯದರ್ಶಿ ಶಬ್ಬೀರ್ ಅಹಮದ್, ರೋಟರಿ ವಲಯ ಗೌರ್‍ನರ್ ನಿರ್ಮಲ್ ಕುಮಾರ್, ಹಾಸನ ಲಯನ್ಸ್ ಕ್ಲಬ್ ಅಧ್ಯಕ್ಷ ಐ.ಜಿ. ರಮೇಶ್, ಕಾರ್ಯದರ್ಶಿ ಬಿ.ಎಂ. ರವಿಕುಮಾರ್, ಖಜಾಂಚಿ ಸಿ.ಬಿ. ನಾಗರಾಜು, ವೆಂಕಟೇಗೌಡ, ಲಯನ್ಸ್ ಕ್ಲಬ್ ಹಾಸನಾಂಬ ಅಧ್ಯಕ್ಷ ರಂಗಸ್ವಾಮಿ, ವಲಯ ಅಧ್ಯಕ್ಷ ಎಚ್.ಎಸ್. ಶಿವಸ್ವಾಮಿ, ತಿಮ್ಮರಾಯಶೆಟ್ಟಿ, ಕೇಶವಮೂರ್ತಿ, ಟೈಗರ್ ಗ್ರೂಪ್ ನ ಕಾರ್ಯದರ್ಶಿ ನಿಶ್ಚಯ್, ಭರತ್, ಇನ್ನರ್ ವೀಲ್ ಕ್ಲಬ್ ಹಾಸನ್ ಗೋಲ್ಡ್ ಅಧ್ಯಕ್ಷೆ ಡಾ. ತನುಜ ಮತ್ತು ತಂಡದವರು ಸೇರಿ ಇತರರು ಉಪಸ್ಥಿತರಿದ್ದರು.