ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ: ಯುವನಿಧಿ ಯೋಜನೆಯ ಪೋಸ್ಟರ್‌ ಬಿಡುಗಡೆ

KannadaprabhaNewsNetwork |  
Published : Jan 31, 2025, 12:50 AM ISTUpdated : Jan 31, 2025, 01:25 PM IST
30ಎಚ್ಎಸ್ಎನ್5 :  | Kannada Prabha

ಸಾರಾಂಶ

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆಯು ಸಮಿತಿಯ ಅಧ್ಯಕ್ಷ ಪೃಥ್ವಿ ಜಯರಾಮ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

 ಆಲೂರು : ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆಯು ಸಮಿತಿಯ ಅಧ್ಯಕ್ಷ ಪೃಥ್ವಿ ಜಯರಾಮ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಎಂ. ರೇವಣ್ಣನವರ ಮಾರ್ಗದರ್ಶನದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪಂಚ ಗ್ಯಾರಂಟಿ ಯೋಜನೆಗಳನ್ನು ಶೇ. 98% ಫಲಾನುಭವಿಗಳು ಯೋಜನೆ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಶೇ. 100ರ ಪ್ರಗತಿ ಸಾಧಿಸಲಾಗುವುದು ಎಂದರು.

ಯುವನಿಧಿ ಯೋಜನೆಯಡಿ ಆಲೂರು ತಾಲೂಕು ವ್ಯಾಪ್ತಿ 244 ಮಂದಿ ನಿರುದ್ಯೋಗಿ ಪದವೀಧರರು ನೋಂದಾಯಿಸಿದ್ದು, 135 ಮಂದಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಕಳೆದ ಡಿಸೆಂಬರ್‌ ತಿಂಗಳಲ್ಲಿ ಒಟ್ಟು 4 ಲಕ್ಷದ 500 ರುಪಾಯಿ ಯುವನಿಧಿ ಫಲಾನುಭವಿಗಳಿಗೆ ಡಿಬಿಟಿ ಮುಖಾಂತರ ಹಣ ಸಂದಾಯವಾದೆ. ಯೋಜನೆಯಿಂದ ಹೊರಗೆ ಉಳಿದಿರುವವರಿಗೆ ಅನುಕೂಲವಾಗಲು ಹೆಚ್ಚು ಪ್ರಚಾರ ಮಾಡಬೇಕು. ಫಲಾನುಭವಿಗಳು ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಸರ್ಕಾರದ ನಿರ್ದೇಶನದ ಪ್ರಕಾರ ಈಗಾಗಲೇ ವಿದ್ಯಾರ್ಥಿಗಳ ನೋಂದಣಿಗಾಗಿ ಪ್ರಚಾರ ಕಾರ್ಯಕ್ರಮಗಳು ನಡೆಯುತ್ತಿದ್ದು, ಅಗತ್ಯವಿರುವ ಪೋಸ್ಟರ್‌, ಬ್ಯಾನರ್‌ಗಳನ್ನು ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರಪಡಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗೃಹಲಕ್ಷ್ಮಿ ಯೋಜನೆ ಅಡಿ ಡಿಸೆಂಬರ್‌ ತಿಂಗಳಲ್ಲಿ 21,392 ಫಲಾನುಭವಿಗಳಿಗೆ 4 ಕೋಟಿ 27 ಲಕ್ಷ 84 ಸಾವಿರ ರುಪಾಯಿ ಹಣ ಜಮಾವಣೆಯಾಗಿದೆ. ಯೋಜನೆಯ ಹೊರಗೆ ಉಳಿದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಅಧಿಕಾರಿಗಳು ಭೇಟಿ ನೀಡಿ ಯೋಜನೆಯ ಲಾಭ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ತಿಳಿಸಿದರು.

ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ವಿತರಿಸುವ 5 ಕೆ.ಜಿ. ಅಕ್ಕಿಯ ಬದಲಾಗಿ ಪ್ರತಿ ಕೆ ಜಿ ಗೆ 34 ರುಪಾಯಿಯಂತೆ ಕುಟುಂಬದ ಪ್ರತಿ ಸದಸ್ಯರಿಗೆ 170 ರು. ಹಣವನ್ನು ಪಡಿತರ ಚೀಟಿಯ ಸದಸ್ಯರ ಅನುಗುಣವಾಗಿ ಡಿಬಿಟಿ ಮುಖಾಂತರ ಹಣ ನೀಡುತ್ತಿದ್ದು, ತಾಲೂಕಿನಲ್ಲಿ ಒಟ್ಟು 22,606 ಅರ್ಹ ಪಡಿತರ ಚೀಟಿ ಫಲಾನುಭವಿಗಳಿಗೆ ಪ್ರತಿ ತಿಂಗಳು 1,15,000ಗಿಂತ ಹೆಚ್ಚು ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಕಳೆದ ತಿಂಗಳಿನಿಂದ ಒಟಿಪಿ ಸೌಲಭ್ಯವನ್ನು ನಿಲ್ಲಿಸಿದ್ದು ಒಟಿಪಿ ಸೌಲಭ್ಯ ಮತ್ತೆ ಪ್ರಾರಂಭ ಮಾಡುವಂತೆ ಸರ್ಕಾರಕ್ಕೆ ಸಮಿತಿ ಪರವಾಗಿ ಮನವಿ ಮಾಡಲಾಗುವುದು ಎಂದರು.

ಶಕ್ತಿ ಯೋಜನೆಯಡಿ ಆಲೂರು ತಾಲೂಕಿನಲ್ಲಿ ಪ್ರತ್ಯೇಕವಾದ ಕೆಎಸ್ಆರ್ಟಿಸಿ ಡಿಪೋ ಇರದ ಕಾರಣ ಹಾಸನದ ಎರಡು ಕೆಎಸ್ಆರ್ಟಿಸಿ ಡಿಪೋಗಳನ್ನು ಒಳಗೊಂಡಂತೆ ಒಟ್ಟು ಡಿಸೆಂಬರ್ ತಿಂಗಳಲ್ಲಿ 18,68,241 ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 53,87,5240 ರು. ಗಳ ಆದಾಯವಾಗಿದೆ.

ಗೃಹ ಜ್ಯೋತಿ ಯೋಜನೆ ಅಡಿ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದು ತಾಲೂಕಿನಲ್ಲಿ ನೋಂದಾಯಿಸಿಕೊಂಡಿರುವ ಒಟ್ಟು 23,481 ಅರ್ಹ ಫಲಾನುಭವಿಗಳಿಗೆ ಯೋಜನೆ ಅಡಿ ಡಿಸೆಂಬರ್‌ ತಿಂಗಳಲ್ಲಿ ಸರ್ಕಾರ 72,64,518 ರು.ಗಳನ್ನು ಭರಿಸುತ್ತಿದೆ ಎಂದರು.

ಸಭೆಯ ನಂತರ ಯುವನಿಧಿ ಯೋಜನೆಯ ಪೋಸ್ಟರ್‌ ಮತ್ತು ಬ್ಯಾನರ್‌ಗಳನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿಯಲ್ಲಿ ಬಿಡುಗಡೆ ಗೊಳಿಸಲಾಯಿತು. ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ದಯಾನಂದ್ ಮಾತನಾಡಿದರು. ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ರುದ್ರಕುಮಾರ್‌, ಯೋಗೇಶ್, ಶಿವೇಗೌಡ, ಯಾಕೂಬ್, ಶಿವಪ್ಪ, ರಂಗನಾಥ್, ಹೇಮಂತ್ ಕುಮಾರ್, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎ ಟಿ ಮಲ್ಲೇಶ್, ಚೆಸ್ಕಾಂನ ವಿದ್ಯುತ್ ತಾಂತ್ರಿಕ ಎಂಜಿನಿಯರ್ ನಾಗವೇಣಿ, ಆಹಾರ ನಿರೀಕ್ಷಕ ಮೋಹನ್ ಕುಮಾರ್‌, ಸಂಚಾರ ನಿಯಂತ್ರಕ ಸಿದ್ದಯ್ಯ ಹಾಗೂ ಕೌಶಲ್ಯ ತರಬೇತಿ ಸಂಸ್ಥೆಯ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ ಅಶೋಕ್ ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