ಯುವ ಸಮುದಾಯ ಸಾಹಿತ್ಯದಿಂದ ವಿಮುಖ: ಸಾಹಿತಿ ಕಾಯ್ಕಿಣಿ

KannadaprabhaNewsNetwork |  
Published : Nov 17, 2025, 01:15 AM IST
ಕಾರ್ಯಕ್ರಮದಲ್ಲಿ ಸಂತೋಷ ಅಂಗಡಿ ಹಾಗೂ ರಾಮಚಂದ್ರ ಕುಲಕರ್ಣಿ ಅವರಿಗೆ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ಸಾಮಾಜಿಕ ಜಾಲತಾಣ ಪ್ರಭಾವವೋ ಆಥವಾ ಇನ್ಯಾವುದೋ ಕಾರಣಗಳಿಂದ ಯುವ ಸಮುದಾಯ ಸಾಹಿತ್ಯ ವಲಯದಿಂದ ವಿಮುಖವಾಗುತ್ತಿದೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಬೇಸರ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ಸಾಮಾಜಿಕ ಜಾಲತಾಣ ಪ್ರಭಾವವೋ ಆಥವಾ ಇನ್ಯಾವುದೋ ಕಾರಣಗಳಿಂದ ಯುವ ಸಮುದಾಯ ಸಾಹಿತ್ಯ ವಲಯದಿಂದ ವಿಮುಖವಾಗುತ್ತಿದೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಬೇಸರ ವ್ಯಕ್ತಪಡಿಸಿದರು.ನಗರದ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಟ್ರಸ್ಟ್, ಜಗದೀಶ್ ಶೆಟ್ಟರ ದತ್ತಿ ಆಶ್ರಯದಲ್ಲಿ ಭಾನುವಾರ ನಡೆದ 2023 ಮತ್ತು 2024ನೇ ಸಾಲಿನ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯ, ಮಾನವೀಯ ಒಡನಾಟಗಳ ಸಂಬಂಧಗಳಿಲ್ಲದಿದ್ದರೆ ಕಥೆ, ಕಾವ್ಯ ರಚಿಸಲು ಸಾಧ್ಯವಿಲ್ಲ. ಇತ್ತೀಚಿನ ದಶಕದಲ್ಲಿ ಇದು ಹಂತ ಹಂತವಾಗಿ ಕಡಿಮೆಯಾಗುತ್ತಿದೆ. ಹಾಗಾಗಿ ಅತ್ಯುತ್ತಮ ಅನುಭಾವದ ಕಾವ್ಯ, ಕಥನಗಳು ಹೊರಬರುತ್ತಿಲ್ಲ. ಒಂದೊಂದು ಊರಿನಲ್ಲಿ 20-25 ಕವಿಗಳು, ಕೃತಿಕಾರರು ಇದ್ದಾರೆ. ಮುಖತಃ ಭೇಟಿಯಾಗೊಣ ಎಂದು ತಿಳಿಸಿದರೆ ಅವರಾರು ಬರಲ್ಲ. ಬಂದವರು ಮಾತನಾಡದೇ ಮೌನವಾಗಿರುತ್ತಾರೆ. ಏನಂತ ಕೇಳಿದರೆ ನಾವೆಲ್ಲ ಫೇಸ್‌ಬುಕ್‌ ಗೆಳೆಯರು ಎನ್ನುತ್ತಾರೆ. ಇಂಥವರು ಮನುಷ್ಯನ ಒಡನಾಟದಿಂದ ದೂರ ಇದ್ದರೆ ಅದ್ಹೇಗೆ ಕಾವ್ಯ, ಕಥನ ಬರೆಯಲು ಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದರು.

