ಯುವಜನರು ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಿರಿ

KannadaprabhaNewsNetwork | Published : Oct 13, 2023 12:16 AM

ಸಾರಾಂಶ

ರಾಮನಗರ: ಯುವಜನರಿಗೆ ಉದ್ಯೋಗದ ಜೊತೆಗೆ, ಸ್ವಾವಲಂಬನೆಯಿಂದ ಬದುಕಲು ಅಗತ್ಯವಿರುವ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿವೆ. ಇವುಗಳ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಸಲಹೆ ನೀಡಿದರು.
ರಾಮನಗರ: ಯುವಜನರಿಗೆ ಉದ್ಯೋಗದ ಜೊತೆಗೆ, ಸ್ವಾವಲಂಬನೆಯಿಂದ ಬದುಕಲು ಅಗತ್ಯವಿರುವ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿವೆ. ಇವುಗಳ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಸಲಹೆ ನೀಡಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವಜನ ಸಚಿವಾಲಯ, ಜಿಲ್ಲಾಡಳಿತ, ನೆಹರು ಯುವ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ "ಯುವ ಉತ್ಸವ 2023 " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ 40 ಕೋಟಿಗೂ ಹೆಚ್ಚು ಯುವ ಜನರಿದ್ದಾರೆ. ಅವರೆಲ್ಲರು ಸದೃಢರಾಗಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು. ಯುವಜನರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ ಎಂದರು. ನೆಹರು ಯುವ ಕೇಂದ್ರದ ದಕ್ಷಿಣ ಭಾಗದ ರಾಜ್ಯಗಳ ಪ್ರಾದೇಶಿಕ ನಿರ್ದೇಶಕ ಪ್ರೊ.ಎಂ.ಎನ್. ನಟರಾಜ್ ಮಾತನಾಡಿ, 75 ವರ್ಷಗಳ ಹಿಂದೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ 30 ಕೋಟಿ ಜನಸಂಖ್ಯೆ ಇಂದು 130 ಕೋಟಿ ದಾಟಿದೆ. ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಭಾರೀ ಪ್ರಗತಿಯಾಗಿದೆ. ಅದರಲ್ಲೂ ಯುವಜನರ ಸಂಖ್ಯೆ ಹೆಚ್ಚಾಗಿದೆ ಎಂದರು. ಯುವಶಕ್ತಿಯು ಅಡ್ಡದಾರಿ ಹಿಡಿಯದಂತೆ ತಡೆದು, ದೇಶ ಕಟ್ಟುವ ಕಾರ್ಯಕ್ಕೆ ಅವರನ್ನು ಬಳಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ದೇಶ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಅವುಗಳ ಸದ್ಭಳಕೆ ಆಗಬೇಕಿದೆ. ಯುವಜನರು ದೇಶದ ಪ್ರಗತಿಗೆ ಕೈ ಜೋಡಿಸಬೇಕಿದೆ ಎಂದರು. ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿ, ಯುವ ಉತ್ಸವವು ರಾಮನಗರಕ್ಕಷ್ಟೇ ಸೀಮಿತವಾಗದೆ, ಜಿಲ್ಲೆಯ ಯುವಜನರೆಲ್ಲರೂ ಭಾಗವಹಿಸಬೇಕೆಂಬ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದೆ. ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗಿದೆ. ಉತ್ಸವಕ್ಕೆ ಒಂದೂವರೆ ಸಾವಿರ ವಿದ್ಯಾರ್ಥಿಗಳು ಉತ್ಸವಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಎಂದರು. ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸೋಮಶೇಖರ್, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಟಿ.ವಿ. ಸುರೇಶ್, ಮಾಜಿ ಶಾಸಕರಾದ ಸಿ.ಎಂ. ಲಿಂಗಪ್ಪ, ಕೆ. ರಾಜು, ಎಂ.