ಕಾಂಗ್ರೆಸ್ಸಿನಲ್ಲಿ ಯುವಕರಿಗೆ ಆದ್ಯತೆ: ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork |  
Published : Aug 11, 2025, 12:31 AM IST
ಫೋಟೊ:10ಎಚ್‌ಎನ್‌ಎಲ್2 | Kannada Prabha

ಸಾರಾಂಶ

ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿಯಾಗಿರುವ ಬಿಜೆಪಿಯ ನಡೆ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ.

ಹಾನಗಲ್ಲ: ಯುವ ಕಾಂಗ್ರೆಸ್ ಸಂಘಟನೆ ಭವಿಷ್ಯದ ನಾಯಕರನ್ನು ಸಿದ್ಧಗೊಳಿಸುವ ಸಂಕಲ್ಪದ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಯುವಕರಿಗೆ ಆದ್ಯತೆ ನೀಡುವುದೇ ನಮ್ಮ ಆದ್ಯತೆಯಾಗಿದ್ದು, ಪಕ್ಷ ಸಂಘಟನೆ ಹಾಗೂ ಜನರ ವಿಶ್ವಾಸ ಗಳಿಸುವ ಮೂಲಕ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಕಾರ್ಯ ನಿರ್ವಹಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು.ಇಲ್ಲಿನ ಡಾ. ಬಾಬು ಜಗಜೀವನರಾಂ ಭವನದಲ್ಲಿ ಭಾನುವಾರ ಸಂಜೆ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಅಖಿಲ ಭಾರತ ಯುವ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿಯಾಗಿರುವ ಬಿಜೆಪಿಯ ನಡೆ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಾಕ್ಷಾಧಾರಗಳೊಂದಿಗೆ ಮತಗಳ್ಳತನ ಬಯಲಿಗೆಳೆದಿದ್ದಾರೆ. ಪ್ರತಿ ಬೂತ್ ಮಟ್ಟದಲ್ಲಿಯೂ ಕಾರ್ಯಕರ್ತರು ಹದ್ದಿನ ಕಣ್ಣಿಡಬೇಕಿದೆ. ಮತದಾರರ ಪಟ್ಟಿಯನ್ನು ಅವಲೋಕಿಸಬೇಕಿದೆ. ಆಗ ಮಾತ್ರ ಬಡವರ ಪರ ಸರ್ಕಾರ ಆಡಳಿತಕ್ಕೆ ಬರಲು ಸಾಧ್ಯವಿದೆ ಎಂದು ಹೇಳಿದ ಅವರು, ಪಕ್ಷದ ಸಂಘಟನೆಗೆ ಯುವ ಕಾಂಗ್ರೆಸ್ ಭದ್ರ ಅಡಿಪಾಯ ಎಂದರು.

