ಯುವಕರು ಸಾಹಿತ್ಯ,ಸಾಂಸ್ಕೃತಿಕ ಚಟುವಟಿಕೆಯತ್ತ ಆಸಕ್ತರಾಗಿ: ವಿಜಯಾನಂದ ಕಾಶಪ್ಪನವರ

KannadaprabhaNewsNetwork |  
Published : May 25, 2024, 12:50 AM IST
ಈಲಕಲ್ಲ ನಗರದ ಜೋಶಿ ಗಲ್ಲಿಯಲ್ಲಿರುವ ಶಾರದಾ ಮಂದಿರದ ಸ್ಥಾಪನೆಯ ೧೯ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು. | Kannada Prabha

ಸಾರಾಂಶ

ಯುವಕರು ಸಾಹಿತ್ಯ ರಚನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದು ಯುವಕರು ಮೊಬೈಲ್‌ ಎಂಬ ಭೂತದ ಕೈಯಲ್ಲಿ ಸಿಕ್ಕು ಹಾಳಾಗುತ್ತಿದ್ದಾರೆ. ಅದರಿಂದ ಹೊರಬಂದು ಸಾಹಿತ್ಯ ರಚನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ, ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಕಿವಿಮಾತು ಹೇಳಿದರು.

ನಗರದ ಜೋಶಿ ಗಲ್ಲಿಯಲ್ಲಿರುವ ಶಾರದಾ ಮಂದಿರದ ಸ್ಥಾಪನೆಯ ೧೯ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಈ ಶಾರದಾ ಮಂದಿರ ಸ್ಥಾಪನೆಯಿಂದ ಇಳಕಲ್ಲ ನಗರದ ಕೀರ್ತಿ ಪತಾಕೆ ಎತ್ತರಕ್ಕೆ ಹಾರಿದೆ. ಇಂಥ ಮಹಾನ್ ಕಾರ್ಯ ಮಾಡಿದ ಈ ದೇವಸ್ಥಾನದ ಧರ್ಮದರ್ಶಿ ನೀಲಕಂಠ ಕಾಳಗಿ ಅವರ ಕಾರ್ಯ ಮೆಚ್ಚವಂತದ್ದು, ಇಂಥ ಸತ್ಕಾರ್ಯ ಮಾಡಿದ ನೀಲಕಂಠ ಕಾಳಗಿ ಅವರಿಗೆ ಸರ್ಕಾರ ಪ್ರಶಸ್ತಿ ಕೊಟ್ಟು ಗೌರವಿಸಬೇಕು. ಅದಕ್ಕಾಗಿ ನಾನು ಮುಖ್ಯಮಂತ್ರಿಗಳ ಬಳಿ ಚರ್ಚಿಸುವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಗರದ ಖ್ಯಾತ ಉದ್ದಿಮೆದಾರ ವೆಂಕಟೇಶ ಸಾಕಾ ಮಾತನಾಡಿ, ನಮ್ಮ ಈ ಭಾಗದ ಅನೇಕ ಜನರು ತಮ್ಮ ಮಕ್ಕಳ ಅಕ್ಷರ ಅಭ್ಯಾಸಕ್ಕೆಂದು ಶೃಂಗೇರಿಯ ಶಾರದಾ ಮಂದಿರಕ್ಕೆ ಹೋಗುತ್ತಿದ್ದರು. ಇಳಕಲ್ಲ ನಗರದಲ್ಲಿ ಶಾರದಾಂಬೆ ದೇವಸ್ಥಾನ ನಿರ್ಮಾಣ ಆದಾಗಿನಿಂದ ಇಲ್ಲಿಯೇ ಅಕ್ಷರ ಅಭ್ಯಾಸ ಮಾಡಿಸುತ್ತಿದ್ದಾರೆ ಎಂದು ತಿಳಿಸಿದರು. ಸಮಾರಂಭದಲ್ಲಿ ಗೌರವ ಸತ್ಕಾರ ಪಡೆದ ಸೂಳೆಭಾವಿ ಗ್ರಾಮದ ನೇಕಾರ ಧುರೀಣ, ಸಹಕಾರ ರತ್ನ ಪ್ರಶಸ್ತಿ ಪುರಷ್ಕೃತ ರವಿಂದ್ರ ಕಲಬುರ್ಗಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಪ್ರೋ.ವಿ.ಕೆ. ವಂಶಾಕೃತಮಠ ಹಾಗೂ ಇಳಕಲ್ಲಿನ ಸ್ನೇಹರಂಗ ಸಂಸ್ಥೆಯ ಅಧ್ಯಕ್ಷ ಬಸವರಾಜ ಮಠದ ಶಾರದಾ ಮಂದಿರದಿಂದ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದರು.

ಮುನಿಸ್ವಾಮಿ ದೇವಾಂಗಮಠಾ ಸಾನ್ನಿಧ್ಯ ವಹಿಸಿ ಮಾತನಾಡಿದರು. ಇಳಕಲ್ಲಿನ ಶಾರದಾ ಮಂದಿರದ ಧರ್ಮದರ್ಶಿಗಳಾದ ನೀಲಕಂಠ ಕಾಳಗಿ ದೇವಸ್ಥಾನ ನಡೆದು ಬಂದ ದಾರಿಯ ಬಗ್ಗೆ ತಿಳಿಸಿದರು. ಸಮಾರಂಭದಲ್ಲಿ ನಗರಸಭೆ ಸದಸ್ಯರಾದ ಮೌಲಾ ಬಂಡಿವಡ್ಡರ, ಸುರೇಶ ಜಂಗ್ಲಿ, ಅಮೃತ ಬಿಜ್ಜಲ, ಹಿರಿಯರಾದ ಸಂಗಣ್ಣ ಗದ್ದಿ, ಸ್ವರ ಸಿಂಧು ಸಂಸ್ಥೆಯ ಅಧ್ಯಕ್ಷ ಪರುಶರಾಮ ರಾಜೋಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್