ಪ್ರತಿಭೆ ಹೊರತರುವ ಮಹತ್ವದ ವೇದಿಕೆ ಯುವಜನೋತ್ಸವ: ಪ್ರೊ.ವಿಜಯಾ ಕೋರಿಶೆಟ್ಟಿ

KannadaprabhaNewsNetwork |  
Published : Jan 17, 2026, 04:00 AM IST
ಕ.ರಾ.ಅ.ಮ.ವಿ.ವಿ. ಅಂತರ್ ಮಹಿಳಾ ಕಾಲೇಜುಗಳ ಯುವಜನೋತ್ಸವ 2025-26ರ 20ನೇ ಶಕ್ತಿ ಸಂಭ್ರಮಕ್ಕೆ ವಿ.ವಿ. ಕುಲಪತಿ ವಿಜಯಾ ಕೋರಿಶೆಟ್ಟಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ವಿ.ವಿ. ಅಂತರ ಮಹಿಳಾ ಕಾಲೇಜುಗಳ ಯುವಜನೋತ್ಸವ 2025-26ರ 20ನೇ ಶಕ್ತಿ ಸಂಭ್ರಮಕ್ಕೆ ವಿ.ವಿ. ಕುಲಪತಿ ವಿಜಯಾ ಕೋರಿಶೆಟ್ಟಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಯುವಜನೋತ್ಸವ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಮಹತ್ವದ ವೇದಿಕೆಯಾಗಿದೆ ಎಂದು ಕ.ರಾ.ಅ.ಮ.ವಿ.ವಿ. ಕುಲಪತಿ ಪ್ರೊ.ವಿಜಯಾ ಬಿ.ಕೋರಿಶೆಟ್ಟಿ ಹೇಳಿದರು.

ನಗರದ ಬಿವಿವಿಎಸ್‌ ಕ್ಯಾಂಪಸ್‌ನಲ್ಲಿ ಶುಕ್ರವಾರ ಆಯೋಜಿಸಿದ ಕ.ರಾ.ಅ.ಮ.ವಿ.ವಿ ವಿಜಯಪುರ ಹಾಗೂ ಬಾಗಲಕೋಟೆ ಬಿವಿವಿ ಸಂಘದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯ ಮುಧೋಳ ಸಹಯೋಗದಲ್ಲಿ ಅಂತರ್ ಮಹಿಳಾ ಮಹಾವಿದ್ಯಾಲಯಗಳ ಮೂರು ದಿನಗಳ ಯುವಜನೋತ್ಸವ 2025-26ರ 20ನೇ ಶಕ್ತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗಲೇ ಸಂಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗುವಂತೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಯುವಜನೋತ್ಸವದಂತಹ ಕಾರ್ಯಕ್ರಮಗಳು ವಿದ್ಯಾರ್ಥಿನಿಯರ ಆತ್ಮವಿಶ್ವಾಸ, ನಾಯಕತ್ವ ಮತ್ತು ಸೃಜನಶೀಲತೆ ಹೆಚ್ಚಿಸುತ್ತವೆ. ತೀರ್ಪುಗಾರರು ನಿಜವಾದ ಪ್ರತಿಭೆಗಳನ್ನು ಗುರುತಿಸಿ ಪ್ರೊತ್ಸಾಹ ನೀಡಬೇಕು. ವಿದ್ಯಾರ್ಥಿಗಳಿಗೆ ಜ್ಞಾನ ಹಾಗೂ ಮನರಂಜನೆಯ ಸಮತೋಲನ ಒದಗಿಸುವಂತ ಕೆಲಸವಾಗಬೇಕು ಎಂದು ತಿಳಿಸಿದರು.

ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ 25ಕ್ಕೂ ಹೆಚ್ಚು ಮಹಾವಿದ್ಯಾಲಯಗಳಿಂದ 1200ಕ್ಕೂ ಅಧಿಕ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಸರನ್ನು ನೋಂದಣಿ ಮಾಡಿಕೊಂಡಿರುತ್ತಾರೆ ಹಾಗೂ ಈ ಸ್ಫರ್ಧೆಗಳನ್ನು ಆಯೋಜಿಸಲು ವಿಶ್ವವಿದ್ಯಾಲಯದ ತಾಂತ್ರಿಕ ಸಮಿತಿ ತಂಡ, ವಿವಿಧ ಸ್ಪರ್ಧೆಗಳ ನಿರ್ಣಾಯಕರಾಗಿ 20 ಅನುಭವಿಕರು ಹಾಗೂ ಮಹಾವಿದ್ಯಾಲಯದ 100ಕ್ಕೂ ಅಧಿಕ ವಿದ್ಯಾರ್ಥಿನಿಯರು ಸ್ವಯಂಸೇವಕರಾಗಿ ಭಾಗವಹಿಸಿದ್ದಾರೆ. ಒಟ್ಟು 4 ಮುಖ್ಯವೇದಿಕೆಗಳಲ್ಲಿ ವಿದ್ಯಾರ್ಥಿನಿಯರು ತಮ್ಮ ಕಲೆ, ಸಾಹಿತ್ಯ, ನಾಟಕ, ಸಂಗೀತ ಹಾಗೂ ನೃತ್ಯಕ್ಕೆ ಸಂಬಂಧಿಸಿದ ಸ್ಪರ್ಧೆಗಳು ನಡೆಯಲಿವೆ ಎಂದು ವಿವರಿಸಿದರು.

ಕ.ರಾ.ಅ.ಮ.ವಿ.ವಿ ವಿಶ್ರಾಂತ ಕುಲಪತಿ ಪ್ರೊ.ಮೀನಾ ಚಂದಾವರಕರ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಉಲ್ಲಾಸದಿಂದ ಇರಬೇಕಾದರೇ ವಿದ್ಯಾರ್ಥಿನಿಯರು ತಮ್ಮ ಕಲಿಕೆಯ ಜೊತೆಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಆನಂದಿಸಬೇಕು. ಸೃಜನಾತ್ಮಕ ಕೌಶಲ್ಯಾಧಾರಿತ ಕಲೆ ಬೆಳಸಿಕೊಳ್ಳಬೇಕು. ವಿ.ವಿ.ವ್ಯಾಪ್ತಿಯ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಇಂತಹ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಅವರನ್ನು ಪ್ರೇರಿಪಿಸಬೇಕು ಎಂದರು.

ಕ.ರಾ.ಅ.ಮ.ವಿ.ವಿ ಕುಲಸಚಿವ (ಆಡಳಿತ) ಶಂಕರಗೌಡ ಸೋಮನಾಳ ಸ್ವರಚಿತ ಕವನ ವಾಚನ ಮಾಡುವ ಮೂಲಕ ವಿದ್ಯಾರ್ಥಿನಿಯರ ಕ್ಷೇಮಾಭಿವೃದ್ಧಿಗೆ ವಿ.ವಿ.ಕೊಡುಗೆ ವಿವರಿಸಿದರು.

ಬಾಗಲಕೋಟೆ ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಎಸ್.ಸೂಳಿಭಾವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿವಿವಿ ಸಂಘದ ವ್ಯಾಪ್ತಿಯಲ್ಲಿ 184 ಅಂಗ ಸಂಸ್ಥೆಗಳಿವೆ. ಯುಜಿ ಟು ಪಿಜಿ ಗಳಲ್ಲದೇ ಎಂಜನೀಯರಿಂಗ್, ಮೆಡಿಕಲ್, ಬಿಬಿಎ, ಎಂಬಿಎ ಸೇರಿದಂತೆ ವಿವಿಧ ತರಬೇತಿ ಕೇಂದ್ರಗಳ ಮೂಲಕ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ. 35 ಹಾಸ್ಟೇಲ್, 200 ಸ್ಕೂಲ್ ಬಸ್, 6 ಸಾವಿರ ಶಿಕ್ಷಕರು ಇದ್ದಾರೆ. ಒಟ್ಟಾರೇ ವಿ.ವಿ. ಮಾಡುವ ಕೆಲಸವನ್ನು ಬಿವಿವಿ ಸಂಘ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಈ ಸಂಘ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಹಾಯ ಸಹಕಾರ ಮಾಡಿದವರನ್ನು ಸ್ಮರಿಸಿದರು.

