ಕುಕನೂರು: ಬೀಡಿ, ಸಿಗರೇಟ್, ಡ್ರಗ್ಸ್ ಸೇರಿ ಇತರ ಮಾದಕ ಮಾದಕ ವಸ್ತುಗಳಿಗೆ ದಾಸರಾಗದೆ ದುಶ್ಚಟಗಳಿಂದ ಯುವ ಸಮುದಾಯ ದೂರವಿರಬೇಕು ಎಂದು ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ಕೆ. ದಾನಕೈ ಹೇಳಿದರು.ತಾಲೂಕಿನ ಭಾನಾಪೂರ ಗ್ರಾಮದ ಸರಕಾರಿ ಫ್ರೌಡಶಾಲೆಯಲ್ಲಿ ಜರುಗಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಉಪನ್ಯಾಸ ನೀಡಿದ ಉಪನ್ಯಾಸಕ ಫಕೀರಪ್ಪ ವಜ್ರಬಂಡಿ, ಅಮುಲು ಬರುವಂತಹ ಮಾದಕ ಪದಾರ್ಥ ಸೇವನೆಗೆ ಅಂಟಿಕೊಂಡು ದೈಹಿಕವಾಗಿ, ಮಾನಸಿಕವಾಗಿ ಅನೇಕ ಕಾಯಿಲೆಗಳಿಗೆ ಒಳಗಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುವುದು ಬೇಡ. ಉತ್ತಮರ ಸಂಘ ಮಾಡಿ ಸರಿ ದಾರಿಯಲ್ಲಿ ಸಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ನಂದಾ ಎಂ. ಧರ್ಮಸ್ಥಳದ ಕಾರ್ಯಗಳಾದ ಮಾಶಾಸನ, ಮಹಿಳೆಯರಿಗೆ ಸಾಲ-ಸೌಲಭ್ಯ, ದೇವಸ್ಥಾನಗಳಿಗೆ ಅನುದಾನ, ಕೆರೆ ಅಭಿವೃದ್ಧಿ ಸೇರಿದಂತೆ ಇನ್ನೂ ಹಲವಾರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಮುಖ್ಯ ಶಿಕ್ಷಕ ನಾಗಪ್ಪ ಅಗಸಿಮಂದಿನ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಆನಂದಕುಮಾರ ಕನ್ನಾರಿ, ಶಿವಾನಂದ ಹೊಸಮನಿ, ಉದಯಕುಮಾರ ತಳವಾರ, ಲಲಿತಾ ನಾಲ್ವಾಡ, ವೀಣಾ ಕುಲಕರ್ಣಿ, ಸತೀಶ ಕಟ್ಟಿಮನಿ, ಸೇವಾ ಪ್ರತಿನಿಧಿ ಲಲಿತಾ ಲಕಮಾಪೂರ ಭಾಗವಹಿಸಿದ್ದರು. ಪ್ರಶಿಕ್ಷಣಾರ್ಥಿಗಳಾದ ನೇತ್ರಾವತಿ, ಶರಣಮ್ಮ ನಿರೂಪಿಸಿದರು.