ಕೆಲವರು ಬರವಣಿಗೆ ಎಂದರೆ ದಿನಚರಿ ಎಂದುಕೊಂಡಿದ್ದಾರೆ. ಇದು ಕಾವ್ಯ, ಕೃತಿಕಾರರ ಲಕ್ಷಣವಲ್ಲ. ಅದರ ಅಗತ್ಯವೂ ಇಲ್ಲ. ಜೀವ ಲೋಕದ ಸ್ಪರ್ಶ, ಸ್ಪಂದನ ಇದ್ದರೆ ಹಾಗೂ ಜಗತ್ತಿನಲ್ಲಿ ಮುಳುಗಿ ಹೋದರೆ ಮಾತ್ರ ಕಥೆ, ಕಾವ್ಯ, ಕಥನಗಳು ಹೊರಬರುತ್ತವೆ. ಇದನ್ನು ಯುವ ಸಮುದಾಯ ಅರಿತುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಹುಬ್ಬಳ್ಳಿ ಹಾಗೂ ಧಾರವಾಡ ನೆಲ ನನ್ನ ಏಳ್ಗೆಗೆ ಬುನಾದಿಯಾಗಿದೆ. ಸಾಹಿತ್ಯದ ವಲಯದ ಎಲ್ಲ ಆಯಾಮದ ಸಂಘಟನೆಗಳು ಸಂಚಲನ ಮೂಡಿಸುತ್ತಿದ್ದವು. ಕಳೆದ 10-15 ವರ್ಷಗಳಿಂದ ಹು-ಧಾ ಮತ್ತೆ ಸೆಳೆಯುತ್ತಿದೆ ಎಂದು ಹಳೆಯ ನೆನಪುಗಳನ್ನು ಕಾಯ್ಕಿಣಿ ಮೆಲಕು ಹಾಕಿದರು.

ಹಿರಿಯ ಕವಿ ಸತೀಶ್ ಕುಲಕರ್ಣಿ ಮಾತನಾಡಿ, ಕನ್ನಡ ಕಾವ್ಯಗಳು, ನಾಟಕಗಳು ಕನ್ನಡ ನಾಡನ್ನು ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂದರು. ತೀರ್ಪುಗಾರರಾದ ಚಂದ್ರಶೇಖರ ವಸ್ತ್ರದ ಅವರು ಕವನ ಸಂಕಲನಗಳನ್ನು ಪರಿಚಯಿಸಿದರು. ಈ ವೇಳೆ ಅವರು, ಕವಿಗಳಿಗಿಂತ ಕವನಗಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಒಳ್ಳೆಯ ಕವನಗಳು ಕಮ್ಮಿ ಆಗಿವೆ. ಇಂಥ ಸಂದರ್ಭದಲ್ಲಿ ‘ಭವದ ಅಗಳಿ’ ಹಾಗೂ ‘ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ’ ಕವನ ಸಂಕಲನಗಳು ಹೆಚ್ಚು ಮೆಚ್ಚುಗೆ ಗಳಿಸಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.ಪ್ರಶಸ್ತಿ ಪ್ರದಾನ:

‘ಭವದ ಅಗಳಿ’ ಕವನ ಸಂಕಲನಕಾರ ಸಂತೋಷ ಅಂಗಡಿ ಹಾಗೂ ‘ಅರ್ಥವಿಲ್ಲ ಸ್ವಾರ್ಥವಿಲ್ಲ ಬರೀ ಭಾವಗೀತಾ’ ಕವನ ಸಂಕಲನಕಾರ ರಾಮಚಂದ್ರ ಕುಲಕರ್ಣಿ ಅವರಿಗೆ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಸದ ಜಗದೀಶ ಶೆಟ್ಟರ, ಟ್ರಸ್ಟ್‌ ಅಧ್ಯಕ್ಷ ಎಂ.ಎ. ಸುಬ್ರಹ್ಮಣ್ಯ, ವಾಣಿಜ್ಯೋದ್ಯಮ ಸಂಸ್ಥೆ ಗೌರವ ಕಾರ್ಯದರ್ಶಿ ಉದಯ ರೇವಣಕರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