)
ಶಿಡ್ಲಘಟ್ಟ: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ವೀಕ್ಷಿಸಲು ದ್ವಿಚಕ್ರ ವಾಹನದಲ್ಲಿ ಕೋಲಾರಕ್ಕೆ ತೆರಳುತ್ತಿದ್ದ ಇಬ್ಬರು ಯುವಕರು ಅಪಘಾತಕ್ಕೀಡಾಗಿ, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಹಂಡಿಗನಾಳ ಗ್ರಾಮದ ಕೆರೆಕಟ್ಟೆ ಸಮೀಪದ ಸೇತುವೆ ಬಳಿ ನಡೆದಿದೆ.ದೊಡ್ಡಬಳ್ಳಾಪುರದ ಸಂಜಯನಗರ ನಿವಾಸಿ ಪುರುಷೋತ್ತಮ (36) ಮೃತರು. ಅವರೊಂದಿಗೆ ತೆರಳುತ್ತಿದ್ದ ವಿನಯ್ (35) ಗಂಭೀರವಾಗಿ ಗಾಯಗೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸೇತುವೆ ಬಳಿ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಎದುರಿನಿಂದ ಬಂದ ವಾಹನವನ್ನು ತಪ್ಪಿಸುವ ವೇಳೆ ನಿಯಂತ್ರಣ ಕಳೆದುಕೊಂಡಿರುವ ಸಾಧ್ಯತೆಯೂ ವ್ಯಕ್ತವಾಗಿದೆ. ಆದರೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.ಅಪಘಾತದ ರಭಸಕ್ಕೆ ಪುರುಷೋತ್ತಮ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ವಿನಯ್ ಕಾಲಿಗೆ ಗಂಭೀರ ಗಾಯವಾಗಿದೆ. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಕ್ರಮ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.