ಸಿ. ಅಶ್ವಥ್, ಹೆಚ್ಚುವರಿ ಪೊಲ ಪದವಿ ಕಾಲೇಜಿನ ಪ್ರಾಚಾರ್ಯೆ ಶೈಲಜಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ್, ನಗರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಗಂಗಾಧರ್, ಚೇತನ್‌ಕುಮಾರ್, ಅನಿಲ್ ಜೋಗಿಂದರ್ ಉಪಸ್ಥಿತರಿದ್ದರು. ಯುವ ಉತ್ಸವದಲ್ಲಿ ಯುವ ಜನರಿಗಾಗಿ ಭಾಷಣ ಸ್ಪರ್ಧೆ, ಸಾಂಸ್ಕೃತಿಕ, ಮೊಬೈಲ್ ಛಾಯಾಗ್ರಹಣ, ಚಿತ್ರಕಲೆ, ರಂಗೋಲಿ ಬಿಡಿಸುವುದು ಹಾಗೂ ಕವನ ಬರೆಯುವ ಸ್ಪರ್ಧೆಗಳು ನಡೆದವು. ಐದು ತಾಲೂಕುಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ರೀಡಾಂಗಣದಲ್ಲಿ ವಿವಿಧ ಇಲಾಖೆ ವತಿಯಿಂದ ನಿರ್ಮಿಸಿರುವ ಸ್ಟಾಲ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಶಾಸಕ ಇಕ್ಬಾಲ್ ಹುಸೇನ್ ಭೇಟಿ ನೀಡಿ ವೀಕ್ಷಿಸಿದರು. ಬಾಕ್ಸ್‌........... ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಕ್ರಮ: ಸುರೇಶ್ ರಾಮನಗರ: ಜಿಲ್ಲಾ ಕ್ರೀಡಾಂಗಣವನ್ನು ವಿಶೇಷವಾಗಿ ಅಭಿವೃದ್ಧಿ ಮಾಡಲಾಗುವುದು. ಆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲೇ ನೀಲನಕ್ಷೆ ಸಿದ್ಧವಾಗುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ಯುವ ಉತ್ಸವದಲ್ಲಿ ಮಾತನಾಡಿದ ಅವರು, ಉತ್ಸವದಿಂದಾಗಿ ಯುವಜನರ ಪ್ರತಿಭೆ ಅನಾವರಣಕ್ಕೆ ಜಿಲ್ಲಾ ಮಟ್ಟದಲ್ಲಿ ವೇದಿಕೆ ಸಿಕ್ಕಿದೆ. ಮೊಬೈಲ್ ಬಂದ ಬಳಿಕ ಪ್ರಪಂಚವನ್ನೇ ಮರೆತಿರುವ ಅವರನ್ನು ಮೊಬೈಲ್ ಜಗತ್ತಿನಿಂದ‌ ಹೊರತರುವ ಭಾಗವಾಗಿ ಉತ್ಸವ ಆಯೋಜಿಸಲಾಗಿದೆ. ಇಂತಹ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿದರೆ ಯುವಜನರ ದೈಹಿಕ ಮತ್ತು ‌ಮಾನಸಿಕ ಬೆಳವಣಿಗೆಯೂ ಉತ್ತಮ ಎಂದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು, ನೆಹರು ಯುವಕೇಂದ್ರ ಸ್ಥಾಪಿಸಿ ಯುವಜನರ ಭವಿಷ್ಯಕ್ಕೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಲು ಅಡಿಪಾಯ ಹಾಕಿದರು. 21 ವರ್ಷಕ್ಕೆ ನಿಗದಿಯಾಗಿದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸುವ ಐತಿಹಾಸಿಕ ನಿರ್ಧಾರ ಕೈಗೊಂಡರು. ನಮ್ಮ ದೇಶ ಯಶಸ್ವಿ ಪ್ರಜಾಪ್ರಭುತ್ವದ ಕಾರಣಕ್ಕೆ ವಿಶ್ವದ ಗಮನ ಸೆಳೆದಿದೆ ಎಂದು ಸುರೇಶ್ ಹೇಳಿದರು. ಬಾಕ್ಸ್ ................ ಯುವ ಉತ್ಸವ ಅಲ್ಲ, ಕಾಂಗ್ರೆಸ್ ಉತ್ಸವ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಯುವ ಉತ್ಸವದ ಬದಲಿಗೆ ಕಾಂಗ್ರೆಸ್ ಉತ್ಸವದಂತೆ ಭಾಸವಾಯಿತು. ಈ ಉತ್ಸವದಲ್ಲಿ ಭಾಗಿಯಾದವರ ಪೈಕಿ ಜಿಲ್ಲಾಧಿಕಾರಿ ಅವಿನಾಶ್‌ , ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಎಎಸ್ಪಿ ಟಿ.ವಿ.ಸುರೇಶ್, ನೆಹರು ಯುವ ಕೇಂದ್ರದ ದಕ್ಷಿಣ ಭಾಗದ ರಾಜ್ಯಗಳ ಪ್ರಾದೇಶಿಕ ನಿರ್ದೇಶಕ ಪ್ರೊ.ಎಂ.ಎನ್. ನಟರಾಜ್ ಅವರನ್ನು ಹೊರತು ಪಡಿಸಿ ಉಳಿದವರೆಲ್ಲರು ಕಾಂಗ್ರೆಸ್‌ ನಾಯಕರೇ ಆಗಿದ್ದರು. ಶಾಸಕ ಇಕ್ಬಾಲ್ ಹುಸೇನ್ ಸಾರಥ್ಯದಲ್ಲಿ ಆಯೋಜನೆಗೊಂಡಿದ್ದ ಯುವ ಉತ್ಸವದ ನಿರ್ವಹಣೆಯಲ್ಲಿ ಕಾಂಗ್ರೆಸ್‌ ಮುಖಂಡರು ಸಕ್ರಿಯರಾಗಿದ್ದರು. ಈ ಯುವ ಉತ್ಸವ ಕಾಂಗ್ರೆಸ್‌ ಉತ್ಸವದಂತೆ ಕಂಡು ಬಂದಿತು. 12ಕೆಆರ್ ಎಂಎನ್‌ 7,8,9,10,11,12,13.ಜೆಪಿಜಿ (ಕೆಳಗಿನ ಫೋಟೋ ಲೀಡ್‌ಗೆ ಮೈನ್‌ ಫೋಟೋ ಬಳಸಿ) 7.ಜಿಲ್ಲಾ ಮಟ್ಟದ ಯುವ ಉತ್ಸವವನ್ನು ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು. 8.ಯುವ ಉತ್ಸವದಲ್ಲಿ ಪಾಲ್ಗೊಂಡಿರುವ ಕಾಲೇಜು ವಿದ್ಯಾರ್ಥಿಗಳು 9.ಯುವ ಉತ್ಸವದಲ್ಲಿ ತೆರೆದಿದ್ದ ಸ್ಟಾಲ್‌ ಗಳನ್ನು ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸಿದರು. 10.ಡೊಳ್ಳು ಕುಣಿತ ಪ್ರದರ್ಶಿಸಿದ ವಿದ್ಯಾರ್ಥಿನಿಯರೊಂದಿಗೆ ಶಾಸಕ ಇಕ್ಬಾಲ್‌ ಹುಸೇನ್‌.

Share this article