ಕನ್ನಡಪ್ರಭ ವಾರ್ತೆ ಇಳಕಲ್ಲ
ಪಾದಯಾತ್ರೆಗೆ ಇಳಕಲ್ಲನಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಚಾಲನೆ ನೀಡಿ ಯುವಕರೊಂದಿಗೆ ಹೆಜ್ಜೆ ಹಾಕಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಾಂವಿಧಾನಿಕ ರಾಜ್ಯಪಾಲ ಹುದ್ದೆಯ ದುರ್ಬಳಕೆ ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಧಾರ ರಹಿತ ಆರೋಪಗಳಿಗೆ ಅವಕಾಶ ಮಾಡಿಕೊಡುತ್ತಿದೆ. ಮೌಲ್ಯಗಳನ್ನು ಗಾಳಿಗೆ ತೂರುತ್ತಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ನಡೆ ಖಂಡನೀಯ ಎಂದರು.ಕಾನೂನಿನ ಮೂಲಕ ಎಲ್ಲವನ್ನು ಎದುರಿಸುವ ಶಕ್ತಿ ಮುಖ್ಯಮಂತ್ರಿಗಳಿಗಿದೆ. ಆದರೆ, ದೈವ ಕೃಪೆಯೂ ಬೇಕು ಎಂಬ ಉದ್ದೇಶದಿಂದ ಯುವಕರು ಮಾಡುತ್ತಿರುವ ಈ ಪಾದಯಾತ್ರೆ ಶ್ಲಾಘನೀಯ ಎಂದರು.
ಹುನಗುಂದ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿ, ಇಂತಹ ಹತ್ತು ಹಲವು ಆರೋಪಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಸಿದ್ದರಾಮಯ್ಯನವರಿಗೆ ಇದೆ. ಹೆಜ್ಜೇನು ಗೂಡಿಗೆ ಕಲ್ಲೆಸೆಯುವ ದುಸ್ಸಾಹಸವನ್ನು ಬಿಜೆಪಿ -ಜೆಡಿಎಸ್ ಬಿಡಬೇಕು ಎಂದರು.ಈ ವೇಳೆ ಮಾಂತೇಶ, ಬಾಗವಾನ್ ಅಬ್ಬುಹಳ್ಳಿ, ಸದ್ದಾಂ ಇಳಕಲ್ಲ, ಅಮೀರ್ ಇಟಗಿ, ರಜಾಕ್ ಹುಣಚಿಗಿ, ಮಹಾಂತೇಶ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.