ಕೊಪ್ಪಳ:
ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.ಜಿಲ್ಲಾಡಳಿತದಲ್ಲಿ ಶುಕ್ರವಾರ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ. ಮಹಾಂತ ಶಿವಯೋಗಿಗಳು ಮಾದಕ ವಸ್ತುಗಳ ವಿರೋಧದ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಿದ್ದರು. ಅವರು ಜೋಳಿಗೆ ಯಾತ್ರೆ ಕೈಗೊಂಡು ಜನ ಸಮುದಾಯದ ಮುಂದೆ ಹೋಗಿ, ನಿಮ್ಮಲ್ಲಿ ದುಶ್ಚಟಗಳಿದ್ದರೆ ನನ್ನ ಜೋಳಿಗೆಯಲ್ಲಿ ಹಾಕಿ ಉತ್ತಮ ವ್ಯಕ್ತಗಳಾಗಿ ಬಾಳಬೇಕೆಂದು ಸಮಾಜಕ್ಕೆ ಸಂದೇಶ ನೀಡಿದ್ದರು. ಅಸಂಖ್ಯಾತ ಜನರ ದುಶ್ಚಟ ದೂರ ಮಾಡುವ ಮೂಲಕ ಅವರು ವ್ಯಸನಮುಕ್ತ ಆಂದೋಲನದ ಹರಿಕಾರರಾಗಿದ್ದಾರೆ ಎಂದರು.ಉಪನ್ಯಾಸ ನೀಡಿದ ಪ್ರಾಂಶುಪಾಲ ಡಾ. ಪ್ರಭುರಾಜ ಕೆ. ನಾಯಕ್, ಡಾ. ಮಹಾಂತ ಶಿವಯೋಗಿಗಳು ಸಮಾಜದಲ್ಲಿರುವ ಸಮಸ್ಯೆ ಹುಡುಕಿ ಪರಿಹಾರ ನೀಡಿದ್ದರು. ದುಶ್ಚಟ ಮಾಡುವರ ಬಳಿ ಹೋಗಿ ಅವುಗಳನ್ನು ತೊಡೆದು ಹಾಕಲು ಶ್ರಮಿಸಿದ್ದರು. ಅವರು ಗ್ರಾಮವೊಂದರಲ್ಲಿ ಭಿಕ್ಷೆಗೆ ತೆರಳಿದ್ದಾಗ ಕುಡಿತದ ಚಟದಿಂದ ವ್ಯಕ್ತಿ ಮೃತಪಟ್ಟು, ಆತನ ಹೆಂಡತಿ, ಮಕ್ಕಳು, ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದನ್ನು ನೋಡಿದ ಶ್ರೀಗಳು, ಇಂತಹ ದುಶ್ಚಟಗಳೇ ಸಮಾಜಕ್ಕೆ ಬಹುದೊಡ್ಡ ಸಮಸ್ಯೆಗಳಾಗಿವೆ. ಇವುಗಳನ್ನು ಹೋಗಲಾಡಿಸಬೇಕೆಂದು ನಿರ್ಧರಿಸಿ ಅಂದಿನಿಂದ ಸಾರ್ವಜನಿಕರಲ್ಲಿನ ದುಶ್ಚಟಗಳನ್ನು ಭಿಕ್ಷೆಯಾಗಿ ತಮ್ಮ ಜೋಳಿಗೆಗೆ ಹಾಕಿಕೊಂಡು ಜನರನ್ನು ದುಶ್ಚಟಗಳಿಂದ ಮುಕ್ತಗೊಳಿಸುವ ಸತ್ಕಾರ್ಯ ಮಾಡಿದರು ಎಂದರು.
ಜಿಲ್ಲಾಸ್ಪತ್ರೆಯ ಮನೋವೈದ್ಯ ಡಾ. ಲಕ್ಷ್ಮೀದೇವಿ ಪಾಟೀಲ್ ಮಾತನಾಡಿ, ದುಶ್ಚಟಗಳಿಂದ ಮನಸ್ಸು ವಿಕೃತಿಗೊಂಡು ಅಪರಾಧಿಕ ಕೃತ್ಯಗಳಿಗೆ ಪ್ರೇರೇಪಿಸುತ್ತದೆ. ಇಂತಹ ವಿಷಯಗಳು ಬರೀ ಒಬ್ಬ ವ್ಯಕ್ತಿಗೆ ಮಾತ್ರವಲ್ಲ, ಆ ವ್ಯಕ್ತಿಯ ಕುಟುಂಬ, ಊರು, ಸಮಾಜ, ದೇಶಕ್ಕೆ ಮಾರಕವಾಗುತ್ತವೆ. ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಇದನ್ನು ತಡೆಯಬೇಕಿದೆ ಎಂದು ಹೇಳಿದರು.ಪ್ರತಿಜ್ಞಾವಿಧಿ:
ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಡಿಡಿಪಿಯು ಜಗದೀಶ ವ್ಯಸನ ಮುಕ್ತ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ಶೆಟ್ಟಪ್ಪನವರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಜಿ. ಸುರೇಶ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪುಷ್ಪಲತಾ, ಜಿಲ್ಲಾ ಮಾನಸಿಕ ಕಾರ್ಮಕ್ರಮ ಅನುಷ್ಠಾನಾಧಿಕಾರಿ ಡಾ. ಪ್ರಕಾಶ ಎಚ್., ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಸೇರಿದಂತೆ ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು, ಅಧಿಕಾರಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.