ಕ.ರಾ.ಅ.ಮ.ವಿ.ವಿ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶಕಿ ಪ್ರೊ.ಜ್ಯೋತಿ ಉಪಾಧ್ಯೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಕ.ರಾ.ಅ.ಮ.ವಿ.ವಿ ಡೀನ್, ಶಿಕ್ಷಣ ನಿಕಾಯ ಹೂವಣ್ಣ ಸಕ್ವಾಲ್ ಸಂದೇಶ ವಾಚನ ಮಾಡಿದರು. ದಾನಮ್ಮದೇವಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಎಂ.ಹಿರೇಮಠ ಸ್ವಾಗತಿಸಿದರು. ಪ್ರೊ.ಎ.ಎನ್.ಬಾಗೇವಾಡಿ ಅತಿಥಿಗಳನ್ನು ಪರಿಚಯಿಸಿದರು. ಮಲ್ಲಿಕಾರ್ಜುನ.ಎಂ ಮತ್ತು ಪ್ರೊ.ಎ.ಸಿ.ಕೆರೂರ ನಿರೂಪಿಸಿದರು. ಪ್ರೊ.ಎಸ್.ಬಿ.ಕಬ್ಬಿಣದ ವಂದಿಸಿದರು. ಅಕ್ಷತಾ ಹಾಗೂ ದೀಪಾ ಸಂಗಡಿಗರು ಪ್ರಾರ್ಥನೆ ಗೀತೆ, ಸುರೇಖಾ ದಳವಾಯಿ ಹಾಗೂ ಸಂಗಡಿಗರು ಮಹಿಳಾ ಗೀತೆ ಹಾಡಿದರು. ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿನಿಯರ ಆಕರ್ಷಕ ಕಲಾತಂಡವು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಿತು.

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಶಕ್ತಿ ಸಂಭ್ರಮ ಎಂಬ ಹೆಸರಿನಲ್ಲಿ ಅಂತರ್ ಮಹಿಳಾ ಮಹಾವಿದ್ಯಾಲಯಗಳ ಯುವಜನೋತ್ಸವಗಳನ್ನು ಆಯೋಜಿಸುತ್ತ ಬಂದಿದೆ. ಇದು ಅಕ್ಕಮಹಾದೇವಿಯ ಆದರ್ಶಗಳನ್ನು ಪಾಲಿಸುವಂತೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ಪ್ರೇರಣೆ ನೀಡುತ್ತದಲ್ಲದೇ ಇವು ಕೇವಲ ಮನರಂಜನಾ ಕಾರ್ಯಕ್ರಮಗಳಲ್ಲ, ಬದಲಿಗೆ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯ ಪ್ರದರ್ಶಿಸುವ ವೇದಿಕೆಗಳಾಗಿವೆ. ವಿದ್ಯಾರ್ಥಿನಿಯರು ಈ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮಲ್ಲಿರುವ ಕಲಾ ಪ್ರತಿಭೆ ತೋರಿಸಬೇಕು.

-ಪ್ರೊ.ವಿಜಯಾ ಬಿ.ಕೋರಿಶೆಟ್ಟಿ, ಕ.ರಾ.ಅ.ಮ.ವಿ.ವಿ. ಕುಲಪತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಲೀಕ್‌ ಆದರೆ ಪ್ರಿನ್ಸಿಪಾಲ್‌ ವಿರುದ್ಧ ಕೇಸ್‌
ಮಹಾ ಜಿಪಂ ಎಲೆಕ್ಷನ್‌ಗೆ ಮೈಸೂರು ಇಂಕ್‌ ಬಳಕೆ