ಹೊಸ ಆಲೋಚನೆಗಳೊಂದಿಗೆ ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆ ತರುವ ಶಕ್ತಿ ಯುವಕರಲ್ಲಿದೆ. ನಿಂತ ನೀರು ಬಳಕೆಗೆ ಯೋಗ್ಯವಲ್ಲ, ಹಾಗಾಗಿ ಹೊಸ ನೀರು ಬರಬೇಕಿದೆ. ಕಾಂಗ್ರೆಸ್ ಪಕ್ಷ ಯುವಕರನ್ನು ಸಂಘಟನೆಗೆ ಮಾತ್ರ ಬಳಸಿಕೊಳ್ಳದೇ ಸಾಕಷ್ಟು ಅವಕಾಶ ಕಲ್ಪಿಸುವ ಮೂಲಕ ಶಕ್ತಿ ತುಂಬುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಪೂರಕ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಅನಿರೀಕ್ಷಿತವಾಗಿ ನಾವು ಸೋಲಬೇಕಾಯಿತು. ಇದು ಅಚ್ಚರಿ ಮತ್ತು ಆತಂಕಗಳೆರಡನ್ನೂ ಉಂಟು ಮಾಡಿದೆ ಎಂದರು.ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ದೇಸಾಯಿ ಮಾತನಾಡಿ, ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಯುವ ಕಾಂಗ್ರೆಸ್ ಸ್ಥಾಪಿಸಿದರು. ಯುವ ಕಾಂಗ್ರೆಸ್ ಮೂಲಕ ಕೋಟ್ಯಂತರ ಕಾರ್ಯಕರ್ತರು ಸಮಾನತೆ, ಸೌಹಾರ್ದತೆ, ಸಾಮಾಜಿಕ ನ್ಯಾಯದ ಪರವಾಗಿ ಹೋರಾಡುತ್ತಿದ್ದಾರೆ. ನೆರೆ, ಭೂಕಂಪ, ಸಾಂಕ್ರಾಮಿಕ ರೋಗಗಳು ಸೇರಿದಂತೆ ದೇಶಕ್ಕೆ ಸಂಕಷ್ಟ ಎದುರಾದಾಗ ಸೈನಿಕರಂತೆ ಎದೆಯೊಡ್ಡಿ ಹೋರಾಡಿದ್ದಾರೆ ಎಂದರು.ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದರ್ಶನ ಲಮಾಣಿ ಮಾತನಾಡಿ, ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಸಂಘಟನೆಗೆ ಒತ್ತು ನೀಡಲಾಗಿದೆ. ಯುವ ಕಾಂಗ್ರೆಸ್ ಸಂಘಟನೆಯಿಂದ ಬಂದ ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ ಮತ್ತು ಯಾಸೀರ್‌ ಅಹ್ಮದ್ ಖಾನ್ ಪಠಾಣ ಅವರು ಶಾಸಕರಾಗಿದ್ದಾರೆ. ಹಾವೇರಿ ಮತ್ತು ಧಾರವಾಡ ಲೋಕಸಭಾ ಕ್ಷೇತ್ರಗಳಿಗೆ ಯುವ ಕಾಂಗ್ರೆಸ್ ಸದಸ್ಯರನ್ನೇ ಕಾಂಗ್ರೆಸ್ ಅಭ್ಯರ್ಥಿಯಾಗಿಸಿತ್ತು ಎಂದು ಹೇಳಿದ ಅವರು, ಅಧಿಕಾರಕ್ಕಿಂತ ಸೇವಾ ಮನೋಭಾವದಿಂದ ಸಂಘಟನೆಯ ಭಾಗವಾಗುವಂತೆ ಕರೆ ನೀಡಿದರು.ಜಿಲ್ಲಾ ಉಪಾಧ್ಯಕ್ಷರಾದ ಶಿವು ತಳವಾರ, ಪ್ರಸನ್ನ ಹಿರೇಮಠ, ಪ್ರಧಾನ ಕಾರ್ಯದರ್ಶಿ ಲಿಂಗರಾಜ್ ಮಡಿವಾಳರ, ತಾಲೂಕಾಧ್ಯಕ್ಷ ಸಂತೋಷ್ ದುಂಡಣ್ಣನವರ, ಹಾನಗಲ್ಲ ಬ್ಲಾಕ್ ಅಧ್ಯಕ್ಷ ಪ್ರವೀಣ ಹಿರೇಮಠ, ಅಕ್ಕಿಆಲೂರು ಬ್ಲಾಕ್ ಅಧ್ಯಕ್ಷ ಬಾಬು ನಿಕ್ಕಂ ಸೇರಿದಂತೆ ಕಾಂಗ್ರೆಸ್ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಪುರಸಭೆ ಸದಸ್ಯರು, ಮುಖಂಡರು ಇದ್ದರು. ಲೋಹಿತ್ ಕಾಟಣ್ಣನವರ, ಇರ್ಫಾನ್ ಮಿಠಾಯಿಗಾರ ಮಾತನಾಡಿದರು. ಖಾಲಿದ್ ಶೇಷಗಿರಿ ದೇಶಭಕ್ತಿ ಗೀತೆ ಹಾಡಿದರು. ನ್ಯಾಯವಾದಿ ಯಾಸೀರ್‌ಅರಾಫತ್ ಮಕಾನದಾರ ನಿರೂಪಿಸಿದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